ಮುಂಬೈ: ನನಗೆ ಆದಾಯ ತೆರಿಗೆ ಇಲಾಖೆಯಿಂದ ಪ್ರೇಮ ಪತ್ರ ಬಂದಿದೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ವರಿಷ್ಠ ಶರದ್ ಪವಾರ್ ಶುಕ್ರವಾರ (ಜುಲೈ 01) ಕುಹಕವಾಡಿದ್ದಾರೆ. ಅದಕ್ಕೆ ಕಾರಣ ಶಿವಸೇನಾ, ಕಾಂಗ್ರೆಸ್ ಮತ್ತು ಎನ್ ಸಿಪಿ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿರುವುದಕ್ಕೆ ಪವಾರ್ ಈ ರೀತಿ ವ್ಯಂಗ್ಯವಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ದೇವೇಗೌಡರು ಈ ರಾಜ್ಯದ ಪಿತಾಮಹ, ಕರ್ನಾಟಕದ ಆರೂವರೆ ಕೋಟಿ ಜನರ ತಂದೆ: ಇಬ್ರಾಹಿಂ
2004, 2009, 2014 ಮತ್ತು 2020ರ ಚುನಾವಣೆಯಲ್ಲಿ ಸಲ್ಲಿಸಿದ್ದ ಅಫಿಡವಿತ್ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆ ಶರದ್ ಪವಾರ್ ಗೆ ನೋಟಿಸ್ ಜಾರಿ ಮಾಡಿದೆ. ಮಹಾರಾಷ್ಟ್ರದಲ್ಲಿ ಬಂಡಾಯ ಎದ್ದ ಶಿವಸೇನಾದ ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿ ಹಾಗೂ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಎನ್ ಸಿಪಿ, ಕಾಂಗ್ರೆಸ್ ಮತ್ತು ಶಿವಸೇನಾ ಮೈತ್ರಿಸರ್ಕಾರ 2.5 ವರ್ಷಗಳ ನಂತರ ಪತನಗೊಂಡಿತ್ತು.
ಆದಾಯ ತೆರಿಗೆ ಇಲಾಖೆ ನೋಟಿಸ್ ಕುರಿತು ಪವಾರ್ ಮರಾಠಿಯಲ್ಲಿ ಟ್ವೀಟ್ ಮಾಡಿದ್ದು, ರಾಜಕಾರಣಿಗಳನ್ನು ಗುರಿಯಾಗಿರಿಸಲು ಇ.ಡಿ ಮತ್ತು ಸಿಬಿಐನ ನೆರವನ್ನು ಪಡೆದುಕೊಳ್ಳಲಾಗುತ್ತಿದೆ. ವಿಧಾನಸಭೆಯ ಹಲವು ಶಾಸಕರು ಈಗಾಗಲೇ ತಮಗೂ ನೋಟಿಸ್ ಬಂದಿರುವುದಾಗಿ ತಿಳಿಸಿದ್ದಾರೆ. ಇದೊಂದು ಹೊಸ ವಿಧಾನ ಆರಂಭವಾಗಿದೆ. ಐದು ವರ್ಷಗಳ ಹಿಂದೆ ನಮಗೆ ಇ.ಡಿ ಹೆಸರೇ ಗೊತ್ತಿರಲಿಲ್ಲವಾಗಿತ್ತು. ಆದರೆ ಈಗ ಹಳ್ಳಿಯವರು ಕೂಡಾ ಇ.ಡಿ.ಯನ್ನು ಛೂ ಬಿಡುವುದಾಗಿ ತಮಾಷೆಯಾಗಿ ಹೇಳುತ್ತಾರೆ ಎಂದು ಉಲ್ಲೇಖಿಸಿದ್ದಾರೆ.
ವಿಭಿನ್ನ ರಾಜಕೀಯ ದೃಷ್ಟಿಕೋನ ಹೊಂದಿರುವ ಜನರ ವಿರುದ್ಧ ಇ.ಡಿ, ಸಿಬಿಐಯನ್ನು ಬಳಸಿಕೊಳ್ಳಲಾಗುತ್ತಿದೆ. ಅದೇ ರೀತಿಯಲ್ಲಿ ನನಗೂ ಕೂಡಾ ಆದಾಯ ತೆರಿಗೆ ಇಲಾಖೆಯಿಂದ ಲವ್ ಲೆಟರ್ (ಪ್ರೇಮ ಪತ್ರ) ಬಂದಿದೆ.
ಆದಾಯ ತೆರಿಗೆ ಇಲಾಖೆ ಈಗ 2004ರಲ್ಲಿ ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿತ್ ಅನ್ನು ಪರಿಶೀಲಿಸುತ್ತಿದೆ. 2009ರ ಅಫಿಡವಿತ್ ಅನ್ನು ಪರಿಶೀಲಿಸುತ್ತಿದ್ದು, 2014ರಲ್ಲಿ ನಾನು ರಾಜ್ಯಸಭಾ ಸದಸ್ಯನಾಗಿದ್ದೆ. 2020ರ ರಾಜ್ಯಸಭಾ ಚುನಾವಣೆಯಲ್ಲಿ ಸಲ್ಲಿಸಿದ್ದ ಅಫಿಡವಿತ್ ಅನ್ನು ಸೇರಿಸಿ ನೋಟಿಸ್ ಜಾರಿ ಮಾಡಿದೆ. ಅದೃಷ್ಟವಶಾತ್ ನನ್ನ ಬಳಿ ಎಲ್ಲಾ ಮಾಹಿತಿ ಇದೆ ಎಂದು ಪವಾರ್ ಹೇಳಿದ್ದಾರೆ.