ವಾಷಿಂಗ್ಟನ್: ವಿಚ್ಛೇದಿತರ ಮಕ್ಕಳೇ ಮುಂದೆ ವಿಚ್ಛೇದನಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು! ಅಚ್ಚರಿಯಾದರೂ ಇದು ಸತ್ಯ ಎನ್ನುತ್ತಿದೆ ಅಧ್ಯಯನವೊಂದರ ವರದಿ. ವಿಚ್ಛೇದಿತರ ಮಕ್ಕಳು ಎರಡು ಕುಟುಂಬಗಳ ಆರೈಕೆ, ಪ್ರೀತಿ, ವಾತ್ಸಲ್ಯದಲ್ಲಿ ಬೆಳೆದಿರುತ್ತಾರೆ. ಮುಂದೆ ಹೊಂದಾಣಿಕೆ ಸೇರಿ ಇನ್ನಾವುದೋ ಕಾರಣಕ್ಕಾಗಿ ಬೇರ್ಪಡುವ ಸಾಧ್ಯತೆಗಳು ಹೆಚ್ಚೆಚ್ಚು ಕಂಡು ಬರುತ್ತವೆ. ಆನುವಂಶಿಕ ಗುಣವೂ ಇದಕ್ಕೊಂದು ಪ್ರಮುಖ ಕಾರಣವಾಗಿ ಕಂಡುಬರುತ್ತದೆ ಎಂದು ಅಮೆರಿಕ ಮನಶಾಸ್ತ್ರ ತಜ್ಞರ ತಂಡವೊಂದು ಅಭಿಪ್ರಾಯಪಟ್ಟಿದೆ.
ಸ್ವೀಡನ್‌ನ ಕುಟುಂಬಗಳನ್ನು ನೋಂದಣಿ ಮಾಡಿಸಿಕೊಂಡು ಈ ಅಧ್ಯಯನ ನಡೆಸಲಾಗಿದ್ದು, ಅವರ ವಿವಾಹ ದಾಖಲೆಗಳನ್ನು ಹಾಗೂ ವಿಚ್ಛೇದನಕ್ಕೆ ಒಳಗಾದವರ ಬಗ್ಗೆ ಮಾಹಿತಿ ಮತ್ತು ಕಾರಣಗಳನ್ನು ಸಂಗ್ರಹಿಸಿದಾಗ ಈ ಅಂಶಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವರ್ಜೀನಿಯಾ ಕಾಮನ್ವೆಲ್ತ್ ವಿಶ್ವವಿದ್ಯಾಲಯ(ವಿಸಿಯು)ದ ಸಹಾಯಕ ಪ್ರೊಫೆಸರ್ ಜೆಸ್ಸಿಕಾ ಸಲ್ವೆಟೋರ್, “”ಕುಟುಂಬಗಳಲ್ಲಿ ವಿಚ್ಛೇದನ ಏಕೆ ನಡೆಯುತ್ತಿವೆ? ಎನ್ನುವ ಮೂಲಭೂತವಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧ್ಯಯನ ನಡೆಸಿದ್ದೇವೆ. ಸ್ವೀಡಿಷ್ ಕುಟುಂಬ ಗಳನ್ನೇ ಇದಕ್ಕೆ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಅಧ್ಯಯನ ನಡೆಸಿದೆವು. ಇದರಿಂದ ಆನುವಂಶಿಕ ಕಾರಣಗಳೇ ಇದಕ್ಕೆ ಪ್ರಬಲ ಕಾರಣ ಎನ್ನುವುದನ್ನು ಕಂಡುಕೊಂಡಿದ್ದೇವೆ. ಅಷ್ಟೇ ಅಲ್ಲ ಅದನ್ನು ಸಾಬೀತು ಪಡಿಸಿದ್ದೇವೆ” ಎಂದು ಹೇಳಿದ್ದಾರೆ. ಜೆಸ್ಸಿಕಾ ಸಲ್ವೆಟೋರ್ ಅವರು ಮನಶಾಸ್ತ್ರ ವಿಜ್ಞಾನಕ್ಕೆ ಸಂಬಂಧಿಸಿ ಅಧ್ಯಯನ ವರದಿ ಸಿದ್ಧಪಡಿಸಿ, ಬರಹದ ಮೂಲಕ ದಾಖಲಿಸಿದ ಮೊದಲ ಲೇಖಕರಾಗಿದ್ದಾರೆ.