Advertisement

6 ಜಿಲ್ಲೆಗಳಲ್ಲಿ ದಾಖಲೆ ಚಳಿ!

06:00 AM Oct 31, 2018 | Team Udayavani |

ಬೆಂಗಳೂರು: ರಾಜ್ಯದ ಆರು ಜಿಲ್ಲೆಗಳಲ್ಲಿ ಒಂದೇ ದಿನದಲ್ಲಿ ಹಿಂದೆಂದಿಗಿಂತ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ತೀವ್ರ ಚಳಿಯಿಂದ ಆ ಪ್ರದೇಶಗಳು ಮಂಗಳವಾರ ಅಕ್ಷರಶಃ ಗಡಗಡ ನಡುಗಿವೆ. ಮೈಸೂರು, ವಿಜಯಪುರ, ಧಾರವಾಡ, ಹಾವೇರಿ, ಚಾಮರಾಜನಗರ, ದಾವಣಗೆರೆಯಲ್ಲಿ ಬೆಳಗ್ಗೆ 8.30ಕ್ಕೆ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಈ ಆರೂ ಜಿಲ್ಲೆಗಳು ಅಕ್ಟೋಬರ್‌ನಲ್ಲಿ ಈ ಹಿಂದೆ ಇದ್ದ ಅತಿ ಕನಿಷ್ಠ ಉಷ್ಣಾಂಶದ ಎಲ್ಲ ದಾಖಲೆಗಳನ್ನೂ ಸರಿಗಟ್ಟಿವೆ. ಅದರಲ್ಲೂ ವಿಜಯಪುರ 121 ವರ್ಷಗಳ ಇತಿಹಾಸವನ್ನು ನುಚ್ಚುನೂರು ಮಾಡಿದೆ. ಅಲ್ಲಿ ಮಂಗಳವಾರ ಕನಿಷ್ಠ 11.8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇತ್ತು. ಈ ಹಿಂದೆ ಅಂದರೆ 1897ರ ಅ. 31ರಂದು 12.2 ಡಿಗ್ರಿ ಸೆಲ್ಸಿಯಸ್‌ ಇತ್ತು. ಇದು ಈವರೆಗೆ ಸಾರ್ವಕಾಲಿಕ ದಾಖಲೆಯಾಗಿತ್ತು. ಅದೇ ರೀತಿ, ಮೈಸೂರಿನಲ್ಲಿ 11.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, 1974ರ ಅ. 31ರಂದು ಇಲ್ಲಿ ಅತಿ ಕನಿಷ್ಠ ಉಷ್ಣಾಂಶ 12.9 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಉಳಿದಂತೆ ಚಾಮರಾಜನಗರ 12 ಡಿಗ್ರಿ, ದಾವಣಗೆರೆ 12.3 ಡಿಗ್ರಿ ಮತ್ತು ಹಾವೇರಿ 13 ಡಿಗ್ರಿ ಉಷ್ಣಾಂಶ ಇದ್ದು, 18 ವರ್ಷಗಳ ದಾಖಲೆ ಸರಿಗಟ್ಟಿವೆ.

Advertisement

ಒಣಹವೆ ಕಾರಣ: ಕನಿಷ್ಠ ಉಷ್ಣಾಂಶಕ್ಕೆ ಒಣಹವೆ ಇರುವುದು ಮುಖ್ಯ ಕಾರಣವಾಗಿದ್ದು, ಇದೇ ಹಿನ್ನೆಲೆಯಲ್ಲಿ ಆರು ಜಿಲ್ಲೆಗಳ ಪೈಕಿ ನಾಲ್ಕು ಜಿಲ್ಲೆಗಳು ಅತಿ ಹೆಚ್ಚು ತಾಪಮಾನ ಇರುವ ಉತ್ತರ ಕರ್ನಾಟಕದಲ್ಲೇ ಬರುತ್ತವೆ. ಉಳಿದೆರಡು ದಕ್ಷಿಣ ಒಳನಾಡಿನಲ್ಲಿ ಬರುತ್ತವೆ. ಸುಮಾರು ದಿನಗಳಿಂದ ಮಳೆ ಆಗಿಲ್ಲ; ಮಳೆಗೆ ಪೂರಕವಾದ ಸನ್ನಿವೇಶಗಳೂ ಸೃಷ್ಟಿಯಾಗಿಲ್ಲ. ಇದರಿಂದ ವಾತಾವರಣ ದಲ್ಲಿ ತೇವಾಂಶ ಇಲ್ಲ. ಒಣಹವೆ ಇರುವುದರಿಂದ ಭೂಮಿಗೆ ಬೀಳುವ ಸೂರ್ಯನ ಕಿರಣಗಳು, ಪ್ರತಿಫ‌ಲನಗೊಂಡು ಹೊರಹೋಗುತ್ತವೆ. ಒಂದು ವೇಳೆ ತೇವಾಂಶ ಇದ್ದರೆ, ಈ ಕಿರಣಗಳನ್ನು ಹಿಡಿದಿಡುತ್ತವೆ. ಈ ಕಾರ್ಯ ಆಗದೆ ಇರುವುದು ಕನಿಷ್ಠ ಉಷ್ಣಾಂಶಕ್ಕೆ ಕಾರಣವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್‌. ಪಾಟೀಲ ಸ್ಪಷ್ಟಪಡಿಸಿದರು. ಈ ಮಧ್ಯೆ ಇಡೀ ರಾಜ್ಯದ ಅಂಕಿ-ಅಂಶಗಳನ್ನು ತೆಗೆದುಕೊಂಡರೆ ಮಂಗಳವಾರ ಮೈಸೂರಿನಲ್ಲಿ ಅತಿ ಕನಿಷ್ಠ 11.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 36.4 ಡಿಗ್ರಿ ಸೆಲ್ಸಿಯಸ್‌ ಇತ್ತು. ಬುಧವಾರ ಕೂಡ ಇದೇ ವಾತಾವರಣ ಇರಲಿದೆ ಎಂದು ಇಲಾಖೆ ತಿಳಿಸಿದೆ.

ನ. 1ಕ್ಕೆ ಹಿಂಗಾರು ಪ್ರವೇಶ?: ಈ ನಡುವೆ ನವೆಂಬರ್‌ 1ರಂದು ರಾಜ್ಯಕ್ಕೆ ಈಶಾನ್ಯ ಮಾರುತಗಳು ಪ್ರವೇಶಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು-ಮೂರು ದಿನಗಳಲ್ಲಿ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನ ಆಯ್ದ ಭಾಗಗಳಲ್ಲಿ ಹಗುರವಾದ ಮಳೆ ಆಗಲಿದೆ ಎಂದು ಸಿ.ಎಸ್‌. ಪಾಟೀಲ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next