ನವದೆಹಲಿ: ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ವರ್ಗ(ಇಡಬ್ಲ್ಯೂಎಸ್)ಗಳಿಗೆ ಶೇ.10 ಮೀಸಲಾತಿ ನೀಡಲು ಇರುವ ಮಾನದಂಡಗಳನ್ನು ಮರುಪರಿಶೀಲಿಸಲು ಸರ್ಕಾರವು ತಜ್ಞರ ಸಮಿತಿಯೊಂದನ್ನು ರಚಿಸಲಿದೆ ಎಂದು ಮೂಲಗಳು ತಿಳಿಸಿವೆ.
ಮೀಸಲಾತಿಗೆ ಸಂಬಂಧಿಸಿದ ನೋಡಲ್ ಸಚಿವಾಲಯವಾಗಿರುವ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಮುಂದಿನ ವಾರವೇ ತಜ್ಞರ ಸಮಿತಿಯನ್ನು ರಚಿಸುವ ಸಾಧ್ಯತೆಯಿದೆ. ಶೇ.10 ಮೀಸಲಾತಿ ನೀಡಲು ಇರುವಂಥ ಮಾನದಂಡಗಳನ್ನು ಮರುಪರಿಶೀಲಿಸಿ, 4 ವಾರಗಳೊಳಗಾಗಿ ಈ ಸಮಿತಿಯು ವರದಿ ನೀಡಲಿದೆ.
ಅಗತ್ಯಬಿದ್ದರೆ, ಮಾನದಂಡಗಳನ್ನು ಪರಿಷ್ಕರಿಸಲಾಗುತ್ತದೆ ಎಂದು ಸಚಿವಾಲಯದ ಕಾರ್ಯದರ್ಶಿ ಆರ್. ಸುಬ್ರಹ್ಮಣ್ಯನ್ ಹೇಳಿದ್ದಾರೆ.
ಆರ್ಥಿಕವಾಗಿ ದುರ್ಬಲ ವರ್ಗದವರು ಎಂದು ಪರಿಗಣಿಸಲು ವಾರ್ಷಿಕ 8 ಲಕ್ಷ ರೂ.ಗಳ ಆದಾಯ ಮಿತಿ ಹೇರಿರುವುದನ್ನು ಮರುಪರಿಶೀಲಿಸಲು ಸಿದ್ಧರಿದ್ದೇವೆ ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರಿಕೆ ಮಾಡಿತ್ತು.
ಇದನ್ನೂ ಓದಿ:ಬಿಜೆಪಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಿಲ್ಲ: ಧ್ರುವನಾರಾಯಣ