Advertisement

ಜೂನ್‌ ಸಂಭ್ರಮ: 649 ಮೆ.ಟನ್‌ ದಾಖಲೆ ರಫ್ತು

09:28 AM Jul 13, 2018 | Team Udayavani |

ಬಜಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಫ್ತು ವಿಭಾಗಕ್ಕೆ ಈ ಜೂನ್‌ ತಿಂಗಳು ಶುಭ ಮಾಸ. ಯಾಕೆಂದರೆ, ಜೂನ್‌ನಲ್ಲಿ 649.54 ಮೆ. ಟನ್‌ ತರಕಾರಿ, ಹಣ್ಣು ಹಂಪಲು ಹಾಗೂ ಆಟೋ ಮೊಬೈಲ್‌ ಬಿಡಿ ಭಾಗಗಳನ್ನು ರಫ್ತು ಮಾಡಿ ದಾಖಲೆ ನಿರ್ಮಿಸಿದೆ.ಹೆಚ್ಚಿನ ಉತ್ಪನ್ನಗಳನ್ನು ಗಲ್ಫ್ ದೇಶಗಳಿಗೆ ಕಳಿಸಲಾಗುತ್ತಿದ್ದು, 2013-14ನೇ ಸಾಲಿನಿಂದ ಈ ನಿಲ್ದಾಣದ ಮೂಲಕ ರಫ್ತು ಆರಂಭಿಸಲಾಗಿತ್ತು.

Advertisement

ಆ ಬಳಿಕ ಅನುಕ್ರಮವಾಗಿ 116.62 ಮೆ. ಟನ್‌, 338.92 ಮೆ. ಟನ್‌, 473.88 ಮೆ. ಟನ್‌, 748.16 ಮೆ. ಟನ್‌, 2251.17 ಮೆ. ಟನ್‌ ರಫ್ತು ಮಾಡಿದೆ. 2018-19ರ ಎಪ್ರಿಲ್‌ನಲ್ಲಿ 163.20, ಮೇಯಲ್ಲಿ 255.52 ಹಾಗೂ ಜೂನ್‌ನಲ್ಲಿ 649.54 ಮೆ.ಟನ್‌ ರಫ್ತು ಮಾಡಲಾಗಿದೆ. 
ದುಬಾೖಗೆ ತೆರಳುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌, ಜೆಟ್‌ ಏರ್‌ವೆಸ್‌, ಸ್ಪೆಸ್‌ ಜೆಟ್‌ ಮೂಲಕ ದಮಾಮ್‌, ದೋಹಾ, ಬಹ್ರೈನ್‌ಗಳಿಗೆ, ಏರ್‌ ಇಂಡಿಯಾ ಮೂಲಕ ಅಬುಧಾಬಿಗೆ ಉತ್ಪನ್ನಗಳನ್ನು ಕಳಿಸ ಲಾಗುತ್ತಿದೆ. ಈ ತಿಂಗಳಲ್ಲಿ ದಿನಕ್ಕೆ ಸರಾ ಸರಿ 25ರಿಂದ 30 ಮೆ. ಟನ್‌ ತರಕಾರಿ ಹಾಗೂ ಹಣ್ಣುಹಂಪಲು ರಫ್ತಾಗಿದೆ. ಒಂದೇ ದಿನ ಗರಿಷ್ಠ 35 ಮೆ. ಟನ್‌ ಕಳಿಸಿದ ದಾಖಲೆಯೂ ಇದೆ. ಸರಕು ಸಾಗಣೆ  ಪ್ರಯಾಣಿಕರ ಸಂಖ್ಯೆ  ಅವ ಲಂಬಿಸಿದೆ. ಕಡಿಮೆ ಜನರಿದ್ದಾಗ ಹೆಚ್ಚು ಸರಕು ಕಳಿಸಬಹುದು.

24×7 ಸೇವೆಯಿಂದ ಇನ್ನಷ್ಟು ಸಾಧ್ಯ
ಈ ನಿಲ್ದಾಣದಲ್ಲಿ 24×7 ವಿಮಾನಗಳ ಸೇವೆ ಆರಂಭ ಮತ್ತು ವಿದೇಶೀ ಸಂಸ್ಥೆ
ಗಳ ಯಾನ ಆರಂಭವಾದರೆ ರಫ್ತು ಹೆಚ್ಚಲಿದೆ. ಈಗಿನ ಪರಿಸ್ಥಿತಿಯಲ್ಲಿ ಕೆಲವು ವಿಮಾನಗಳ ವ್ಯತ್ಯಯದಿಂದ ಸ್ವಲ್ಪ ತೊಂದರೆ ಆಗುತ್ತಿದೆ.  

ಸ್ಥಳೀಯರ ನಿರಾಸಕ್ತಿ
ದಕ್ಷಿಣ ಕನ್ನಡ ಜಿಲ್ಲೆಯ ತರಕಾರಿಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆ ಇದ್ದರೂ ಸ್ಥಳೀಯ ಕೃಷಿಕರು ಹಾಗೂ ಏಜೆನ್ಸಿಗಳು ರಫ್ತಿನತ್ತ ಮನಸ್ಸು ಮಾಡಿಲ್ಲ. ಈಗ ರಫ್ತಾಗುತ್ತಿರುವ ಹಣ್ಣು-ತರಕಾರಿಗಳೆಲ್ಲವೂ ಹೊರ ಜಿಲ್ಲೆ, ರಾಜ್ಯಗಳವು. ಬೆಂಗಳೂರು, ತಮಿಳುನಾಡಿನ ಒಟಂಚತ್ರ, ಆಂಧ್ರದ ಗಡಿಭಾಗದಿಂದ ಹೆಚ್ಚಾಗಿ ಬರುತ್ತಿದೆ. ಈ ಬಾರಿ ಕೋಯಿಕ್ಕೋಡ್‌ ಹಾಗೂ ಕೊಚ್ಚಿ ವಿಮಾನ ನಿಲ್ದಾಣದಿಂದ ಕಳಿಸಲಾಗುತ್ತಿದ್ದ ತರಕಾರಿಗಳನ್ನು ಮಂಗಳೂರು ಮೂಲಕ ರಫ್ತು ಮಾಡಲಾಗಿದೆ. ಮೀನು ನಿರ್ಯಾತಕ್ಕೆ ಅವಕಾಶ ಇದ್ದರೂ ಪ್ಯಾಕಿಂಗ್‌ ವೇಳೆ ಬಳಸುವ ಮಂಜುಗಡ್ಡೆ ನೀರಾಗುವ ಕಾರಣ ವಿಮಾನ ಸಂಸ್ಥೆಗಳು ಒಪ್ಪುತ್ತಿಲ್ಲ ಎನ್ನಲಾಗಿದೆ. ಬೈಕಂಪಾಡಿಯಿಂದ ಆಟೋಮೊಬೈಲ್‌ ಬಿಡಿಭಾಗ ಮಾತ್ರ ತಿಂಗಳಿಗೊಮ್ಮೆ ರಫ್ತಾಗುತ್ತಿರುವುದು ಬಿಟ್ಟರೆ ಜಿಲ್ಲೆಯಿಂದ ಬೇರೇನೂ ಕಳಿಸಲಾಗುತ್ತಿಲ್ಲ.

ರಫ್ತು ಹೆಚ್ಚಳಕ್ಕೇನು ಮಾಡಬಹುದು?
ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ ಈ ಬಗ್ಗೆ ಆಸಕ್ತಿ ತೋರಿ ತರಕಾರಿ ಬೆಳೆಗಾರರ ಸಹಕಾರ ಸಂಸ್ಥೆ ಯನ್ನು ಸ್ಥಾಪಿಸಬೇಕು. ರಫ್ತಿನ ಬಗ್ಗೆ ಕೃಷಿಕರಿಗೆ ಮಾಹಿತಿ, ಪ್ಯಾಕೇಜ್‌ ವಿಧಾನ, ಏಜೆನ್ಸಿಗಳ ಸಂಪರ್ಕ ಇತ್ಯಾದಿ ಮಾಹಿತಿ ನೀಡಬೇಕು. ಗಲ್ಫ್  ದೇಶಗಳಲ್ಲಿ ಅಮದು ಏಜೆನ್ಸಿಗಳನ್ನು ಸ್ಥಾಪಿಸ ಬೇಕು. ಇದರಿಂದ ನಮ್ಮ, ದೇಶದ ಅರ್ಥಿಕ ಪರಿಸ್ಥಿತಿ ಸುಧಾರಣೆ, ಉದ್ಯೋಗ ಸೃಷ್ಟಿ ಸಾಧ್ಯ. 24*7 ವಿಮಾನಗಳ ಸೇವೆಯ ಅಗತ್ಯವೂ ಇದೆ.
 - ಕೆ.ಎ. ಶ್ರೀನಿವಾಸನ್‌
ವಿಮಾನ ನಿಲ್ದಾಣದ ಕಾರ್ಗೊ ಮ್ಯಾನೇಜರ್‌

Advertisement

*ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next