ಮುದ್ದೇಬಿಹಾಳ: ತಾಲೂಕಿನ ಜಟ್ಟಗಿ ಗ್ರಾಮದಲ್ಲಿರುವ ಮಹಿಳಾ ಶೌಚಾಲಯ ತೆರವುಗೊಳಿಸಿ ಗಾಂವಠಾಣಾ ಜಾಗ ಅತಿಕ್ರಮಿಸಿ ಮನೆ ಕಟ್ಟಿಸಿಕೊಳ್ಳುತ್ತಿರುವುದರಿಂದ ಅನಾನುಕೂಲ ಉಂಟಾಗಿದೆ. ತಕ್ಷಣ ಅತಿಕ್ರಮಣ ತೆರವುಗೊಳಿಸಿ ಶೌಚಾಲಯ ಮರು ನಿರ್ಮಾಣ ಮಾಡಲು ಒತ್ತಾಯಿಸಿ ಗ್ರಾಮದ ಮಾದಿಗ ಸಮುದಾಯ ಮಹಿಳೆಯರು ತಮ್ಮ ಸಮಾಜದ ಪುರುಷರ ಬೆಂಬಲದೊಂದಿಗೆ ಸೋಮವಾರ ತಹಶೀಲ್ದಾರ್ ಎಂ.ಎ.ಎಸ್. ಬಾಗವಾನಗೆ ಮನವಿ ಸಲ್ಲಿಸಿದರು. ಈಗಾಗಲೇ ಅತಿಕ್ರಮಣ ಕುರಿತು ತಾಪಂ ಮತ್ತು ತಾಲೂಕಾಡಳಿತಕ್ಕೆ ಲಿಖೀತ ಮನವಿ ಸಲ್ಲಿಸಲಾಗಿತ್ತು. ಆಗ ಅಧಿಕಾರಿಗಳು ಪರಿಶೀಲಿಸಿ ಅತಿಕ್ರಮಣ ಜಾಗದಲ್ಲಿ ಮನೆ ಕಟ್ಟಿಕೊಳ್ಳದಂತೆ ಕ್ರಮ ಕೈಗೊಂಡಿದ್ದರು. ಆದರೆ 6 ವರ್ಷಗಳ ನಂತರ ಮತ್ತೆ ಅತಿಕ್ರಮಿತ ವ್ಯಕ್ತಿಗಳು ಆ ಜಾಗದಲ್ಲಿ ಕಟ್ಟಡ ಕಟ್ಟುತ್ತಿದ್ದಾರೆ. ಸಂಬಂಧಿಸಿದ ಗ್ರಾಪಂ ಮೊದಲಿದ್ದ ಮಹಿಳೆಯರ ಶೌಚಾಲಯ ಮರು ನಿರ್ಮಾಣ ಮಾಡದೆ ನಿರ್ಲಕ್ಷಾ ತೋರಿಸಿದ್ದು ಖಾಸಗಿ ವ್ಯಕ್ತಿಗಳಿಗೆ ಕಟ್ಟಡ ಕಟ್ಟಲು ಅನುಕೂಲ ಕಲ್ಪಿಸಿದಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಮೊದಲಿದ್ದಂತೆಯೇ ಮಹಿಳೆಯರ ಶೌಚಾಲಯ ಕಟ್ಟಿಸಿಕೊಡಬೇಕು ಹಾಗೂ ಶೌಚಾಲಯ ಜಾಗ ಅತಿಕ್ರಮಿಸಿ ಕಟ್ಟಡ ಕಟ್ಟುತ್ತಿರುವುದನ್ನು ತೆರವುಗೊಳಿಸಬೇಕು. ಅತಿಕ್ರಮಣ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಗ್ರಾಪಂ ಸದಸ್ಯೆ ದ್ಯಾಮವ್ವ ಮಾದರ, ಮಾದಿಗ ಸಮುದಾಯದ ಸತ್ಯವ್ವ, ಚನ್ನವ್ವ, ಬಸವ್ವ, ಯಲ್ಲವ್ವ, ನಾಗವ್ವ, ಗೌರವ್ವ, ಮುದಕವ್ವ ಪ್ರೇಮಾ, ಭೀಮವ್ವ, ಮುಡಗಂಡೆವ್ವ, ಶೀತವ್ವ, ಹುಲಿಗೆವ್ವ, ಮಲ್ಲವ್ವ, ಯಮನವ್ವ, ಬಾಲವ್ವ, ಮಾದಿಗ ಸಮಾಜ ಸಂಘಟನೆ ಮುಖಂಡರಾದ ಹನುಮಂತ ಶಿರೋಳ, ಬಾಲಚಂದ್ರ ಹುಲ್ಲೂರ, ಬಸವರಾಜ ಪೂಜಾರಿ, ದೇವೇಂದ್ರ ಡೊಂಕಮಡು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.