Advertisement

ಸದಭಿರುಚಿ ನಾಟಕಗಳಿಗೆ ಸಿಗುತ್ತದೆ ಪ್ರೇಕ್ಷಕರ ಮನ್ನಣೆ: ಜೇವರ್ಗಿ

02:32 PM Nov 18, 2018 | |

ವಿಜಯಪುರ: ವೃತ್ತಿ ರಂಗಭೂಮಿ ನಾಟಕಗಳಲ್ಲಿ ದ್ವಂದ್ವಾರ್ಥವುಳ್ಳ ಸಂಭಾಷಣೆ, ಐಟಂ ಸಾಂಗ್‌ಗಳಿಗೆ ಕತ್ತರಿ ಹಾಕಿ ವರ್ಷಗಳೇ ಉರುಳಿವೆ. ಸದಭಿರುಚಿ ನಾಟಕಗಳನ್ನು ಮಾತ್ರ ಪ್ರೇಕ್ಷಕ ಪ್ರಭು ಇಷ್ಟಪಡುತ್ತಿದ್ದಾನೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ವೃತ್ತಿ ರಂಗಭೂಮಿ ಹಿರಿಯ ಕಲಾವಿದ ರಾಜಣ್ಣ ಜೇವರ್ಗಿ ಹೇಳಿದರು.

Advertisement

ಶನಿವಾರ ನಗರದಲ್ಲಿರುವ ಕಂದಗಲ್‌ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ರಂಗಚೇತನ ಸಂಸ್ಥೆಯ ಬೆಳ್ಳಿಹಬ್ಬದ ಚಿಂತನಗೋಷ್ಠಿಯಲ್ಲಿ ರಂಗಭೂಮಿಗೆ ಸಂಬಂಧಿಸಿದ ವಿಷಯಗಳ ವಿಶ್ಲೇಷಣೆ ಮಾಡಿದ ಅವರು, ಬಹುತೇಕ ನಾಟಕ ಕಂಪನಿಗಳು ದ್ವಂದ್ವಾರ್ಥ ಬರುವ ಸಂಭಾಷಣೆ, ಐಟಂ ಸಾಂಗ್‌ನಿಂದ ಈಗಾಗಲೇ ಹಿಂದೆ ಸರಿದಿವೆ. ಆದರೆ ಈ ವಿಷಯ ಹೆಚ್ಚು ಪ್ರಚಾರವಾಗಬೇಕಾಗಿದೆ. ದ್ವಂದ್ವಾರ್ಥ ಸಂಭಾಷಣೆಯನ್ನು ಕಟ್‌ ಮಾಡಿ ಆರರಿಂದ ಏಳು ವರ್ಷಗಳೇ ಉರುಳಿವೆ ಎಂದರು.

ಉತ್ತಮ ಕಥೆ, ಕಂಪನಿ ನಡೆಸಲು ಸಶಕ್ತವಾದ ಬಂಡವಾಳ ಹೊಂದಿದವರು ಎಂದಿಗೂ ಐಟಂ ಸಾಂಗ್‌, ದ್ವಂದ್ವಾರ್ಥ ಸಂಭಾಷಣೆಯ ಬೆನ್ನು ಬೀಳಲಿಲ್ಲ. ಆದರೆ ಕೆಲವರು ಉತ್ತಮ ಕತೆ ಪ್ರಸ್ತುತಪಡಿಸಲು ಸಾಧ್ಯವಾಗದೇ ಐಟಂ ಸಾಂಗ್‌ ಬೆನ್ನು ಬಿದ್ದರು. ಈಗ ಐಟಂ ಸಾಂಗ್‌ ಕಡಿವಾಣ ಹಾಕುವುದು ಒಂದೆಡೆ ಇರಲಿ, ಐಟಂ ಸಾಂಗ್‌ ಹಾಕಿದರೆ ಅಥವಾ ದ್ವಂದ್ವಾರ್ಥ ಸಂಭಾಷಣೆ ಬಂದರೆ ಪ್ರೇಕ್ಷಕರೇ ಎದ್ದು ಹೋಗುತ್ತಿದ್ದಾರೆ. ಒಳ್ಳೆ ನಾಟಕಗಳನ್ನು ಮಾತ್ರ ಪ್ರೇಕ್ಷಕ ಪ್ರಭುಗಳು ಇಷ್ಟಪಡುತ್ತಿದ್ದಾರೆ ಎಂದರು. 

ಗದಗ ನಗರದಲ್ಲಿ ಪಂಚಾಕ್ಷರಿ ಗವಾಯಿಗಳೇ ಕಟ್ಟಿದ ನಾಟಕ ಕಂಪನಿಯಲ್ಲಿ ಇಂದಿಗೂ ಪುರುಷರೇ ಸ್ತ್ರೀಯರ ಪಾತ್ರ ಮಾಡುತ್ತಾರೆ. ಕಂಪನಿ ಎಲ್ಲಕ್ಕಿಂತ ಉತ್ತಮವಾಗಿಯೇ ಸಾಗಿದೆ. ಇದು ಸದಭಿರುಚಿ ನಾಟಕಗಳಿಗೆ ಆದ್ಯತೆ, ಪ್ರಾಧ್ಯಾನ್ಯತೆ ನೀಡುವ ಪ್ರೇಕ್ಷಕ ಇದ್ದಾನೆ ಎಂಬುದರ ಜೀವಂತಿಕೆಗೆ ಪ್ರತೀಕ ಎಂದು ವಿವರಿಸಿದರು.

ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಹಿರಿಯ ಪತ್ರಕರ್ತ ವಾಸುದೇವ ಹೆರಕಲ್‌ ಮಾತನಾಡಿ, ವೃತ್ತಿ ರಂಗಭೂಮಿ ನಾಟಕಗಳಲ್ಲಿ ದ್ವಂದ್ವಾರ್ಥ ಬರುವ ಸಂಭಾಷಣೆಗಳಿಗೆ ಸಂಪೂರ್ಣವಾಗಿ ಕತ್ತರಿ ಹಾಕಿದರೆ ಪ್ರೇಕ್ಷಕರು ಮತ್ತೂಮ್ಮೆ ನಾಟಕಗಳತ್ತ ಮುಖ ಮಾಡುತ್ತಾರೆ. ವೃತ್ತಿ ರಂಗಭೂಮಿಗೆ ತನ್ನದೇ ಆದ ಘನತೆ ಇದೆ. ಈ ನಿಟ್ಟಿನಲ್ಲಿ ಮತ್ತೂಮ್ಮೆ ಪ್ರೇಕ್ಷಕರು ನಾಟಕಗಳತ್ತ ಮುಖ ಮಾಡಲು ಈ ಎಲ್ಲ ಕ್ರಮ ಕೈಗೊಳ್ಳಬೇಕು. ಮರಾಠಿ ರಂಗಭೂಮಿಯಲ್ಲಿಯೂ
ಕ್ರಾಂತಿಕಾರಕ ಬದಲಾವಣೆಯಾಗಿದೆ, ಪರಿಣಾಮವಾಗಿ ಅಲ್ಲಿ ವೃತ್ತಿ ರಂಗಭೂಮಿ ಮತ್ತೆ ತನ್ನ ಗತವೈಭವಕ್ಕೆ ಮರಳಿದೆ ಎಂದರು.

Advertisement

ವಿಜಯಪುರದಲ್ಲಿ ಕಿತ್ತೂರು ರಾಣಿ ಚನ್ನಮ್ಮ ನಾಟ್ಯ ಮಂದಿರ ಶೀಘ್ರವೇ ಪೂರ್ಣಗೊಳ್ಳಬೇಕು. ಈ ನಿಟ್ಟಿನಲ್ಲಿ ಕಲಾವಿದರು ಸಂಘಟಿತವಾಗಿ ಒತ್ತಾಯ ಮಾಡಬೇಕು ಎಂದರು.
 
ಸಂಘಟಕ ಎಸ್‌.ಎಂ. ಖೇಡಗಿ, ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಜಾನಪದ ಶಂಶೋಧಕರ ಡಾ| ಎಂ.ಎನ್‌. ವಾಲಿ, ಬಸವರಾಜ ಯಂಕಂಚಿ, ರೇವಣಸಿದ್ದಪ್ಪ ಬೆಣ್ಣೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಪಾಲ್ಗೊಂಡಿದ್ದರು.
ದ್ರಾಕ್ಷಾಯಣಿ ಬಿರಾದಾರ ಸ್ವಾಗತಿಸಿದರು. ಕೆ.ಸುನಂದಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next