Advertisement

ಸಾಲ ಮನ್ನಾಕ್ಕೆ ಇಂದಿನಿಂದ ದಾಖಲೆ ಸಂಗ್ರಹ

02:35 PM Dec 15, 2018 | Team Udayavani |

ರಾಯಚೂರು: ರಾಜ್ಯದ ರೈತರು ಮಾಡಿರುವ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಚಾಲನೆ ನೀಡಿರುವ ಸರ್ಕಾರ ಇಂದಿನಿಂದ ಅರ್ಹ ಫಲಾನುಭವಿಗಳಿಂದ ದಾಖಲೆ ಸಂಗ್ರಹಕ್ಕೆ ಸೂಚನೆ ನೀಡಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಹಕಾರಿ ಬ್ಯಾಂಕ್‌ಗಳಲ್ಲಿ ಫಲಾನುಭವಿ ಸಾಲ ಮನ್ನಾ ಪ್ರಕ್ರಿಯೆ ಶುರುವಾಗಿದೆ. ಜಿಲ್ಲೆಯ 67 ಖಾತೆಗಳಿಗೆ 45.35 ಲಕ್ಷ ರೂ. ಹಣ ಜಮಾ ಮಾಡಲಾಗಿದೆ. ಈಗ ವಾಣಿಜ್ಯ ಬ್ಯಾಂಕ್‌ಗಳ ಫಲಾನುಭವಿಗಳಿಂದ ದಾಖಲೆ ಸಲ್ಲಿಸಲಾಗುತ್ತಿದೆ. ಜಿಲ್ಲೆಯ 190 ಶಾಖೆಗಳಲ್ಲಿ 1,23,462 ರೈತರು ಫಲಾನುಭವಿಗಳಿದ್ದಾರೆ.

ಅದೇ ರೀತಿ ಸಹಕಾರಿ ಬ್ಯಾಂಕ್‌ಗಳಲ್ಲಿ 7200 ಫಲಾನುಭವಿಗಳಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರಾಜ್ಯದ ಜಿಲ್ಲೆಗಳಲ್ಲಿ ರಾಯಚೂರು ಮೂರನೇ ಸ್ಥಾನದಲ್ಲಿದೆ ಎಂದು ವಿವರಿಸಿದರು. ಸಾಲ ಮನ್ನಾ ಯೋಜನೆ ವ್ಯಾಪ್ತಿಗೆ ಬರುವ ರೈತರು ತಮ್ಮ ಖಾತೆಗಳಿರುವ ಬ್ಯಾಂಕ್‌ಗಳಿಗೆ ತೆರಳಿ ಆಧಾರ್‌, ಜಮೀನಿನ ಪಹಣಿ ಹಾಗೂ ಪಡಿತರ ಚೀಟಿ ನಕಲು ಪ್ರತಿ ಸಲ್ಲಿಸಬೇಕು. ಇದಕ್ಕಾಗಿ ಎಲ್ಲ ಬ್ಯಾಂಕ್‌ ಗಳಲ್ಲೂ ಪ್ರತ್ಯೇಕ ಕೌಂಟರ್‌ ಆರಂಭಿಸಲಾಗುವುದು. ಜ.31ರ ವರೆಗೆ ಕಾಲಮಿತಿ ನಿಗದಿ ಮಾಡಲಾಗಿದೆ. ದಾಖಲೆಗಳಲ್ಲಿ ಹೊಂದಿಕೆ ಆಗದಿದ್ದಲ್ಲಿ ಅಂಥ ರೈತರು ಸಾಲ ಮನ್ನಾ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ವಿವರಿಸಿದರು.

ದಾಖಲೆ ಸಲ್ಲಿಸಿದ ರೈತರಿಗೆ ಟೋಕನ್‌ ನೀಡಲಾಗುವುದು. ನಂತರ ದಾಖಲೆ ಪರಿಶೀಲನೆ ವೇಳೆ ದಾಖಲೆಗಳ ಆಧಾರದ ಮೇಲೆ ಅಂಗೀಕೃತಗೊಳಿಸಲಾಗುವುದು. ಸಾಲ ಪಡೆಯಲು ಸಲ್ಲಿಸಿದ ಪಹಣಿ, ಫಲಾನುಭವಿ ಹೆಸರು, ಪಡಿತರ ಚೀಟಿ ಹಾಗೂ ಆಧಾರ್‌ ಎಲ್ಲವೂ ಸಾಮ್ಯತೆ ಇರಬೇಕು. ಒಂದು ವೇಳೆ ತಾಳೆ ಆಗದಿದ್ದಲ್ಲಿ ಆಯಾ ತಹಶೀಲ್ದಾರ್‌ ನೇತೃತ್ವದಲ್ಲಿ ರಚಿಸಿದ ಸಮಿತಿ ಪರಿಶೀಲನೆ ಮಾಡಿ ಅವರು ಯೋಜನೆಗೆ ಅರ್ಹರೋ ಅಲ್ಲವೋ ಎಂಬುದನ್ನು ದೃಢೀಕರಿಸುವರು ಎಂದು
ವಿವರಸಿದರು.

ಜಿಲ್ಲೆಯ ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕ್‌ಗಳ 190 ಶಾಖೆಗಳಲ್ಲಿ 1,23,462 ರೈತರು 1600 ಕೋಟಿಗಿಂತ ಅಧಿಕ ಸಾಲ ಪಡೆದಿದ್ದಾರೆ. ಇದರಲ್ಲಿ ಎರಡು ಲಕ್ಷ ರೂ. ಮಾತ್ರ ಸಾಲ ಮನ್ನಾ ಆಗಲಿದೆ. 2017 ಡಿ.31ರೊಳಗೆ ಪಡೆದ ಸಾಲಗಳು ಮಾತ್ರ ಅನ್ವಯವಾಗಲಿವೆ. ಪ್ರತಿ ನಿತ್ಯ ಕೇವಲ 40 ರೈತರಿಂದ ದಾಖಲೆ ಪಡೆದು ಹೆಸರು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯ ಎಲ್ಲ ರೈತರ ನೋಂದಣಿ ಜ.31ರೊಳಗೆ ಮುಗಿಸಲಾಗುವುದು ಎಂದು ತಿಳಿಸಿದರು.

Advertisement

ಸಹಕಾರಿ ಬ್ಯಾಂಕ್‌ಗೆ ಆದ್ಯತೆ: ಒಬ್ಬ ರೈತರು ಅಥವಾ ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಒಂದು ವೇಳೆ ಸಹಕಾರಿ ಬ್ಯಾಂಕ್‌ನಲ್ಲಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದರೆ, ಸಹಕಾರಿ ಬ್ಯಾಂಕ್‌ ಸಾಲ ಮಾತ್ರ ಮನ್ನಾ ಆಗಲಿದೆ. ಸಹಕಾರಿ ಬ್ಯಾಂಕ್‌ಗಳಲ್ಲಿ 52 ಸಾವಿರ ಫಲಾನುಭವಿಗಳಿದ್ದು, ಈಗಾಗಲೇ 7200 ಫಲಾನುಭವಿಗಳು ಅರ್ಹತೆ ಪಡೆದಿದ್ದಾರೆ. ಉಳಿದ ರೈತರ ನೋಂದಣಿ ಕಾರ್ಯ ನಡೆದಿದೆ ಎಂದು ಎಡಿಸಿ ತಿಳಿಸಿದರು.

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ರಂಗನಾಥ ನೂಲಿಕರ್‌, ಸಹಕಾರಿ ಇಲಾಖೆ ಸಹಾಯಕ ನಿಬಂಧಕ ತಿಪ್ಪಣ್ಣ, ಆರ್‌ಡಿಸಿಸಿ ಪ್ರಧಾನ ವ್ಯವಸ್ಥಾಪಕ ಶ್ರೀಕಾಂತ ಸುದ್ದಿಗೋಷ್ಠಿಯಲ್ಲಿದ್ದರು. 

ಸರ್ಕಾರ ಸಾಲಮನ್ನಾ ಪ್ರಕ್ರಿಯೆ ಆರಂಭಿಸಿದ್ದು, ಈಗ ಫಲಾನುಭವಿಗಳ ಹೆಸರು ನೋಂದಣಿ ಆರಂಭಿಸಲಿದೆ. ಆನ್‌ಲೈನ್‌ನಲ್ಲಿ ಮಾಹಿತಿ ದಾಖಲಿಸಲಾಗುವುದು. ಅದರ ಜತೆಗೆ ಫಲಾನುಭವಿ ಕೂಡ ಸ್ಪಷ್ಟೀಕರಣ ನೀಡಬೇಕಿದೆ. ಈಗಾಗಲೇ ಸಹಕಾರಿ ಸಂಘದ ಬ್ಯಾಂಕ್‌ಗಳಲ್ಲಿ ಕೆಲ ರೈತರ ಸಾಲ ಮನ್ನಾ ಆಗಿದೆ. ದಾಖಲೆ ಪರಿಶೀಲನೆ ಕಾರ್ಯ ಮುಗಿದಂತೆಲ್ಲ ಸಾಲಮನ್ನಾ ಆಗಲಿದೆ. 
 ಗೋವಿಂದರೆಡ್ಡಿ, ಅಪರ ಜಿಲ್ಲಾಧಿಕಾರಿ

ತಹಶೀಲ್ದಾರ್‌ ನೇತೃತ್ವದ ಸಮಿತಿ ರೈತರು ನೋಂದಣಿ ಮಾಡಿದ ಬಳಿಕ ಯಾವುದಾದರೂ ತಗಾದೆಗಳಿದ್ದಲ್ಲಿ ಅಂಥ
ದಾಖಲೆಗಳ ಪರಿಶೀಲನೆಗಾಗಿ ತಹಶೀಲ್ದಾರ್‌ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಆ ಸಮಿತಿ ಮತ್ತೂಮ್ಮೆ ಪರಾಮರ್ಶೆ ನಡೆಸಿ ಅರ್ಹರೋ ಅಲ್ಲವೋ ಎನ್ನುವುದು ನಿರ್ಧರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next