Advertisement
ಗೆಳೆಯಾ,ನಿನಗೆ ಕೊನೆಯ ಪತ್ರ ಬರೆಯಲು ಕುಳಿತಿದ್ದೇನೆ. ಕೈ ನಡುಗುತ್ತಿದೆ, ಕೈಕೊಟ್ಟ ಅದೃಷ್ಟವನ್ನು ಹಳಿಯುತ್ತಾ, ನನ್ನನ್ನು ನಾನೇ ಶಪಿಸಿಕೊಳ್ಳುತ್ತಾ ಕೆಲವು ಸಾಲುಗಳನ್ನಾದರೂ ಕಷ್ಟಪಟ್ಟು ಈ ಪತ್ರದಲ್ಲಿ ತುಂಬಿಸಲು ಹೆಣಗುತ್ತಿದ್ದೇನೆ. ಕಣ್ಣಿಂದ ಒಂದೊಂದೇ ಹನಿಗಳು ಜಾರುತ್ತಿವೆ, ಥೇಟ್ ನಿನ್ನ ನೆನಪಿನ ಹಾಗೆ. ಇಷ್ಟು ದಿನಗಳೂ ಅವು ಕೊಡುವ ಸುಳ್ಳು ಭರವಸೆಗಳಿಂದಲೇ ಜೀವ ಕೈಯಲ್ಲಿ ಹಿಡಿದುಕೊಂಡು ಒಂದೊಂದೇ ಹೆಜ್ಜೆಯನಿಡುತ್ತಿದ್ದೆ. ಅಂಕೆ ತಪ್ಪಿದರೂ ಕೈ ಹಿಡಿದೆತ್ತಲು ನೀನಿದ್ದೀಯ ಎಂಬ ಸಣ್ಣ ಭರವಸೆಯಾದರೂ ಇತ್ತು. ಆದರೆ ಈಗ? ತುಂಬಾ ದೊಡ್ಡ ಜಗದೊಳಗೆ ಯಾಕೋ ಒಂಟಿಯಾಗಿಬಿಟ್ಟೆ.
Related Articles
ಬದುಕು ಒಂದೊಂದು ಸಲ ತುಂಬಾ ಕ್ರೂರಿ ಅನ್ನಿಸಿಬಿಡುತ್ತೆ. ಇಲ್ಲಿ ನಮ್ಮಂಥವರ ಪ್ರೀತಿ ಗುಣಿಸಿಕೊಳ್ಳೋದಿಲ್ಲ. ಕೇವಲ ಕಳೆದುಕೊಳ್ಳುತ್ತದೆ. ಕೆಲವು ಬಿಡಿಸಲಾರದ ಬಂಧನಗಳ ಸಂಕೋಲೆಗಳು ಒಂದು ನಿರ್ಮಲವಾದ ಪ್ರೀತಿಯನ್ನ ಬಂಧಿಸಿಬಿಡುತ್ತವೆ. ನನ್ನಂಥ ಸೆಂಟಿಮೆಂಟಲ್ ಹುಡುಗಿಯರು ಆ ಬಂಧನದಿಂದ ಬಿಡಿಸಿಕೊಳ್ಳಲಾರದೆ ಕಣ್ಣೀರಿಡುತ್ತಾರೆ. ಹುಡುಗಿಯರೆಂದರೆ ಬರೀ ಕೈಕೊಡೋರು ಅನ್ನುವ ಮಾತಿಗೆ ಮತ್ತಷ್ಟು ಪುರಾವೆ ಒದಗಿಸುತ್ತಾರೆ. ಒಂದಷ್ಟು ಧೈರ್ಯ ತೆಗೆದುಕೊಂಡು ಒಂದಡಿ ಮುಂದಿಟ್ಟರೂ ಕಾಣದ ಕೈಗಳು ಮತ್ತಷ್ಟು ಹಿಂದಕ್ಕೆಳೆಯುತ್ತವೆ. ಬದುಕು ಅಂದ್ರೆ ಕಾಂಪ್ರೊಮೈಸ್ ಅಂದೊRಂಡಿ¨ªೆ. ಆದರೆ ಇಷ್ಟೊಂದು ಅಂತ ನಿನ್ನಾಣೆ ಗೊತ್ತಿರಲಿಲ್ಲ.
Advertisement
ಮನಸ್ಸು ಮುರಿದುಕೊಂಡು ಇದ್ದಕ್ಕಿದ್ದಂತೆ ಎದ್ದು ಹೋಗಿದ್ದು ಯಾಕೆ ಅಂದೆಯಾ? ಬದಲಾದ ಸನ್ನಿವೇಶದಲ್ಲಿ ನನ್ನ ಮುಂದಿದ್ದುದು ಎರಡು ಆಯ್ಕೆ ಕಣೊ.. ಅಪ್ಪ ಅಮ್ಮ ಮತ್ತು ನೀನು. ನಾನು ಮೊದಲನೆಯದನ್ನು ಆಯ್ದುಕೊಂಡು ಮುದ್ದಿನ ಮಗಳು ಅನ್ನಿಸಿಕೊಂಡರೂ, ಪ್ರೇಮಲೋಕದ ಪಾಲಿಗೆ ಕೈ ಕೊಟ್ಟವಳು, ನಂಬಿಕೆ ದ್ರೋಹಿ ಅನ್ನಿಸಿಕೊಂಡೆ. ಅಂಥದೊಂದು ಆರೋಪ ಹೊತ್ತುಕೊಂಡೇ ನಿನ್ನ ಮನದ ಗುಡಿಯಿಂದ ಎದ್ದು ಹೋಗ್ತಾ ಇದ್ದೀನಿ.. ಪ್ಲೀಸ್, ನೀನು ನನ್ನನ್ನು ಪ್ರೀತಿಸಿದ್ದು ನಿಜವೇ ಆದರೆ ನನ್ನನ್ನು
ಕೊನೆಯ ಬಾರಿಗೆ ಕ್ಷಮಿಸಿ ಬಿಡು.
ನಿನ್ನಹರ್ಷಿತಾ