Advertisement
ಬಿಜೆಪಿಗೆ ರಾಜೀನಾಮೆ : ಲಕ್ಷ್ಮಣ ಸವದಿ, ಅಥಣಿ
Related Articles
Advertisement
ಸಿ.ಟಿ.ರವಿ ವಿರುದ್ಧ ಕೆಂಡ: ಎಂ.ಪಿ.ಕುಮಾರಸ್ವಾಮಿ, ಮೂಡಿಗೆರೆ
ಮೂಡಿಗೆರೆ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಪಿ. ಕುಮಾರಸ್ವಾಮಿಗೆ ಟಿಕೆಟ್ ಕೈತಪ್ಪುತ್ತಿದ್ದಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಗೆ ತೆರಳಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಪಕ್ಷದಲ್ಲಿನ ಬೆಳವಣಿಗೆಗಳಿಂದ ಬೇಸತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ಈ ಮಧ್ಯೆ, ಬಂಡಾಯವಾಗಿ ಸ್ಪರ್ಧೆ ಮಾಡುವುದಾಗಿ ಎಂ.ಪಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ರಾಜೀನಾಮೆ, ಸ್ಪರ್ಧೆ ಖಚಿತ: ಸೊಗಡು ಶಿವಣ್ಣ, ತುಮಕೂರು ನಗರ
ತುಮಕೂರು ನಗರ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಸೊಗಡು ಶಿವಣ್ಣ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಅವರಿಗೆ ಇ-ಮೇಲ್ ಮೂಲಕ ಪತ್ರ ರವಾನಿಸಿದ್ದಾರೆ. ಅಷ್ಟೇ ಅಲ್ಲ, ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಯುವುದು ಶತಃಸಿದ್ಧ ಎಂದೂ ಘೋಷಿಸಿದ್ದಾರೆ. ಏ.20ರ ಒಳಗೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದಿರುವ ಅವರು, ಪಕ್ಷೇತರನಾಗಿ ಸ್ಪರ್ಧಿಸಬೇಕೇ? ಅಥವಾ ಯಾವುದಾದರೂ ಪಕ್ಷಕ್ಕೆ ಸೇರಬೇಕೇ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಪ್ರಕಟಿಸುತ್ತೇನೆ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಜೆಡಿಎಸ್ ಸೇರುವ ಬಗ್ಗೆ ಕಾದು ನೋಡಿ ಎಂದಷ್ಟೇ ಉತ್ತರಿಸಿದ್ದಾರೆ.
ತೆಲೆ ಪಕ್ಷಕ್ಕೆ ನೆಹರೂ ಓಲೇಕಾರ:ನೆಹರೂ ಓಲೇಕಾರ, ಹಾವೇರಿ
ಹಾವೇರಿ ಮೀಸಲು ಕ್ಷೇತ್ರದಿಂದ ನೆಹರೂ ಓಲೇಕಾರ ಅವರಿಗೆ ಟಿಕೆಟ್ ಕೈತಪ್ಪಿದ್ದು, ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಜತೆಗೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವುದಾಗಿ ಅವರು ಘೋಷಿಸಿದ್ದಾರೆ. ಹಾವೇರಿಯ ಸಿದ್ದಪ್ಪ ವೃತ್ತದಲ್ಲಿ ಬೆಂಬಲಿಗರೊಂದಿಗೆ ಪ್ರತಿಭಟನೆಗೆ ನಡೆಸಿದ ನೆಹರೂ ಓಲೇಕಾರ, ಟಿಕೆಟ್ ತಪ್ಪಲು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಕಾರಣ ಎಂದು ಆರೋಪಿಸಿದರು. ಅಲ್ಲದೆ. ಪಕ್ಷಕ್ಕೆ ರಾಜೀನಾಮೆ ನೀಡಿ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಜೆಡಿಎಸ್‌ಗೆ ಹೋಗುತ್ತೇನೆ ಎಂದರು. ನೆಹರು ಓಲೇಕಾರ ಅವರಿಗೆ ಟಿಕೆಟ್ ತಪ್ಪಿಸಿರುವುದನ್ನು ಖಂಡಿಸಿ ನಗರದ ಹೊಸಮನಿ ಸಿದ್ದಪ್ಪ ಸರ್ಕಲ್‌ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ನೂರಾರು ಬೆಂಬಲಿಗರು, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ ಭಾವಚಿತ್ರ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್‌ನತ್ತ ನಾಗಮಾರಪಳ್ಳಿ:ಸೂರ್ಯಕಾಂತ ನಾಗಮಾರಪಳ್ಳಿ, ಬೀದರ
ಬೀದರ ಕ್ಷೇತ್ರದಲ್ಲಿ ಹಿಂದುತ್ವವಾದಿ ಈಶ್ವರಸಿಂಗ್ ಠಾಕೂರ್‌ಗೆ ಬಿಜೆಪಿ ಟಿಕೆಟ್ ಒಲಿದಿದ್ದು, ಪ್ರಬಲ ಆಕಾಂಕ್ಷಿಯಾಗಿದ್ದ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿಗೆ ಟಿಕೆಟ್ ತಪ್ಪಿದೆ. ಹೀಗಾಗಿ ನಾಗಮಾರಪಳ್ಳಿ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಉಪಚುನಾವಣೆ ಸೇರಿ ಸತತ ಮೂರು ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಸೂರ್ಯಕಾಂತ್‌ಗೆ ಈ ಚುನಾವಣೆ ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕೆ “ಮಾಡು ಇಲ್ಲವೇ ಮಡಿ” ಎನ್ನುವಂತಾಗಿದೆ. ಹೀಗಾಗಿ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ. ಜೆಡಿಎಸ್ ಸೇರ್ಪಡೆ ಕುರಿತು ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ಜತೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ. ಏ.14ರಂದು ಬೆಂಬಲಿಗರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಘೋಷಿಸಿದ್ದಾರೆ. ಸದ್ಯ ಜೆಡಿಎಸ್‌ನಿಂದ ರಮೇಶ ಪಾಟೀಲ ಸೋಲಪುರ್‌ಗೆ ಟಿಕೆಟ್ ನೀಡಲಾಗಿದ್ದು, ಒಂದೊಮ್ಮೆ ನಾಗಮಾರಪಳ್ಳಿ ಪಕ್ಷಕ್ಕೆ ಸೇರಿದರೆ ಇಲ್ಲಿ ಅಭ್ಯರ್ಥಿ ಬದಲಾವಣೆ ಸಾಧ್ಯತೆ ಇದೆ.
ರೆಡ್ಡಿ ಪಕ್ಷದಿಂದ ಸ್ಪರ್ಧೆ?: ಗೂಳಿಹಟ್ಟಿ ಶೇಖರ್, ಹೊಸದುರ್ಗ
ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಗುರುವಾರ ರಾತ್ರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಶಿರಸಿಯ ಕಚೇರಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ರಾಜಿನಾಮೆ ಸಲ್ಲಿಸಿದ್ದು, ಹೊಸದುರ್ಗ ಕ್ಷೇತ್ರದಲ್ಲಿ ಪಕ್ಷೇತರ ಅಥವಾ ಯಾವುದಾದರೂ ಪಕ್ಷದಿಂದ ಸ್ಪರ್ಧೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಹೊಸದುರ್ಗ ಬಿಜೆಪಿ ಟಿಕೆಟ್ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ ಅವರಿಗೆ ನೀಡಿರುವ ಹಿನ್ನೆಲೆಯಲ್ಲಿ ಗೂಳಿಹಟ್ಟಿ ಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಶಾಸಕ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಈಗಾಗಲೇ ಜನಾರ್ದನ ರೆಡ್ಡಿ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಈ ನಡುವೆ ಗೂಳಿಹಟ್ಟಿ ಶೇಖರ್ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿಗಳೂ ಹರಿದಾಡುತ್ತಿವೆ.
ಪಕ್ಷೇತರನಾಗಿ ಸ್ಪರ್ಧೆ: ಸುರೇಶಗೌಡ ಪಾಟೀಲ, ಬ್ಯಾಡಗಿ
ಬಿಜೆಪಿ ಟಿಕೆಟ್ ತಪ್ಪಿದ ಬೆನ್ನಲ್ಲೇ ಬಂಡಾಯದ ಬಾವುಟ ಹಾರಿಸಿರುವ ಬ್ಯಾಡಗಿ ಮಾಜಿ ಶಾಸಕ ಸುರೇಶಗೌಡ ಪಾಟೀಲ, ಟಿಕೆಟ್ ಹಂಚಿಕೆ ಬದಲಾವಣೆ ಮಾಡುವಂತೆ ಏ.20ರವರೆಗೂ ವರಿಷ್ಠರಿಗೆ ಗಡುವು ನೀಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಅವರು, 2008ರಲ್ಲಿ ಬ್ಯಾಡಗಿ ಮತಕ್ಷೇತ್ರದ ಶಾಸಕನಾಗಿ ಕಳಂಕರಹಿತ ಉತ್ತಮ ಆಡಳಿತ ನೀಡಿದ್ದೇನೆ. ಆದರೆ, 2013ರಲ್ಲಿ ಬಿಜೆಪಿ-ಕೆಜೆಪಿ ಗೊಂದಲದಲ್ಲಿ ನಾನು ಸ್ಪರ್ಧಿಸಲಿಲ್ಲ. ಬ್ಯಾಡಗಿ ಕ್ಷೇತ್ರದಲ್ಲಿ ಹಾಲಿ ಶಾಸಕರ ಕಾರ್ಯವೈಖರಿ ಸರಿ ಇಲ್ಲ. ಹೀಗಾಗಿ, ಅವರನ್ನು ಬದಲಾವಣೆ ಮಾಡಬೇಕು ಎಂದು ಅಗ್ರಹಿಸಿದ್ದಾರೆ.
ರಾಜೀನಾಮೆ ನಿರ್ಧಾರ: ಸೋಮನಗೌಡ ಪಾಟೀಲ, ಬಸವನಗೌಡ ಬಾಗೇವಾಡಿ
ಬಸವನಬಾಗೇವಾಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ್ದರಿಂದ ಸೋಮನಗೌಡ (ಅಪ್ಪುಗೌಡ) ಪಾಟೀಲ (ಮನಗೂಳಿ) ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಏ.14ರಂದು ಸಂಜೆ 4ಕ್ಕೆ ಸ್ವಗ್ರಾಮ ಮನಗೂಳಿಯಲ್ಲಿ ಬೆಂಬಲಿಗರ ಸಭೆ ಕರೆದಿದ್ದು, ಬಳಿಕ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಬುಧವಾರ ಸಂಜೆ 4 ಗಂಟೆವರೆಗೂ ನನ್ನ ಹೆಸರು ಎರಡನೇ ಪಟ್ಟಿಯಲ್ಲಿತ್ತು. ಕೊನೆ ಗಳಿಗೆಯಲ್ಲಿ ಬದಲಾವಣೆಯಾಗಿ ಕೈತಪ್ಪಿದೆ ಎಂದು ಆರೋಪಿಸಿದ್ದಾರೆ. ಈ ಮಧ್ಯೆ, ಅಪ್ಪುಗೌಡ ಅವರಿಗೆ ಟಿಕೆಟ್ ಕೈತಪ್ಪಿರುವುದರಿಂದ ಮನಗೂಳಿ ಪಪಂ 12 ಜನ ಬಿಜೆಪಿ ಸದಸ್ಯರು ವರಿಷ್ಠರ ವಿರುದ್ಧ ಬಂಡೆದ್ದು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ: ಶಶಿಕಾಂತ ನಾಯಕ, ಹುಕ್ಕೇರಿ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಶಶಿಕಾಂತ ನಾಯಕ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಹುಕ್ಕೇರಿ ಮತಕ್ಷೇತ್ರದಿಂದ ಟಿಕೆಟ್ ನೀಡದಿರುವುದು ಹಾಗೂ ಕತ್ತಿ ಕುಟುಂಬದ ಕಿರುಕುಳದಿಂದ ಬೇಸತ್ತು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ. ಉಮೇಶ ಕತ್ತಿ ನಿಧನ ಬಳಿಕ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬಳಿಯೂ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆ. ಆದರೆ ನನಗೆ ಅನ್ಯಾಯ ಮಾಡಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ರಾಜೀನಾಮೆಗೂ ನನಗೂ ಸಂಬಂಧವಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ ಎಂದರು.
ನರಿಬೋಳ ಜೆಡಿಎಸ್‌ಗೆ
ಕಲಬುರಗಿ: ಜೇವರ್ಗಿ ಬಿಜೆಪಿ ಟಿಕೆಟ್ ವಂಚಿತ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಶುಕ್ರವಾರ ಬೆಂಗಳೂರಿನಲ್ಲಿ ಜೆಡಿಎಸ್ ಸೇರ್ಪಡೆಯಾಗಿ ಬಳಿಕ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅದೇ ರೀತಿ ಅಫಜಲಪುರದಲ್ಲಿ ಬಿಜೆಪಿ ಟಿಕೆಟ್ ವಂಚಿತ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಲೀಕಯ್ಯ ಗುತ್ತೇದಾರ ಅವರ ಸಹೋದರ ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಕಲಬುರಗಿ ಉತ್ತರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಕಾಂತ ಮಹಾಜನ್ ಅವರಿಗೆ ಟಿಕೆಟ್ ದೊರಕದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.
19ಕ್ಕೆ ಪಕ್ಷೇತರನಾಗಿ ನಾಮಪತ್ರ
ರಾಣಿಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಆರ್.ಶಂಕರ ಅವರು ಏ.19ರಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ಬಿಜೆಪಿಗೆ ನಾನು ಸಹಾಯ ಮಾಡಿದ್ದರಿಂದಲೇ ಸರ್ಕಾರ ರಚಿಸಲು ಸಾಧ್ಯವಾಗಿತ್ತು. ಆದರೂ, ನನ್ನ ಕೈಬಿಟ್ಟಿದ್ದಾರೆ. ಸಭಾಧ್ಯಕ್ಷ ಹೊರಟ್ಟಿ ಅವರನ್ನು ಭೇಟಿಯಾಗಿ ವಿಪ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಏ.19ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಆರ್. ಶಂಕರ್ ತಿಳಿಸಿದ್ದಾರೆ.