Advertisement

ದೇಗುಲಗಳಲ್ಲಿ ಎಲ್ಲರಿಗೂ ಮುಕ್ತ ಪ್ರವೇಶಕ್ಕೆ ಶಿಫಾರಸು

09:47 PM Dec 20, 2022 | Team Udayavani |

ಸುವರ್ಣ ವಿಧಾನಸೌಧ: ರಾಜ್ಯ ಮುಜರಾಯಿ ದೇವಸ್ಥಾನಗಳ ಪ್ರವೇಶ ದ್ವಾರದಲ್ಲಿ ದೇವಸ್ಥಾನದ ಒಳಗೆ ಎಲ್ಲ ಜಾತಿಯವರಿಗೂ ಮುಕ್ತ ಅವಕಾಶ ಇರುತ್ತದೆ ಎಂಬ ಬೋರ್ಡ್‌ ಅಳವಡಿಸುವ ಮೂಲಕ ಎಲ್ಲರಿಗೂ ದೇವಸ್ಥಾನದ ಒಳಗೆ ಪ್ರವೇಶಿಸಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ವಿಧಾನ ಮಂಡಲ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 6ನೇ ವರದಿಯಲ್ಲಿ ಸರ್ಕಾರಕ್ಕೆ ಈ ಶಿಫಾರಸು ಮಾಡಿದೆ.
ಮಂಗಳವಾರ ವಿಧಾನಸಭೆಯಲ್ಲಿ ಸಮಿತಿಯ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ವರದಿಯನ್ನು ಮಂಡಿಸಿದರು.

Advertisement

ರಾಜ್ಯದಲ್ಲಿ ಪರಿಶಿಷ್ಟ ಹಾಗೂ ಇತರೆ ಜನಾಂಗದವರು ಶಾಂತಿ ಸೌಹಾರ್ದತೆಯಿಂದ ಇರಲು ಆಯಾ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದಾಗ ದಲಿತರ ಮನೆಗೆ ಹೋಗಿ ಅರಿವು ಮೂಡಿಸುವ ಕೆಲಸ ಆಗಬೇಕು. ಈ ಮೂಲಕ ಜಿಲ್ಲಾಡಳಿತ ಪರಿಶಿಷ್ಟರ ಸಹಕಾರಕ್ಕೆ ಬರಲಿದೆ ಎಂಬ ಜಾಗೃತಿ ಮೂಡಿಸುವ ಅಗತ್ಯವಿದೆ. ಅತಿ ಸೂಕ್ಷ್ಮ ಪ್ರದೇಶಗಳಾದ ಗ್ರಾಮಗಳಿಗೆ ಪೊಲೀಸರು ಆಗಾಗೆ ಭೇಟಿ ನೀಡಬೇಕು. ಗ್ರಾಮದ ಜನರಲ್ಲಿ ವಿಶ್ವಾಸ ಮೂಡಿಸುವ ಜತೆಗೆ ಪರಿಶಿಷ್ಟರು ಹಾಗೂ ಸಾಮಾನ್ಯರ ನಡುವೆ ಸೌಹಾರ್ದ ಜೀವನ ಸಾಗಬೇಕು. ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿಸುವ ನಿಟ್ಟಿನಲ್ಲಿ ಪೊಲೀಸ್‌ ಠಾಣೆಗಳಿಂದ ಅತ್ಯಂತ ಸೂಕ್ಷ್ಮ ಪ್ರದೇಶದ ಗ್ರಾಮಗಳಿಗೆ ಆಗಾಗೆ ಗಸ್ತು ನಡೆಸುತ್ತಿರಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಎಸ್ಸಿ, ಎಸ್ಟಿಗಳ ಮೇಲಿನ ದೌರ್ಜನ್ಯ ಪ್ರಕರಣ ಪತ್ತೆ ಹಚ್ಚಿ, ಶಿಕ್ಷೆ ವಿಧಿಸುವ ಶೇಕಡವಾರು ಪ್ರಮಾಣ ಹೆಚ್ಚಿರುವ ರಾಜ್ಯಗಳಿಗೆ ಸಮಾಜ ಕಲ್ಯಾಣ, ಒಳನಾಡು, ನಾಗರಿಕ ಹಕ್ಕು ನಿರ್ದೇಶನಾಲಯದ ಅಧಿಕಾರಿಗಳ ತಂಡ ಭೇಟಿ ನೀಡಿ ಅಧ್ಯಯನ ನಡೆಸಿ, ಕರ್ನಾಟಕದಲ್ಲೂ ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಕ್ರಮವಹಿಸಬೇಕು.

ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದರೆ ಕಠಿಣಕ್ರಮ
ನೈಜತೆಯನ್ನು ಪರಿಶೀಲಿಸದೇ ಸುಳ್ಳು ಜಾತಿ ಪ್ರಮಾಣಪತ್ರ ನೀಡುವ ಅಧಿಕಾರಿ, ನೌಕರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಐಐಟಿ, ಐಐಎಂ ಮೊದಲಾದ ರಾಷ್ಟ್ರಮಟ್ಟದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ಬದಲಾಗಿ ನಾಲ್ಕು ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು. ಪಿಎಚ್‌.ಡಿ ಮಾಡುವವರಿಗೆ ವಿಶ್ವವಿದ್ಯಾಲಯಗಳಲ್ಲಿ 35 ಸಾವಿರ ರೂ. ಏಕರೂಪ ಶಿಷ್ಯ ವೇತನ ನೀಡಬೇಕು. ಇದರ ವೆಚ್ಚವನ್ನು ವಿದ್ಯಾರ್ಥಿ ಕಲ್ಯಾಣ ನಿಧಿ ಹಾಗೂ ಇಲಾಖೆಯಿಂದ ಸಮಾನವಾಗಿ ಭರಿಸಬೇಕು. ಆಯಾ ಜಿಲ್ಲೆಗಳಲ್ಲೆ ವಿದ್ಯಾರ್ಥಿಗಳಿಗೆ ವಸತಿ ಶಾಲೆಯಲ್ಲಿ ಪ್ರವೇಶ ಕಲ್ಪಿಸಬೇಕು ಎಂದು ವರದಿಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next