ಬೆಂಗಳೂರು : ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಿಡುಗಡೆ ಸಂಬಂಧ ಅಧಿಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಸಂಬಂಧ ಶನಿವಾರ ವಿಧಾನಸೌಧದಲ್ಲಿ ವಿಧಾನಪರಿಷತ್ ಸದಸ್ಯರ ಸಭೆ ನಡೆಸಿ, ನಂತರ ಮಾತನಾಡಿದ ಅವರು, 2021-22ನೇ ಸಾಲಿನಲ್ಲಿ ಒಂದು ಕೋಟಿ ಬದಲಿಗೆ ಎರಡು ಕೋಟಿ ಅನುದಾನ ಮಂಜೂರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಈ ವರ್ಷ ಎಲ್ಲ ಶಾಸಕರ ಪ್ರದೇಶಾಭಿವೃದ್ಧಿ ಅನುದಾನವಾಗಿ 600 ಕೋಟಿ ರೂ. ಬಿಡುಗಡೆಯಾಗಿದೆ. 2018-19ರಿಂದ 2020, 2021ನೇ ಸಾಲಿನ ವರೆಗಿನ ಬಾಕಿ ಅನುದಾನ ಬಿಡುಗಡೆಗೆ ಸೂಚಿಸಲಾಗಿದೆ.
ಇದನ್ನೂ ಓದಿ:ಸಿಸಿಪಸ್, ಒಸಾಕಾ, ಸಾನಿಯಾ ಆಟ ಮುಗೀತು
ಪ್ರತಿ ವರ್ಷ ಜೂನ್ ಅಂತ್ಯದೊಳಗಾಗಿ ಕ್ರಿಯಾ ಯೋಜನೆ ಅಂತಿಮಗೊಳಿಸಿ ಕಾಮಗಾರಿ ಪ್ರಗತಿಗೆ ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಬೇಕಾಗುತ್ತದೆ. ಯೋಜನಾ ಇಲಾಖೆಯು ಅನುದಾನವನ್ನು ಕ್ಷೇತ್ರಾವಾರು ಬದಲು ಜಿಲ್ಲಾವಾರು ಬಿಡುಗಡೆಗೆ ಆದೇಶ ಮಾಡಿದೆ. ಹೀಗಾಗಿ ಲಭ್ಯವಿರುವ ಅನುದಾನವನ್ನು ಜಿಲ್ಲಾಧಿಕಾರಿಗಳು ಪ್ರತಿ ಕ್ಷೇತ್ರಕ್ಕೆ 2ಕೋಟಿ ನೀಡಬೇಕಾಗುತ್ತದೆ. ಈ ವಿಷಯವಾಗಿ ಯಾರೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ಸಂಬಂಧಿಸಿದ ಶಾಸಕರು ತಮ್ಮ ಗಮನಕ್ಕೆ ತರಬಹುದು. ಅಂತಹ ದೂರು ಬಂದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಸಂಬಂಧಿಸಿದವರ ಗಮನಕ್ಕೆ ತರಲಾಗುವುದು ಎಂದರು.