ಬೆಂಗಳೂರು: ಶನಿವಾರ ರಾತ್ರಿ ವಿಧಿವಶರಾದ ಸ್ಯಾಂಡಲ್‌ವುಡ್‌ನ ಹಿರಿಯ ನಟ ಹಾಗೂ ಕೇಂದ್ರದ ಮಾಜಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದ್ದು, ಕಣ್ಣೀರಿನ ವಿದಾಯ ಹೇಳಲಾಗುತ್ತಿದೆ.
ಕಂಠೀರವ ಸ್ಟೇಡಿಯಂನಲ್ಲಿ ಮಂಡ್ಯದ ಗಂಡು ಅಂಬರೀಶ್ ಅವರು ರಾಷ್ಟ್ರಧ್ವಜ ಹೊತ್ತು ಗಾಂಭೀರ್ಯದಲ್ಲಿ ಮಲಗಿದ್ದು, ಗಣ್ಯಾತೀಗಣ್ಯರು ಮತ್ತು ಅಭಿಮಾನಿಗಳು ಅಂತಿಮ ದರ್ಶನ ಪಡೆದು ಕಣ್ಣೀರಿಡುತ್ತಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪತ್ನಿ ಚನ್ನಮ್ಮ, ಪುತ್ರ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಜೊತೆಯಲ್ಲಿ ಆಗಮಿಸಿ ಅಂತಿಮ ದರ್ಶನ ಪಡೆದರು. ಅಂಬರೀಶ್ ಅವರ ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಅವರಿಗೆ ಸಾಂತ್ವನ ಹೇಳಿದರು.
ಸೂಪರ್‌ಸ್ಟಾರ್ ರಜನಿಕಾಂತ್ ಅವರು ಅಂತಿಮ ದರ್ಶನಕ್ಕೆ ಆಗಮಿಸಿ ನೆಚ್ಚಿನ ಮಿತ್ರನನ್ನು ನೆನೆದು ಕಣ್ಣೀರಿಟ್ಟರು. ಈ ವೇಳೆ ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಬಿಕ್ಕಿ ಬಿಕ್ಕಿ ಅತ್ತರು. ಕೆಲ ಹೊತ್ತು ಕುಳಿತು ತನ್ನ ನೆಚ್ಚಿನ ಮಿತ್ರನ ನೆನಪುಗಳನ್ನು ಮೆಲುಕು ಹಾಕಿ ರಜನಿಕಾಂತ್ ನಿರ್ಗಮಿಸಿದರು.
ಮಂಡ್ಯ ಮೈಸೂರು ಭಾಗದಿಂದ ಸಾವಿರಾರು ಅಭಿಮಾನಿಗಳು ವಿಶೇಷ ಬಸ್‌ಗಳು ಮತ್ತು ನೂರಾರು ವಾಹನಗಳಲ್ಲಿ ಅಂತಿಮ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ.
ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಮಂಡ್ಯಕ್ಕೆ ತರಬೇಕು ಎಂಬ ಒತ್ತಾಯ ಮಂಡ್ಯದ ಜನರಿಂದ ಕೇಳಿಬರಲಾರಂಭಿ ಸಿತ್ತು. ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಬೇಕು ಎಂದು ಆಗ್ರಹಿಸಿ ಮಧ್ಯರಾತ್ರಿ ಮಂಡ್ಯದಲ್ಲಿ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.