ಬೆಳಗಾವಿ: ವಿಶ್ವ ಜಲ ದಿನಾಚರಣೆ ಅಂಗವಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶುದ್ಧ ಜಲ ಸ್ವತ್ಛ ನೆಲ-ಆರೋಗ್ಯವಾಗಿರಲಿ ಜೀವ ಸಂಕುಲ ಕಾರ್ಯಕ್ರಮದ ಅಡಿಯಲ್ಲಿ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಹೊಳೆಮ್ಮಾ ದೇವಸ್ಥಾನದ ಬಳಿಯಿರುವ ಹಿರಣ್ಯಕೇಶಿ ನದಿಯಲ್ಲಿ ಸ್ವತ್ಛತಾ ಕಾರ್ಯ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಆನಂದ ಕುಡನ್ನವರ ಮಾತನಾಡಿ, ಪ್ರತಿಯೊಬ್ಬರಿಗೂ ನೀರಿನ ಮಹತ್ವ ಅರಿವಾಗಬೇಕು. ನೀರು ಜೀವನದ ಮೂಲಾಧಾರವಾಗಿದ್ದು ಶುದ್ಧ ಕುಡಿಯುವ ನೀರು ಲಭ್ಯವಿದ್ದಾಗ ಮಾತ್ರ ಸಮಾಜ ಆರೋಗ್ಯವಾಗಿರುತ್ತದೆ ಎನ್ನುವ ಸಂದೇಶ ಸಾರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಕಿರಣ ಚೌಗಲಾ ಮಾತನಾಡಿ, ಸಮಾಜಕ್ಕೆ ಉಪಯುಕ್ತ ಸಂದೇಶ ನೀಡುವ ಉದ್ದೇಶಕ್ಕಾಗಿ ಈ ಸ್ವತ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನದಿಗೆ ಸೇರಿ ನೀರನ್ನು ಕಲುಷಿತಗೊಳಿಸುವ ಒಂದು ಕ್ವಿಂಟಲನಷ್ಟು ಪ್ಲಾಸ್ಟಿಕ್, ಕಸಕಡ್ಡಿ,ಬಟ್ಟೆ ಮೊದಲಾದ ತ್ಯಾಜ್ಯಗಳನ್ನು ಸಂಗ್ರಹಿಸಿ ಸೂಕ್ತವಿಲೇವಾರಿ ಮಾಡುವ ಮೂಲಕ ನದಿಗಳ ದಿನಾಚರಣೆಯ ಅರ್ಥಪೂರ್ಣ ಆಚರಣೆಯಾಗಿದೆ ಎಂದರು.
ಸ್ವತ್ಛತಾ ಕಾರ್ಯದಲ್ಲಿ ಪಾಲ್ಗೊಂಡವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಹೊಳೆಮ್ಮಾ ದೇವಸ್ಥಾನದ ಅರ್ಚಕರು ಹಾಗೂ ಕಾರ್ಯದರ್ಶಿ ಎಚ್. ಎಲ್.ಪೂಜೇರಿ ಅವರು, ಸ್ವತ್ಛತಾ ಕಾರ್ಯ ಕೇವಲ ದಿನಾಚರಣೆಗೆ ಸೀಮಿತವಾಗಿರಬಾರದು. ಇಂತಹ ಮಹತ್ವ ಪೂರ್ಣ ಕಾರ್ಯ ಕೈಗೊಂಡ ಬಾನುಲಿ ಕೇಂದ್ರಕ್ಕೆ ಅಭಿನಂದಿಸಿ ಮುಂದಿನ ದಿನಗಳಲ್ಲಿ ಕಮೀಟಿ ವತಿಯಿಂದ ಇನ್ನೂ ಹೆಚ್ಚಿನ ಸಹಾಯ ಸಹಕಾರದ ಭರವಸೆ ನೀಡಿದರು.
ಯರಗಟ್ಟಿ,ಬಡಕುಂದ್ರಿ,ಬಸ್ತವಾಡ ಗ್ರಾಮಸ್ಥರು, ಸಖೀ ಕಿಶೋರಿಯರ ಸಂಘದ ಸದಸ್ಯರು ಸ್ವತ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಕ್ಷಯ ಘೋರ್ಪಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು