Advertisement

Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್‌ ಬಿಜೆಪಿ ವಕ್ಫ್ ಪ್ರವಾಸ

04:48 AM Dec 27, 2024 | Team Udayavani |

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಬಂಧನ ಪ್ರಕರಣದಿಂದ ಒಂದಾದಂತೆ ಕಂಡು ಬಂದಿದ್ದ ಬಿಜೆಪಿ ಮತ್ತೆ ಹಳೇ ಹಾದಿ ಹಿಡಿದಿದ್ದು, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೇತೃತ್ವದ ರೆಬಲ್ಸ್‌ ಟೀಂ ಗುರುವಾರ ಮತ್ತೆ ಸಭೆ ನಡೆಸಿದೆ. ಮಾಜಿ ಶಾಸಕ ಕುಮಾರ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಿದ ಈ ತಂಡ ಜನವರಿ ಮೊದಲನೇ ವಾರದಿಂದ ಹಳೇ ಮೈಸೂರು ಭಾಗದಲ್ಲಿ ವಕ್ಫ್ ಪ್ರವಾಸ ನಡೆಸುವ ಬಗ್ಗೆ ಚರ್ಚೆ ನಡೆಸಿದೆ.

Advertisement

ಯತ್ನಾಳ್‌, ಅರವಿಂದ ಲಿಂಬಾವಳಿ, ರಮೇಶ್‌ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಎನ್‌.ಆರ್‌. ಸಂತೋಷ್‌ ಸೇರಿ ಹಲವರು ಈ ಸಭೆಯಲ್ಲಿ ಭಾಗವಹಿಸಿದ್ದು, ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ. ಸಭೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅರವಿಂದ ಲಿಂಬಾವಳಿ, ಈಗಾಗಲೇ ನಾವು ಮೊದಲ ಸುತ್ತಿನ ವಕ್ಫ್ ಹೋರಾಟ ಪೂರ್ಣಗೊಳಿಸಿದ್ದೇವೆ. ಕರ್ನಾಟಕದ ಅಧಿಕಾರಿಗಳನ್ನು ಗುರುವಾರ ಜೆಪಿಸಿ ವಿವರಣೆ ಪಡೆಯುವುದಕ್ಕಾಗಿ ಕರೆದಿತ್ತು. ನನಗೆ, ಪ್ರತಾಪಸಿಂಹ, ಕುಮಾರ ಬಂಗಾರಪ್ಪ ಅವರಿಂದ ಇನ್ನೂ ಹೆಚ್ಚಿನ ಮಾಹಿತಿಯನ್ನು ಜೆಪಿಸಿ ಕೇಳಿದೆ. ಆ ಹಿನ್ನೆಲೆಯಲ್ಲಿ ಚರ್ಚೆ ಮಾಡಲು ಇವತ್ತು ಸಭೆ ಸೇರಿದ್ದೆವು ಎಂದು ಹೇಳಿದರು.

ಜನವರಿ ಮೊದಲ ವಾರದಲ್ಲಿ ದಿಲ್ಲಿಗೆ ಹೋಗಿ ಮಾಹಿತಿ ಕೊಡುವ ಕೆಲಸ ಮಾಡುತ್ತೇವೆ. ಸದನದಲ್ಲಿ ಸರಕಾರ ಕೊಟ್ಟ ಉತ್ತರದಿಂದ ನಮಗೆ ನಿರಾಸೆ ಆಗಿದೆ. ಇದು ಮುಸ್ಲಿಮರ ಪರವಾಗಿರುವ ಸರಕಾರ. ದಿಲ್ಲಿಗೆ ಹೋಗಿ ಬಂದ ಅನಂತರವೇ ಜನವರಿಯಲ್ಲಿ ನಮ್ಮ 2ನೇ ಹಂತದ ಪ್ರವಾಸ ಪ್ರಾರಂಭಿಸುತ್ತೇವೆ. ಇನ್ನೂ ಪ್ರವಾಸದ ದಿನಾಂಕ ನಿಗದಿ ಮಾಡಿಲ್ಲ. ಹಳೇ ಮೈಸೂರು ಭಾಗದ ರೈತರಿಂದ ನಾವು ಈ ಬಾರಿ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದು ವಿವರಿಸಿದರು.

ಹೋರಾಟ ನಿಲ್ಲೋದಿಲ್ಲ
ಇಂದು ನಾವು ನಡೆಸಿರುವುದು ಪ್ರತ್ಯೇಕ ಸಭೆಯಲ್ಲ, ಭಿನ್ನಮತವೂ ಅಲ್ಲ. ನಾವು ವಕ್ಫ್ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದೇವೆ. ನಮ್ಮ ಸಭೆಯ ಬಗ್ಗೆ ಮಾಜಿ ಶಾಸಕರು ಏನಾದರೂ ಹೇಳಿಕೊಳ್ಳಲಿ, ನಾವು ವಕ್ಫ್ ಹೋರಾಟ ನಿಲ್ಲಿಸುವುದಿಲ್ಲ. ನಮ್ಮ ಮಟ್ಟದಲ್ಲಿ ಜನಪರ ಹೋರಾಟ ಮಾಡುತ್ತಿದ್ದೇವೆ ಎಂದು ಲಿಂಬಾವಳಿ ಹೇಳಿದರು.

ಹೆಬ್ಬಾಳ್ಕರ್‌ ಬಗ್ಗೆ ಪ್ರತಿಕ್ರಿಯಿಸಲ್ಲ
ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಅವರ ಬಗ್ಗೆ ಸಿ.ಟಿ. ರವಿ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ನಿರಾಕರಿಸಿದ್ದಾರೆ. ಸುದ್ದಿಗಾರರು ಎಷ್ಟು ಒತ್ತಾಯಿಸಿದರೂ ಪ್ರತಿಕ್ರಿಯೆಗೆ ನಿರಾಕರಿಸಿದ ಅವರು, ನಾನು ಒಟ್ಟಾರೆ ಅವರ ಬಗ್ಗೆ ಮಾತನಾಡಲ್ಲ, ಬಾಯಿ ಮುಚ್ಚಿಕೊಂಡು ಇರುತ್ತೇನೆ. ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next