Advertisement

ಘಾಟಿ ಕುಸಿತ ನಾವೇ ಮಾಡಿಕೊಂಡದ್ದು: ಒಂದಲ್ಲ, ಹತ್ತು ಹಲವು ಕಾರಣ

09:55 AM Aug 21, 2018 | |

ಕುಂದಾಪುರ: ಪಶ್ಚಿಮ ಘಟ್ಟದ ಮೆತ್ತನೆ ಮಣ್ಣಿನ ಧಾರಣಾ ಸಾಮರ್ಥ್ಯ ಅಳೆಯದೆ ಬೃಹತ್‌ ಕಾಮಗಾರಿಗಳನ್ನು ನಡೆಸುತ್ತಿರುವುದು ಹಾಗೂ ಮಿತಿಮೀರಿದ ಭಾರ ಹೊತ್ತ ಘನ ವಾಹನಗಳ ಎಡೆಬಿಡದ ಸಂಚಾರ ಇಂದಿನ ಭೂ ಕುಸಿತಕ್ಕೆ ಕಾರಣವಾಗುತ್ತಿದೆಯೇ ಎಂಬ ಪ್ರಶ್ನೆಗೆ ಹೌದೆಂಬ ಉತ್ತರ ಎಲ್ಲೆಡೆಯಿಂದ ಲಭ್ಯವಾಗುತ್ತಿದೆ.

Advertisement

ಶಿರಾಡಿ, ಚಾರ್ಮಾಡಿ, ಆಗುಂಬೆ, ಬಾಳೆಬರೆ, ಮಡಿಕೇರಿ ಘಾಟಿ ರಸ್ತೆಗಳಲ್ಲಿ ಸುಮಾರು ನಾಲ್ಕು ತಿಂಗಳಿಂದ ನಿರಂತರವಾಗಿ ಭೂ ಕುಸಿತ ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರನ್ನು ಸಂಪರ್ಕಿಸಿದಾಗ, “ಪಶ್ಚಿಮ ಘಟ್ಟವನ್ನು ಬಗೆದು ಮಾಡುತ್ತಿರುವ ಬೃಹತ್‌ ಕಾಮಗಾರಿಗಳಿಂದ ಭಾರೀ ಘಟ್ಟದ ಬುಡ ಕಂಪನಕ್ಕೆ ಒಳಗಾಗುತ್ತಿದೆ. ಘನ
 ವಾಹನಗಳ ಓಡಾಟ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. ಇದರೊಂದಿಗೆ ಧಾರಣಾ ಸಾಮರ್ಥ್ಯದ ಬಗ್ಗೆ ಆಳವಾದ ಅಧ್ಯಯನ ನಡೆಸದೆ ನಡೆಸುವ ಕಾಮಗಾರಿಗಳೂ ತನ್ನ ಕೊಡುಗೆ ನೀಡುತ್ತಿವೆ. ಆದ್ದರಿಂದಲೇ ನಾಲ್ಕೈದು ವರ್ಷಗಳಿಂದ ಈ ರಸ್ತೆಗಳಲ್ಲಿ ಭೂ ಕುಸಿತ ಪ್ರಮಾಣ ಹೆಚ್ಚಿದೆ’ ಎನ್ನುತ್ತಾರೆ.
ಮೆತ್ತನೆ ಮಣ್ಣು ಪಶ್ಚಿಮ ಘಟ್ಟದ ಭೌಗೋಳಿಕ ವಿನ್ಯಾಸದಲ್ಲಿ ಪ್ರಮುಖವಾಗಿರುವುದು ಮೆಕ್ಕಲು ಮಣ್ಣು, ಶೋಲಾ ಹುಲ್ಲುಗಾವಲು, ವಿಶಾಲ ಕಾಡು. ಹುಲ್ಲಿನ ಕೆಳಗೆ ಅಭ್ರಕ, ಮ್ಯಾಂಗನೀಸ್‌ನಂಥ ಖನಿಜಗಳನ್ನು ಒಳಗೊಂಡ ಶಿಲಾಪದರವಿದೆ. ಇದರಡಿ ನೀರು ಸಂಗ್ರಹವಾಗುತ್ತದೆ. ಈ ನೀರೇ ನಮ್ಮೂರ ಬಾವಿ, ಕೆರೆಗಳಿಗೆ ಅಂತರ್ಜಲವಾಗಿರುವುದು. ಲಕ್ಷಾಂತರ ವರ್ಷಗಳಿಂದ ಎಲೆ, ಮರಗಳ ತ್ಯಾಜ್ಯ ದಿಂದ ಜೈವಿಕ ಸಂಕುಲದಿಂದ ಸೃಷ್ಟಿಯಾದ ಈ ಮಣ್ಣು ಗಟ್ಟಿ ಮಣ್ಣಲ್ಲ ಎನ್ನುತ್ತಾರೆ ಭೂವಿಜ್ಞಾನ ತಜ್ಞರು. ಹೆದ್ದಾರಿಯಾದ ಕಾಲುದಾರಿ ಟಿಪ್ಪು ಕಾಲದಲ್ಲಿ ಕಾಲುದಾರಿ ಆಗಿದ್ದ ಪ್ರದೇಶ ಬ್ರಿಟಿಷರ ಕಾಲದಲ್ಲಿ ರಸ್ತೆಯಾಯಿತು. ಬಳಿಕ ಹೆದ್ದಾರಿ ಆಯಿತು. ಪ.ಘಟ್ಟಕ್ಕೆ ಇವುಗಳನ್ನು ಸಹಿಸುವ ಸಾಮರ್ಥ್ಯವಿಲ್ಲ.

ಅಸಲಿಗೆ ಪಶ್ಚಿಮ ಘಟ್ಟದಲ್ಲಿ ರಸ್ತೆ ಮಾಡುವಾಗ ನೀರ ಹರಿವಿಗೆ ಸೂಕ್ತ ವ್ಯವಸ್ಥೆ ಮಾಡಬೇಕಿತ್ತು. ನೀರು ಭೂಮಿಯಲ್ಲಿ ಇಂಗುವುದು ಮತ್ತು ಗುಡ್ಡದಿಂದ ಇಳಿಯುವ ನೀರಿನಿಂದಾಗಿ ಮಣ್ಣು ಸಡಿಲವಾಗುತ್ತದೆ. ಅದನ್ನು ತಡೆಯಲು ನೀರು ಹರಿಯುವಿಕೆಗೆ ವೈಜ್ಞಾನಿಕವಾಗಿ ರೂಪುರೇಷೆ ತಯಾರಿಸಿದರೆ ಭೂ ಕುಸಿತ ತಡೆಯಬಹುದು. ಇದಲ್ಲದೆ ಘಟ್ಟದಲ್ಲಿ ಅವ್ಯಾಹತವಾಗಿ ನಡೆಯುವ ಅರಣ್ಯ ಲೂಟಿಯಿಂದ ಮರಗಳ ಕೊರತೆಯಿಂದ ಮಣ್ಣು ಸಡಿಲಾಗುತ್ತದೆ. ಜತೆಗೆ ಎತ್ತಿನಹೊಳೆ, ಪೈಪ್‌ಲೈನ್‌ನಂತಹ ಕಾಮಗಾರಿ, ಕಪ್ಪು ಕಲ್ಲಿನ ಗಣಿಗಾರಿಕೆಯೂ ಕಾರಣವಾಗು
ತ್ತಿದೆ. ಕಾಮಗಾರಿ ಸಂದರ್ಭ ರಸ್ತೆ ಬಗ್ಗೆ ಮಾತ್ರ ಗಮನಹರಿಸಿ ಭೂವಿಜ್ಞಾನಿಗಳ ಅಭಿಪ್ರಾಯ ಪಡೆಯದಿರುವುದು, ಮಳೆಗಾಲದ ಅವಧಿಯಲ್ಲಿ ನಡೆಯುವ ಕಾರ್ಯಾಚರಣೆ ಮುಂದಿನ ವರ್ಷದ ಮಳೆಯನ್ನು ಆಧರಿಸದೇ ತಾತ್ಕಾಲಿಕ ಶಮನ ಕಾರ್ಯ ನಡೆಸುವುದು. ನದಿ ಆರಂಭವಾಗುವ ಗುಡ್ಡದಲ್ಲಿ ಮೂಲವನ್ನು ತಿರುಗಿಸಿ ಇತರ ಕಾಮಗಾರಿ ನಡೆಸುವುದೂ ಈ ಅನಾಹುತಗಳಿಗೆ ಕಾರಣವಾಗುತ್ತಿದೆ ಎನ್ನುತ್ತಾರೆ ಪರಿಣಿತರು.

ಪಶ್ಚಿಮ ಘಟ್ಟ ಮೆತ್ತನೆ ಮಣ್ಣಿಗೆ ಭಾರೀ ರಸ್ತೆಗಳು ಒಗ್ಗವು. ಇಲ್ಲಿ ನೀರ ಹರಿವಿಗೆ ಬೇಕಾದಂತೆ ವೈಜ್ಞಾನಿಕವಾಗಿ ಕಾಮಗಾರಿ ನಡೆಸದ ಕಾರಣ ಭೂ ಕುಸಿತ ಸಂಭವಿಸುತ್ತದೆ. ರಸ್ತೆಯ ಅಡಿಯ ಮಣ್ಣು ಸಡಿಲಗೊಳ್ಳದಂತೆ ನೀರು ಹರಿದು ಹೋಗಲು ಅನುವು ಮಾಡಿಕೊಟ್ಟರೆ ರಸ್ತೆ ಕುಸಿಯದು.
-ಪ್ರೊ| ಎಸ್‌.ಜಿ. ಮಯ್ಯ,  ಎನ್‌ಯಟಿಕೆ, ನಿವೃತ್ತ ಪ್ರಾಧ್ಯಾಪಕರು

Advertisement

Udayavani is now on Telegram. Click here to join our channel and stay updated with the latest news.

Next