ಶಿವಮೊಗ್ಗ: ಇಸ್ಲಾಮಿಕ್ ಆಕ್ರಮಣಕಾರರು ಭಾರತದ 36 ಸಾವಿರ ಹಿಂದೂ ದೇವಾಲಯಗಳನ್ನು ಕೆಡವಿ ಮಸೀದಿ ನಿರ್ಮಿಸಿದ್ದು, ಈ ಮಸೀದಿಗಳನ್ನೇ ತೆರವುಗೊಳಿಸಿ ಅಲ್ಲಿ ಹಿಂದೂ ದೇವಾಲಯಗಳನ್ನು ನಿರ್ಮಿಸುವುದೇ ಹಿಂದೂ ಸಮಾಜದ ಮುಖ್ಯ ಗುರಿಯಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆ, ಕಾಶಿ, ಮಥುರಾ ಸೇರಿದಂತೆ ಭಾರತದ ಅನೇಕ ಕ್ಷೇತ್ರಗಳು ಹಿಂದೂಗಳ ಪುಣ್ಯಕ್ಷೇತ್ರವಾಗಿವೆ. ಇಂತಹ ಪುಣ್ಯಕ್ಷೇತ್ರಗಳಲ್ಲಿ ಮುಸ್ಲಿಂ ಆಕ್ರಮಣಕಾರರು ದೇವಾಲಯಗಳನ್ನು ಧ್ವಂಸಗೊಳಿಸಿ ಮಸೀದಿಗಳನ್ನು ನಿರ್ಮಿಸಿದ್ದು, ಈಗ ಅಲ್ಲಿ ಹಿಂದೂ ದೇವಾಲಯಗಳು ಇದ್ದವು ಎನ್ನುವುದಕ್ಕೆ ಪುರಾವೆ ಸಿಗುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ಕಾಶಿಯಲ್ಲಿ ದೊರೆತ 12 ಅಡಿ ಎತ್ತರದ ಶಿವಲಿಂಗವೇ ಸಾಕ್ಷಿಯಾಗಿದೆ ಎಂದರು.
ಸುಮಾರು 350 ವರ್ಷಗಳ ಹಿಂದೆ ಔರಂಗಜೇಬ ಕಾಶಿ ವಿಶ್ವನಾಥ ದೇವಸ್ಥಾನವನ್ನು ಧ್ವಂಸ ಮಾಡಿದ್ದ. ಇದಾದ ಅನಂತರ 110 ವರ್ಷಗಳ ನಂತರ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ದೇಗುಲ ಮರು ನಿರ್ಮಾಣ ಮಾಡಿದರು ಎಂದರು.
ಹಿಂದೂ ಸಮಾಜ ಇನ್ನು ಸುಮ್ಮನಿರುವುದಿಲ್ಲ. ಓವೈಸಿಯಂಥ ರಾಷ್ಟ್ರದ್ರೋಹಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ. ಕರ್ನಾಟಕದಲ್ಲೂ ಕೂಡ ಎಲ್ಲಿ ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಿದ್ದಾರೋ ಅಲ್ಲಿ ಕಾನೂನಾತ್ಮಕವಾಗಿಯೇ ಮತ್ತೆ ದೇಗುಲ ನಿರ್ಮಾಣ ಮಾಡುತ್ತೇವೆ. ಹಿಂದೂಗಳ ಪುಣ್ಯಕ್ಷೇತ್ರಗಳ ಸುದ್ದಿಗೆ ಯಾರೂ ಬರಬಾರದು. ನಮಗಾಗಿರುವ ಅನ್ಯಾಯವನ್ನು ಸರಿಪಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಕಾಶಿಯಲ್ಲಿ ಮಸೀದಿ ಪಕ್ಕದಲ್ಲೇ ನಂದಿ ಇದೆ. ಆ ನಂದಿ ಮಸೀದಿಯನ್ನೇ ನೋಡುತ್ತಿದೆ. ಇದರ ಅರ್ಥ ಮಸೀದಿ ಒಳಗಿರುವ ಶಿವಲಿಂಗವನ್ನು ನೋಡುತ್ತಿದೆ ಎಂದೇ ಗ್ರಹಿಸಬಹುದು. ಅಲ್ಲದೆ, ಅಲ್ಲಿ ಶೃಂಗಾರಗೌರಿ, ನಂದಿ, ಗಣೇಶ, ಆಂಜನೇಯನ ವಿಗ್ರಹಗಳೂ ಇದ್ದವು ಎನ್ನುವುದಕ್ಕೆ ಸಾಕ್ಷಿ ಇದೆ. ಇದೆಲ್ಲವನ್ನೂ ನೋಡಿದರೆ ಮುಸ್ಲಿಮರ ಆಕ್ರಮಣವೆಂಬುದು ಸಾಬೀತಾಗುತ್ತದೆ
– ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ