Advertisement

ಇಂದು ಅಂಬರೀಶ್‌ ಹುಟ್ಟುಹಬ್ಬ : ರೆಬೆಲ್‌ಸ್ಟಾರ್‌ ನೆನಪಲ್ಲಿ ಅಭಿಮಾನಿಗಳು…

04:22 PM May 29, 2020 | mahesh |

ಇಂದು ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರ ಜನ್ಮದಿನ. ಅವರ ಅಭಿಮಾನಿಗಳ ಪಾಲಿನ ಹಬ್ಬ. ಅಂಬಿ ಬದುಕಿದ್ದಾಗ ಬೆಳಗ್ಗೆಯೇ ಮನೆಮುಂದೆ ಜಮಾಯಿಸುತ್ತಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ಅಣ್ಣನ ಆಗಮನಕ್ಕಾಗಿ ಎದುರು ನೋಡುತ್ತಿದ್ದರು. ಅಂಬಿ ಮನೆಯಿಂದ ಹೊರಬಂದು ತಮ್ಮದೇ ಶೆ„ಲಿಯಲ್ಲಿ ಅಭಿಮಾನಿಗಳನ್ನು ಮಾತನಾಡಿಸಿದರೇನೇ ಅವರಿಗೆ ಸಮಾಧಾನ. ಇವತ್ತು ಅಂಬರೀಶ್‌ ನಮ್ಮೊಂದಿಗಿಲ್ಲ. ಆದರೆ, ಅವರು ಬಿಟ್ಟುಹೋದ ನೆನಪುಗಳಿವೆ. ಆ ನೆನಪುಗಳೊಂದಿಗೆ ಅಭಿಮಾನಿಗಳು ಎಲ್ಲೆಡೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಅಂಬರೀಶ್‌ ಎಷ್ಟೇ ಬಿಝಿ ಇದ್ದರೂ ಅಭಿಮಾನಿಗಳನ್ನು ಮಾತನಾಡಿಸದೇ ಹೋದವರಲ್ಲ. ಅದೇ ಕಾರಣದಿಂದ ವರ್ಷದಿಂದ ವರ್ಷಕ್ಕೆ ಅವರ ಹುಟ್ಟುಹಬ್ಬಕ್ಕೆ ಸೇರುತ್ತಿದ್ದು, ಅಭಿಮಾನಿಗಳ ಸಂಖ್ಯೆ ಕೂಡಾ ಹೆಚ್ಚಾಗುತ್ತಿತ್ತು. ಅದಕ್ಕೆ ಕಾರಣ ಅಂಬರೀಶ್‌ ಕನ್ನಡ ಚಿತ್ರರಂಗದ ಮೊದಲ ಆ್ಯಂಗ್ರಿಯಂಗ್‌ ಮ್ಯಾನ್‌, ರೆಬೆಲ್‌ಸ್ಟಾರ್‌, ಸ್ನೇಹಜೀವಿ, ದಾನಶೂರ ಕರ್ಣ…

Advertisement

ಅಂಬರೀಶ್‌ ಬದುಕಿದ ರೀತಿಯೇ ಹಾಗೆ. ತನಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾ, ಎಲ್ಲರೊಂದಿಗೆ ಖುಷಿಯಿಂದ ಬೆರೆಯುತ್ತಾ ಜೀವನವನ್ನು ಕಳೆದ ಅಂಬರೀಶ್‌, ಎಲ್ಲಾ ಜನರೇಶನ್‌ಗಳಿಗೂ ಇಷ್ಟವಾಗಲು ಕಾರಣ ಅವರ ಒಂದು ಪ್ರಮುಖ ಗುಣ. ನೀವು ಸೂಕ್ಷ್ಮವಾಗಿ ಗಮನಿಸಿದರೆ ಅಂಬರೀಶ್‌ ಅವರ ಒಂದು ಅಪರೂಪದ ದೊಡ್ಡಗುಣ ಎದ್ದು ಕಾಣುತ್ತದೆ. ಅದು ಎಲ್ಲಾ ಜನರೇಶನ್‌ನ ನಟರೊಂದಿಗೆ ನಟಿಸುತ್ತಾ ಅವರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರೋದು. ಡಾ.ರಾಜ್‌ ಕುಮಾರ್‌ ಜೊತೆಗೆ ನಟಿಸಿರುವುದರಿಂದ ಹಿಡಿದು ಇತ್ತೀಚೆಗೆ ಚಿತ್ರರಂಗಕ್ಕೆ ಬಂದ ಪಂಕಜ್‌, ರಾಜಕಾರಣಿ ಚಲುವರಾಯ ಸ್ವಾಮಿ ಪುತ್ರ ಸಚಿನ್‌ ಜೊತೆಗೆ ನಟಿಸಿದ ಕನ್ನಡದ ನಟ ಎಂದರೆ ಅದು ಅಂಬರೀಶ್‌.

ಎಲ್ಲರೊಂದಿಗೆ ನಟನೆ
ದಕ್ಷಿಣ ಭಾರತದ ಚಿತ್ರರಂಗವನ್ನು ನೀವು ತೆಗೆದು ನೋಡಿದರೆ ಅಲ್ಲಿನ ಯಾವ ಸ್ಟಾರ್‌ ನಟರು ಕೂಡಾ ಹೊಸಬರ ಕೈಗೆ ಸಿಗಲೇ ಇಲ್ಲ. ಅದು ರಜನಿಕಾಂತ್‌ ಆಗಲೀ, ಕಮಲ್‌ ಹಾಸನ್‌ ಆಗಲೀ, ಚಿರಂಜೀವಿ ಆಗಲಿ, ಬಾಲಕೃಷ್ಣ ಅಥವಾ ಮೋಹನ್‌ ಲಾಲ್‌ ಆಗಲೀ…. ಸ್ಟಾರ್‌ ಸಿನಿಮಾ ಮಾಡುತ್ತಾ, ಸ್ಟಾರ್‌ಗಳ ಜೊತೆಯೇ ನಟಿಸುತ್ತಾ ಬಂದರೆ ಹೊರತು, ಹೊಸಬರ ಚಿತ್ರಗಳಲ್ಲಿ ನಟಿಸಿದ್ದು ಕಡಿಮೆಯೇ. ಹಿಂದಿಯಲ್ಲಿ ಅಮಿತಾಭ್‌ ಬಚ್ಚನ್‌ ಬಿಟ್ಟರೆ, ದಕ್ಷಿಣ ಭಾರತದ ಚಿತ್ರರಂಗದಲ್ಲಿ
ಅಂದಿನಿಂದ ಇಂದಿನ ಜನರೇಶನ್‌ ಹೀರೋಗಳ ಜೊತೆ ನಟಿಸಿದ ಏಕೈಕ ಸ್ಟಾರ್‌ ನಟ ಎಂದರೆ ಅದು ಅಂಬರೀಶ್‌. ರಜನಿಕಾಂತ್‌, ಚಿರಂಜೀವಿ ಸೇರಿದಂತೆ
ಎಲ್ಲಾ ಸ್ಟಾರ್‌ ನಟರ ಸುತ್ತ ಹೊಸಬರು ಸುತ್ತುತ್ತಲೇ ಇರುತ್ತಾರೆ. ನಮ್ಮ ಸಿನಿಮಾದಲ್ಲೊಂದು ಗೆಸ್ಟ್‌ ಅಪಿಯರೆನ್ಸ್‌ ಮಾಡಿದರೆ, ಸಿನಿಮಾಕ್ಕೊಂದು ತೂಕ
ಬರುತ್ತದೆ ಎಂದು. ಆದರೆ, ಆ ನಟರು ತಮ್ಮದೇ ಒಂದು ಬೌಂಡರಿ ಹಾಕಿಕೊಂಡಿದ್ದರೆ, ಅಂಬರೀಶ್‌ ಮಾತ್ರ ತಾನು ಸ್ಟಾರ್‌, ಇವರ ಜೊತೆ ಮಾತ್ರ
ನಟಿಸಬೇಕು, ಹೊಸಬರಿಂದ ದೂರವಿರಬೇಕು ಎಂಬ ಯಾವ ಹಮ್ಮು-ಬಿಮ್ಮು ಇಲ್ಲದೇ, ತಮಗೆ ಸಮಯವಿದ್ದರೆ ಹೊಸಬರ ಸಿನಿಮಾದಲ್ಲಿ
ನಟಿಸಿದ್ದಾರೆ.ಅದರ ಪರಿಣಾಮವೇ ಇಡೀ ಚಿತ್ರರಂಗ ಅಂಬರೀಶ್‌ ಅವರನ್ನು ಅಷ್ಟೊಂದು ಪ್ರೀತಿಸುತ್ತಿತ್ತು ಎಂದರೆ ತಪ್ಪಲ್ಲ.

ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ರವಿಚಂದ್ರನ್‌, ಅನಂತ್‌ನಾಗ್‌, ಶಂಕರ್‌ನಾಗ್‌ ರಿಂದ ಹಿಡಿದು ನಂತರದ ಪ್ರಭಾಕರ್‌, ಅರ್ಜುನ್‌ ಸರ್ಜಾ, ಶಿವರಾಜಕುಮಾರ್‌, ಜಗ್ಗೇಶ್‌, ಆ ನಂತರದ ಉಪೇಂದ್ರ, ಸುದೀಪ್‌, ಪುನೀತ್‌, ದರ್ಶನ್‌, ಯಶ್‌, ಚಿರಂಜೀವಿ ಸರ್ಜಾ ಚಿತ್ರಗಳಲ್ಲೂ ಅಂಬರೀಶ್‌ ನಟಿಸಿದ್ದಲ್ಲದೇ ಹೊಸದಾಗಿ ಚಿತ್ರರಂಗಕ್ಕೆ ಹೀರೋಗಳಾಗಿ ಎಂಟ್ರಿಕೊಟ್ಟ ಪಂಕಜ್‌, ಸಚಿನ್‌ ಸೇರಿದಂತೆ ಇನ್ನು ಹಲವು ಯುವ ನಟರ ಚಿತ್ರಗಳಲ್ಲಿ ಅಂಬರೀಶ್‌ ನಟಿಸಿ ಅವರನ್ನು ಪ್ರೋತ್ಸಾಹಿಸಿದ್ದಾರೆ. ನಾವು ಸೂಕ್ಷ್ಮವಾಗಿ ಗಮನಿಸಬೇಕಾದ ಒಂದು ಅಂಶವೆಂದರೆ ಎಲ್ಲಾ ಜನರೇಶನ್‌ನ ನಟರಿಗೂ ಅಂಬರೀಶ್‌ ತಮ್ಮ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಇರುತ್ತಿತ್ತು. ಆ ಆಸೆಯನ್ನು ಅಂಬರೀಶ್‌ ಯಾವತ್ತೂ ಕಡೆಗಣಿಸಲಿಲ್ಲ. ಅದೇ ಕಾರಣದಿಂದ ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಅಂಬರೀಶ್‌ ವಿಶಿಷ್ಟ ವ್ಯಕ್ತಿತ್ವದ ನಟರಾಗಿ, ಸ್ನೇಹಜೀವಿಯಾಗಿ ಗುರುತಿಸಿಕೊಳ್ಳುತ್ತಾರೆ.

ಅಂಬಿಗೆ ಅಂಬಿಯೇ ಸಾಟಿ
ಅಂಬರೀಶ್‌ ಅವರ ಲುಕ್‌, ಅವರ ಮ್ಯಾನರೀಸಂ, ಅವರ ಖದರ್‌ ಕೆಲವು ಪಾತ್ರಗಳಿಗೆ ಇನ್ನೊಬ್ಬರ ಆಯ್ಕೆಯೇ ಇಲ್ಲದಂತಿದೆ. ಆ ಪಾತ್ರವನ್ನು ಅಂಬರೀಶ್‌ ಮಾಡಿದರಷ್ಟೇ ಚೆಂದ ಎಂಬಂತಿತ್ತು. ಅದಕ್ಕೆ ಉದಾಹರಣೆ “ಕುರುಕ್ಷೇತ್ರ’. ದರ್ಶನ್‌ ನಾಯಕರಾಗಿರುವ “ಕುರುಕ್ಷೇತ್ರ’ ಚಿತ್ರದಲ್ಲಿ ಅಂಬರೀಶ್‌ ಅವರು ಭೀಷ್ಮನ ಪಾತ್ರ ಮಾಡಿರುವುದು ನಿಮಗೆಲ್ಲಾ ಗೊತ್ತೇ ಇದೆ. ಆದರೆ, ಆರಂಭದಲ್ಲಿ ಅಂಬರೀಶ್‌ ಆ ಪಾತ್ರ ಮಾಡಲು ಒಪ್ಪಲಿಲ್ಲ. ನಿರ್ಮಾಪಕ ಮುನಿರತ್ನ ಹೋಗಿ, “ಭೀಷ್ಮನ ಪಾತ್ರವನ್ನು ನೀವೇ ಮಾಡಬೇಕು’ ಎಂದಾಗ, “ಅಂಬರೀಶ್‌ ನಾನು ಮಾಡೋದಿಲ್ಲ’ ಎಂದು ನೇರವಾಗಿ ಹೇಳಿದರಂತೆ. ಕೊನೆಗೆ ಅಂಬರೀಶ್‌ ಅವರು ತುಂಬಾ
ಇಷ್ಟಪಡುತ್ತಿದ್ದ ದರ್ಶನ್‌ ಹೋಗಿ, “ಅಪ್ಪಾಜಿ ಈ ಪಾತ್ರವನ್ನು ನೀವೇ ಮಾಡಿ’ ಎಂದಾಗಲೂ ಅಂಬಿ ಬಾಯಿಂದ ಮತ್ತದೇ ಉತ್ತರ. ಆಗ ದರ್ಶನ್‌, “ಸರಿ ಅಪ್ಪಾಜಿ, ನೀವು ಮಾಡದಿದ್ದರೆ ಪರ್ವಾಗಿಲ್ಲ, ಆದರೆ ನಿಮ್ಮನ್ನು ಬಿಟ್ಟು ಆ ಪಾತ್ರ ಮಾಡುವ ಇನ್ನೊಬ್ಬರನ್ನು ನೀವು ಸೂಚಿಸಿ, ನಾವು ಅವರಿಂದಲೇ ಮಾಡಿಸುತ್ತೇವೆ’ ಎಂದರಂತೆ. ಕೊನೆಗೆ ಅಂಬರೀಶ್‌ ಭೀಷ್ಮ ಪಾತ್ರ ಮಾಡಲು ಒಪ್ಪಿಕೊಂಡಿದ್ದು, ಖುಷಿಯಿಂದ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

Advertisement

ಅಂಬರೀಶ್‌ ಕೇವಲ ನಟರಾಗಿ ಉಳಿದವರಲ್ಲ, ರಾಜಕಾರಣಿಯಾಗಿಯೇ ದೊಡ್ಡ ಮಟ್ಟದಲ್ಲಿ ಬೆಳೆದವರು. ಒಂದು ಕಡೆ ರಾಜಕೀಯ ಒತ್ತಡ, ಇನ್ನೊಂದು ಕಡೆ ಆಗಾಗ ಕೈ ಕೊಡುತ್ತಿದ್ದ ಅವರ ಆರೋಗ್ಯ. ಆದರೆ, ಅಂಬರೀಶ್‌ ಮಾತ್ರ ತನ್ನನ್ನು ನಂಬಿ ಬಂದವರಿಗೆ, ಪ್ರೀತಿಯಿಂದ ಬಂದು, “ಅಣ್ಣಾ ಒಂದ್‌ ಸೀನ್‌ ಆದ್ರು ಬಂದು ಹೋಗಣ್ಣಾ …’ ಎಂದು ಕೇಳಿಕೊಂಡವರಿಗೆ ಇಲ್ಲ ಎಂದಿಲ್ಲ. ರಾಜಕೀಯ ಒತ್ತಡ, ಆರೋಗ್ಯ ಯಾವುದನ್ನೂ ಲೆಕ್ಕಿಸದೇ, ಸಿನಿಮಾಗಳಲ್ಲಿ ನಟಿಸಿ ಹೊಸಬರಿಗೆ ಆಶೀರ್ವಾದ ಮಾಡಿದ್ದಾರೆ. ಅದೇ ಕಾರಣದಿಂದ ಅಂಬರೀಶ್‌ ಅವರನ್ನು ಚಿತ್ರರಂಗ, ಅಭಿಮಾನಿಗಳು ಸ್ಮರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next