ವಿಧಾನ ಪರಿಷತ್ತು: ಸ್ತ್ರೀ ಶಕ್ತಿ ಯೋಜನೆ ಬಲಪಡಿಸಲು ಸ್ತ್ರೀಶಕ್ತಿ ಸಂಘಗಳು ಉತ್ಪಾದಿಸುವ ಉತ್ಪನ್ನಗಳ ಮಾರಾಟಕ್ಕೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಪರವಾಗಿ ವೀಣಾ ಅಚ್ಚಯ್ಯ ವರದಿ ಮಂಡಿಸಿದ್ದು, ಸ್ತ್ರೀಶಕ್ತಿ ಸಂಘದವರಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು.
ಸ್ತ್ರೀಶಕ್ತಿ ಸಂಘಗಳು ಉತ್ಪಾದಿಸುವ ಉತ್ಪನ್ನಗಳನ್ನು ಆನ್‌ಲೈನ್ ಮುಖಾಂತರ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಗುರುತಿನ ಚೀಟಿ ನೀಡಬೇಕು. ಹೆಣ್ಣು ಮಕ್ಕಳಿಗೆ ಕೌಶಲ್ಯ ತರಬೇತಿ ನೀಡಿ, ಅವರಿಗೆ ಉದ್ಯೋಗ ಕಲ್ಪಿಸಿಕೊಡುವುದು ಮಾತ್ರವಲ್ಲದೆ, ಸ್ವಂತ ಉದ್ಯೋಗ ಸೃಷ್ಟಿಸಿಕೊಳ್ಳುವ ಬಗ್ಗೆಯೂ ಆದ್ಯತೆ ನೀಡಬೇಕು.
ಇದರ ಜತೆಗೆ ಸ್ತ್ರೀಶಕ್ತಿ ಸಂಘಗಳು ಬೆಳೆಯುವಂತಾಗಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳ ಬೇಕು ಎಂದು ವರದಿಯಲ್ಲಿ ಹೇಳಿದೆ. ದೇವದಾಸಿ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು, ಕರ್ನಾಟಕ ಹಣಕಾಸು ಸಂಸ್ಥೆ ಮೂಲಕ ಕೈಗಾರಿಕೆ ಸ್ಥಾಪನೆ ಮಾಡುವ ಮಹಿಳೆಯರಿಗೆ 2 ಕೋಟಿ ರೂ. ಪ್ರಮಾಣವನ್ನು 10 ಕೋಟಿಗೆ ಹೆಚ್ಚಳ ಮಾಡಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು.
ಬೀದಿಬದಿ ವ್ಯಾಪಾರ ಮಾಡುತ್ತಿರುವ ಮಹಿಳೆಯರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು 5ರಿಂದ 10 ಸಾವಿರ ರೂ.ಗೆ ಹೆಚ್ಚಳ ಮಾಡಬೇಕು. ಲೈಂಗಿಕ ಕಿರುಕುಳ ತಡೆಗೆ ವಿಶೇಷ ಅಧಿಕಾರಿಗಳನ್ನು ನಿಯೋಜನೆ ಮಾಡಿ ತ್ವರಿತವಾಗಿ ಪ್ರಕರಣ ಗಳನ್ನು ಇತ್ಯರ್ಥ ಮಾಡಬೇಕು. ಹಿರಿಯ ನಾಗರಿಕರಿಗಾಗಿ ಹಗಲು ಯೋಗಕ್ಷೇಮ ಕೇಂದ್ರಗಳನ್ನು ಆರಂಭಿಸಬೇಕು. ವೃದ್ಧಾಶ್ರಮಗಳಿಗೆ ನೀಡಲಾಗುತ್ತಿರುವ ಅನುದಾನವನ್ನು 8 ರಿಂದ 10 ಲಕ್ಷಕ್ಕೆ ಹೆಚ್ಚಳ ಮಾಡಬೇಕು ಎಂಬುದು ಸೇರಿದಂತೆ 26 ಶಿಫಾರಸುಗಳನ್ನು ಸಮಿತಿ ಮಾಡಿದೆ.