ಮಹದೇವಪುರ: ಪೂರ್ವ ಬಾವಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನೊಬ್ಬ ಹಲ್ಲೆ ಮಾಡಿರುವ ಘಟನೆ ಹೂಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಶಾಲೆ ಪ್ರಾಂಶುಪಾಲರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಎಸ್‌ಎಸ್‌ಎಲ್‌ಸಿ ಪೂರ್ವಬಾವಿ ಪರೀಕ್ಷೆಯ ಆಂಗ್ಲ ವಿಷಯದಲ್ಲಿ ವಿದ್ಯಾರ್ಥಿನಿ ಕಡಿಮೆ ಅಂಕ ಪಡೆದಿದ್ದಳು ಎನ್ನಲಾಗಿದೆ. ಹೀಗಾಗಿ ಫೆ. 7ರಂದು ಆಂಗ್ಲ ಬಾಷಾ ಶಿಕ್ಷಕ ಕೆ.ಕಾಂತರಾಜು ಬೆತ್ತದಿಂದ ಹೊಡೆದು ಕೈಗೆ ಗಾಯಗೊಳಿಸಿದ್ದಾರೆ. ಶಾಲೆಯ 10ನೇ ತರಗತಿಯಲ್ಲಿನ 117 ವಿದ್ಯಾರ್ಥಿಗಳಲ್ಲಿ ಪೈಕಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಕ ಕಾಂತರಾಜು ಹಲವು ಬಾರಿ ತಳಿಸಿದ್ದಾರೆ.
ಪೋಷಕರು ಈ ಬಗ್ಗೆ ಹಲವು ಬಾರಿ ಮುಖ್ಯೋಪಾಧ್ಯಯರಲ್ಲಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಈ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿರುವ ಶಾಲೆ ಪ್ರಾಂಶುಪಾಲರಾದ ಸರೋಜಮ್ಮ, “ಈ ಘಟನೆ ಬೇಸರ ತಂದಿದೆ, ಆ ದಿನ ನಾನು ಶಾಲೆಯಲ್ಲಿರಲಿಲ್ಲ. ಮರುದಿನ ಹಿರಿಯ ಸಹ ಶಿಕ್ಷರಿಂದ ವಿಷಯ ತಿಳಿಯಿತು.
ಹಲ್ಲೆ ನಡೆಸಿದ ಶಿಕ್ಷಕ ವೈಯಕ್ತಿಕ ರಜೆ ಹಾಕಿದ್ದರು. ಹಾಗಾಗಿ ನೇರವಾಗಿ ಅವರಿಂದ ಮಾಹಿತಿ ಪಡೆಯಲಾಗಿಲ್ಲ. ಈ ಸಂಬಂಧ ಶಿಕ್ಷರ ಸಭೆ ಕರೆದು ಚರ್ಚಿಸಲಾಗಿದೆ. ಆಂಗ್ಲ ಬಾಷೆ ಶಿಕ್ಷಕ ಕೆ.ಕಾಂತರಾಜು ವಿದ್ಯಾರ್ಥಿಗಳಿಗೆ ದಿನನಿತ್ಯ ತರಗತಿಗಳನ್ನು ಉತ್ತಮ ರೀತಿಯಲ್ಲಿ ನಡೆಸುತ್ತಿದ್ದರು. ಅಲ್ಲದೆ, ಭಾನುವಾರವೂ ಕೋಚಿಂಗ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಹೀಗಿದ್ದರೂ, ವಿದ್ಯಾರ್ಥಿಗಳು ಪೂರ್ವಬಾವಿ ಪರಿಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಾರೆ,” ಎಂದಿದ್ದಾರೆ.
ಇಡೀ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, “ಈ ಬಗ್ಗೆ ಹೂಡಿ ಸರ್ಕಾರಿ ಪ್ರೌಡ ಶಾಲೆಯ ಪ್ರಾಂಶುಪಾಲರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಉತ್ತರ ಬಂದ ಮೇಲೆ ಕ್ರಮಕ್ಕೆ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು,” ಎಂದರು.