Advertisement

ರೆಬೆಲ್‌ ಹುಡುಗನ “ಖಾಕಿ’ಖದರ್‌

10:00 AM Jan 26, 2020 | Lakshmi GovindaRaj |

“ನಿನ್ನ ಮನಸ್ಸಿಗೆ ಯಾವುದು ತಪ್ಪು ಅನಿಸುತ್ತೋ, ಅದನ್ನು ಮಾಡಬೇಡ. ಆದರೆ, ಯಾವುದು ಸರಿ ಅನಿಸುತ್ತೋ ಅದನ್ನು ಮಾಡದೆ ಬಿಡಬೇಡ…’ ಆ ನಿಷ್ಠಾವಂತ ಪೊಲೀಸ್‌ ಅಧಿಕಾರಿಯೊಬ್ಬರು ಹೀಗೆ ಚಿಕ್ಕಂದಿನಲ್ಲಿರುವ ಆ ಹುಡುಗನಿಗೆ ಹೇಳಿದ ಮಾತುಗಳು ದೊಡ್ಡವ ನಾದಾಗ ಪುನಃ ರಿಂಗಣಿಸುತ್ತವೆ. ಅಲ್ಲಿಗೆ ಸರಿ-ತಪ್ಪುಗಳ ಅರಿತು ಇಡೀ ವ್ಯವಸ್ಥೆಯ ವಿರುದ್ಧವೇ ಅವನು ಹೋರಾಟಕ್ಕಿಳಿಯುತ್ತಾನೆ. ಅವನ ಜೊತೆ ಆ ಏರಿಯಾ ಜನರೂ ಸಾಥ್‌ ನೀಡುತ್ತಾರೆ.

Advertisement

ಅಷ್ಟಕ್ಕೂ ಆ ಪೊಲೀಸ್‌ಅಧಿಕಾರಿ ಆ ಹುಡುಗನ ಮುಂದೆ ಯಾಕೆ ಆ ಮಾತುಗಳನ್ನು ಹೇಳುತ್ತಾರೆ. ಆ ಹುಡುಗ ಮುಂದೆ ಯಾರ ವಿರುದ್ಧ ಹೋರಾಡುತ್ತಾನೆ, ಏನೆಲ್ಲಾ ಮಾಡ್ತಾನೆ ಎಂಬ ಕುತೂಹಲದೊಂದಿಗೇ “ಖಾಕಿ’ ಸಾಗುತ್ತದೆ. ಒಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ “ಖಾಕಿ’ಯಲ್ಲಿದೆ. ಶೀರ್ಷಿಕೆ ಕೇಳಿದೊಡನೆ, ಇದೊ “ಪೊಲೀಸ್‌ ಸ್ಟೋರಿ’ ಇರಬೇಕು ಅಂದುಕೊಳ್ಳುವಂತಿಲ್ಲ.

ಇಲ್ಲಿ ಪೊಲೀಸ್‌ ಇದ್ದಾರೆ, ಆ ವ್ಯವಸ್ಥೆಯಲ್ಲಿ ಒಳ್ಳೆಯವರು, ಕೆಟ್ಟವರೂ ಇದ್ದಾರೆ. “ಖಾಕಿ’ ಹಾಕ್ಕೊಂಡರಷ್ಟೇ ಪೊಲೀಸ್‌ ಅಲ್ಲ, ಖದರ್‌ ಇರೋ ಪ್ರತಿಯೊಬ್ಬನೂ ಪೊಲೀಸೇ’ ಎಂಬ ಅಂಶ ಚಿತ್ರದ ಹೈಲೈಟ್‌. ಇದೊಂದು ಭ್ರಷ್ಟಾಚಾರ ಹಿನ್ನೆಲೆಯಲ್ಲೇ ಸಾಗುವ ಕಥೆಯಾದ್ದರಿಂದ, ಹೊಡಿ, ಬಡಿ, ಕಡಿ, ಓಡು, ಹಿಡಿ ಅಂಶಗಳೇ ಹೆಚ್ಚು. ಹಾಗಂತ, ಬರೀ ಅದೇ ಇಲ್ಲ. ಒಂದು ಸಮಾಜಮುಖೀ ವಿಷಯ ಒಳಗೊಂಡಿದೆ.

ಗೆಳೆತನ, ಒಳ್ಳೇತನ, ಸ್ವಾಭಿಮಾನ ಒಂದಷ್ಟು ಎಮೋಷನ್ಸ್‌ ಅಂಶಗಳು “ಖಾಕಿ’ಯ ಓಟಕ್ಕೆ ಹೆಗಲು ಕೊಟ್ಟಿರುವುದು ವಿಶೇಷ. ಕೆಲವು ಚಿತ್ರಗಳಲ್ಲಿ ಕಥೆ ಇರಲ್ಲ, ಭರ್ಜರಿ ಹೊಡೆದಾಟಗಳಿರುತ್ತೆ. ಇನ್ನು ಕೆಲವು ಚಿತ್ರಗಳಲ್ಲಿ ಹಾಡು, ಫೈಟ್‌ ಹೊರತು ಬೇರೇನೂ ಇರಲ್ಲ. “ಖಾಕಿ’ ಚಿತ್ರದ ಶೀರ್ಷಿಕೆಗೆ ಪೂರಕವಾಗಿರುವಂತಹ ಕಥೆಯ ಜೊತೆಯಲ್ಲಿ ಸಮಾಜದ ಅವ್ಯವಸ್ಥೆಯನ್ನು ಎತ್ತಿ ತೋರಿಸಲಾಗಿದೆ. ವಾಸ್ತವ ಅಂಶಗಳ ಮೂಲಕ ರಾಜ್ಯ ಆಳುವ ಜನರ ಮೇಲೆ ಛಾಟಿ ಬೀಸಲಾಗಿದೆ.

ಇಂದು ನಡೆಯುತ್ತಿರುವ ವಿದ್ಯಮಾನಗಳನ್ನೇ ಇಟ್ಟುಕೊಂಡು, ನೋಡುವ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯದಲ್ಲಿ “ರೆಬೆಲ್‌’ ಆಗುವಷ್ಟರ ಮಟ್ಟಿಗೆ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಚಿತ್ರದಲ್ಲಿ ಕಥೆ ಫ್ರೆಶ್‌ ಅಂದುಕೊಳ್ಳುವಂತಿಲ್ಲ. ಆದರೆ, ವೇಗದ ಚಿತ್ರಕಥೆ ಸುಮ್ಮನೆ ನೋಡಿಸಿಕೊಂಡು ಹೋಗುತ್ತದೆ. ಕಮರ್ಷಿಯಲ್‌ಗೆ ಸಾಕ್ಷಿ ಭರ್ಜರಿ ಸ್ಟಂಟ್ಸ್‌. ಆ ಬಗ್ಗೆ ಯಾವುದೇ ತಕರಾರಿಲ್ಲ. ಅಲ್ಲಲ್ಲಿ ಕಾಣಿಸಿಕೊಳ್ಳುವ “ಸೀರಿಯಲ್‌’ ಮಾತು-ಕತೆ ಒಂದಷ್ಟು ನಗುವಿಗೆ ಕಾರಣವಾದಂತಿದೆ.

Advertisement

ಖಾಕಿ ಮತ್ತು ಕಾಮನ್‌ ಮ್ಯಾನ್‌ ಜೊತೆ ಖಳನಟರ ನಡುವೆ ನಡೆಯುವ ಕಣ್ಣಾಮುಚ್ಚಾಲೆ ಎಲ್ಲೋ ಒಂದು ಕಡೆ ತಾಳ್ಮೆ ಕೆಡಿಸುತ್ತೆ ಎನ್ನುವಷ್ಟರಲ್ಲೇ ಚೆಂದದ ಹಾಡೊಂದು ಕಾಣಿಸಿಕೊಂಡು ರಿಲ್ಯಾಕ್ಸ್‌ ಮೂಡ್‌ಗೆ ಕರೆದೊಯ್ಯುತ್ತದೆ. ಕೆಲವೆಡೆ ಸಣ್ಣಪುಟ್ಟ ಎಡವಟ್ಟುಗಳನ್ನು ಹೊರತುಪಡಿಸಿದರೆ, ಕಾಮನ್‌ ಮ್ಯಾನ್‌ “ಖದರ್‌’ ನೋಡಲ್ಲಡ್ಡಿಯಿಲ್ಲ. ನಾಯಕನಿಗೆ ಚಿಕ್ಕಂದಿನಿಂದಲೂ ಖಾಕಿ ಅಂದರೆ ಆಗಲ್ಲ.

ಪೊಲೀಸ್‌ ವಿಷಯ ಎತ್ತಿದರೆ ಸಾಕು ಅವನಿಗೆ ಸಿಕ್ಕಾಪಟ್ಟೆ ಕೋಪ. ಅದಕ್ಕೆ ಕಾರಣವೂ ಇದೆ. ಪೊಲೀಸರಿಂದ ಚಿಕ್ಕಂದಿನಲ್ಲಿ ಎದುರಾದ ಸಮಸ್ಯೆಯೇ ಆ ಕಾರಣ. ದೊಡ್ಡವನಾದ ಮೇಲೂ ಅವನ ಕೋಪ ದಲ್ಲಿ ಬದಲಾವಣೆ ಇರಲ್ಲ. ನಾಯಕ ತಾನು ವಾಸಿಸುವ ಏರಿಯಾದ ಜನರಿಗೆ ಪ್ರಿಯ. ಆ ಏರಿಯಾ ಎಂಎಲ್‌ಎ, ಒಬ್ಬ ಉದ್ಯಮಿ ಜೊತೆ ಸೇರಿ ಮಾಡುವ ಕುತಂತ್ರವೊಂದು ಇಡೀ ಜನರ ನೆಮ್ಮದಿಯನ್ನೇ ಹಾಳು ಮಾಡುತ್ತೆ.

ಹಾಗಾದರೆ ಆ ರಾಜಕಾರಣಿ ಮಾಡುವ ಕುತಂತ್ರವೇನು, ಆ ನಾಯಕ ಅದಕ್ಕೇನು ಮಾಡುತ್ತಾನೆ. ಆ ಏರಿಯಾ ಜನರ ಸಹಕಾರ ಹೇಗಿರುತ್ತೆ ಎಂಬ ಸಣ್ಣ ಕುತೂಹಲವಿದ್ದರೆ, “ಖಾಕಿ’ಯ ದರ್ಶನ ಮಾಡಬಹುದು. ಚಿರಂಜೀವಿ ಸರ್ಜಾ ಎಂದಿಗಿಂತ ಚೆನ್ನಾಗಿ ಕಾಣಿಸುವುದರ ಜೊತೆಗೆ ಸ್ಟಂಟ್ಸ್‌ ಮಾಡುವಾಗಲೂ ಇಷ್ಟವಾಗುತ್ತಾರೆ. ತಾನ್ಯಾಹೋಪ್‌ ಗ್ಲಾಮರಸ್‌ ಆಗಿಯೂ, ನಾಯಕನಿಗೆ ಸಾಥ್‌ ಕೊಡುವ ಪ್ರೇಮಿಯಾಗಿಯೂ ಗಮನಸೆಳೆಯುತ್ತಾರೆ.

ಭ್ರಷ್ಟ ಶಾಸಕರಾಗಿ ಶಿವಮಣಿ ಕೂಡ ರಿಜಿಸ್ಟರ್‌ ಆಗುತ್ತಾರೆ. ಉಳಿದಂತೆ ಛಾಯಾಸಿಂಗ್‌, ಶಶಿ, ದೇವ್‌ಗಿಲ್‌, ರಘುರಾಮಪ್ಪ, ಸುಧಾ ಬೆಳವಾಡಿ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ರಿತ್ವಿಕ್‌ ಮುರಳೀಧರ್‌ ಅವರ ಹಾಡಿಗಿಂತ, ಹಿನ್ನೆಲೆ ಸಂಗೀತದಲ್ಲಿ ಸ್ವಾದವಿದೆ. ಬಾಲ ಅವರ ಛಾಯಾಗ್ರಹಣದಲ್ಲಿ ಖಾಕಿಯ ಖದರ್‌ ಜೊತೆ ಅಂದವನ್ನೂ ಹೆಚ್ಚಿಸಿದೆ.

ಚಿತ್ರ: ಖಾಕಿ
ನಿರ್ಮಾಣ: ತರುಣ್‌ ಶಿವಪ್ಪ, ಮಾನಸ ತರುಣ್‌
ನಿರ್ದೇಶನ: ನವೀನ್‌ರೆಡ್ಡಿ ಬಿ.
ತಾರಾಗಣ: ಚಿರಂಜೀವಿ ಸರ್ಜಾ, ತಾನ್ಯಾ ಹೋಪ್‌, ಶಿವಮಣಿ, ಛಾಯಾಸಿಂಗ್‌, ಶಶಿ, ರಘುರಾಮಪ್ಪ, ದೇವ್‌ಗಿಲ್‌ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next