Advertisement
ಅಮ್ಮನ ಮನಸ್ಸು ಆಕಾಶದಂತೆ ವಿಶಾಲ ಎಂದು ಎಲ್ಲರೂ ಹೇಳುತ್ತಿದ್ದಾಗ ನನಗೆ ತಿಳಿಯುತ್ತಿರಲಿಲ್ಲ ಆಕೆ ಮುಗಿಲೆತ್ತರಕ್ಕೂ ಮಿಗಿಲೆಂದು. ತನಗಾಗಿ ಏನನ್ನೂ ಬಯಸದವಳು, ತನ್ನ ಮಕ್ಕಳಿಗಾಗಿ ಎಲ್ಲವನ್ನೂ ಕೂಡಿಡುವವಳು, ನಮ್ಮ ನಗುವಿನಲ್ಲೇ ಸಂತೋಷ ಕಾಣುವವಳು, ನಮಗಾಗಿಯೇ ಆಕೆಯ ಜೀವವನ್ನು ಮೀಸಲಿಡುವವವಳು ಅಮ್ಮಾ.
Related Articles
Advertisement
ಅಷ್ಟೊಳ್ಳೆ ಊಟಕ್ಕೆ ಚೆನ್ನಾಗಿಲ್ಲವೆಂದು ಹೇಳುತ್ತಿದವಳಿಗೆ ಮನೆಯ ಊಟ, ಅಮ್ಮನ ಕೈರುಚಿ ಅಂದ್ರೆ ಏನು ಎಂಬುವುದನ್ನು ಪಿಜಿ ಜೀವನ ಹೇಳಿಕೊಟ್ಟಿತು. ಮೊದಲ ದಿನ ಅಮ್ಮ ಕರೆ ಮಾಡಿದಾಗ ಕೇಳಿದ್ದೇ ಊಟ ಚೆನ್ನಾಗಿದೆಯಾ? ಹೊಟ್ಟೆ ತುಂಬಾ ತಿನ್ನು ಎಂದು.
ಯಾವ ಬಾಯಿಯಲ್ಲಿ ಚೆನ್ನಾಗಿಲ್ಲವೆಂದು ಹೇಳಲಿ. ಹೋಗುವ ಮೊದಲು “ಒಂದು ತಿಂಗಳು ಬೆಂಗಳೂರಿನಲ್ಲಿ ಒಳ್ಳೆಯ ಊಟ ಮಾಡಿ ಹೇಗಾಗುತ್ತೇನೆ ನೋಡು ಎಂದು ದೊಡ್ಡ ದೊಡ್ಡ ಮಾತುಗಳನ್ನಾಡಿ ಹೋಗಿದ್ದೆ. ಮೊದಲ ದಿನವೇ ಊಟ ಚೆನ್ನಾಗಿಲ್ಲ ಎಂದರೆ ಎಲ್ಲಿ ಮರ್ಯಾದೆ ಹೋಗುತ್ತದೊ ಎಂದು ಊಟ ಬಹಳ ಚೆನ್ನಾಗಿದೆ ಎಂದು ಬಿಟ್ಟೆ.
ಶುಚಿ ರುಚಿಯಾಗಿ ಅಮ್ಮ ತಯಾರಿಸುತ್ತಿದ್ದ ಊಟಕ್ಕೆ ರುಚಿಯಾಗಿಲ್ಲ ಎಂದು ನೂರು ಕೊರತೆಗಳನ್ನು ಹೇಳುತ್ತಿದ್ದ ನನಗೆ ಅಮ್ಮನ ಅಡುಗೆಯ ಬಗ್ಗೆ ಮೊದಲ ಬಾರಿಗೆ ಅರಿವಾಯಿತು. ಉಪ್ಪಿಲ್ಲ ಖಾರವಿಲ್ಲ ತಿನ್ನದೇ ಬೇರೆ ದಾರಿಯಿಲ್ಲ. ಒಂದು ತಿಂಗಳು ಅಮ್ಮನ ಕೈರುಚಿಯನ್ನು ಬಹಳ ಮಿಸ್ ಮಾಡ್ಕೊಂಡೆ. ಕೊರತೆಗಳನ್ನು ಹೇಳಿದ ಬಾಯಿ ಉಪ್ಪು ಖಾರವಿಲ್ಲದ ಊಟಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಯಿತು.
ಆ ಸಮಯದಲ್ಲಿ ಬಿಡಿಬಿಡಿಯಾಗಿ ಎಲ್ಲವೂ ನೆನಪಾಯಿತು. ಕೆಲವೊಮ್ಮೆ ಅಮ್ಮನ ಮೇಲೆ ಕೋಪಗೊಳ್ಳುತ್ತಿದ್ದೆ. ದೂರವಿದ್ದಾಗ ಅರಿವಾಯಿತು ನನ್ನ ದುಃಖಕ್ಕೆ ಸ್ಪಂದಿಸುವವಳು ಅವಳೆಂದು. ತಿನ್ನು ತಿನ್ನು ಎಂದು ಬಲವಂತ ಮಾಡಿದಾಗ ಸಿಟ್ಟಾಗುತ್ತಿದ್ದೆ. ದೂರವಿದ್ದಾಗ ಅರಿವಾಯಿತು ನನ್ನ ಹಸಿವನ್ನು ನೀಗಿಸುವವಳು ಅವಳೆಂದು. ಅನಾರೊಗ್ಯದ ಸಮಯದಲ್ಲಿ ಕಾಳಜಿ ವಹಿಸುವಾಗ ನಿರ್ಲಕ್ಷಿಸುತ್ತಿದ್ದೆ. ಒಬ್ಬಂಟಿಯಾಗಿ ನರಳುತ್ತಿದ್ದಾಗ ಅರ್ಥವಾಯಿತು ಆಕೆಯ ಕಾಳಜಿ ಏನೆಂದು. ಮಳೆಯಲ್ಲಿ ಒದ್ದೆಯಾಗಿ ಬಂದರೆ ಮನೆಯವರೆಲ್ಲಾ ಬಯ್ಯುತ್ತಿದ್ದರು. ಆದ್ರೆ ಅಮ್ಮ ಮಾತ್ರ ತನ್ನ ಸೆರಗಿನಿಂದ ತಲೆ ಒರೆಸುತ್ತಿದ್ದಳು.
ಹೊತ್ತೂತ್ತಿಗೆ ಮಮತೆಯ ಧಾರೆ ಎರೆಯುತ್ತಿದ್ದವಳ ನೆನಪಾಗಿ ಒಮ್ಮೆ ಆಕೆಯ ಮಡಿಲಿಗೆ ತಲೆಕೊಟ್ಟು ನನ್ನನ್ನು ಕ್ಷಮಿಸಿ ಬಿಡಮ್ಮಾ ಎಂದು ಕೇಳಬೇಕೆಂದೆನಿಸಿತು. ಪ್ರತಿ ಬಾರಿ ಕರೆ ಮಾಡಿದಾಗಲೂ ಆಕೆ ಮೊದಲು ಕೇಳುತ್ತಿದ್ದುದು ಊಟ ಮಾಡಿದೆಯಾ ಎಂದು. ಸ್ವಲ್ಪ ದಿನದ ಬಳಿಕ ಊಟ ಚೆನ್ನಾಗಿಲ್ಲ ಎಂದು ಹೇಳಿಯೇ ಬಿಟ್ಟೆ. ಆಗ ಅಮ್ಮ ಒಂದು ತಿಂಗಳು ಹೇಗಾದರೂ ಅಡ್ಜಸ್ಟ್ ಮಾಡಿಕೋ. ಇಲ್ಲವಾದರೆ ಹೊರಗಡೆ ತಿನ್ನು ಉಪವಾಸ ಕೂರಬೇಡ ಮಗ ಎಂದಳು.
ಆ ಮಾತುಗಳನ್ನು ಕೇಳುತಿದ್ದ ನನಗೆ ಅರಿವಾಯಿತು ಹೊತ್ತೂತ್ತು ರುಚಿಯಾದ ತುತ್ತು ನೀಡಿದವಳ ಮೇಲೆ ಕೋಪಗೊಂಡ ಪರಿಣಾಮವೇ ಇದೆಂದು. ಅಮ್ಮನನ್ನು ನೆನೆದು ಅಳುತ್ತಿದ್ದೆ. ಒಂದೆಡೆ ಆಕೆಯೂ ದುಃಖಗೊಳ್ಳುತ್ತಿದ್ದಳ್ಳೋ ಏನೋ. ಆದರೆ ಕರೆ ಮಾಡಿದಾಗ ಏನನ್ನೂ ವ್ಯಕ್ತ ಪಡಿಸುತ್ತಿರಲಿಲ್ಲ. ಕಾರಣ ದೂರದಲ್ಲಿರುವ ಮಗಳಿಗೆ ಎಲ್ಲಿ ಬೇಸರವಾಗಬಹುದೋ ಎಂದು. ಆಕೆ ಅಗಣಿತ ವಾತ್ಸಲ್ಯದ ಪರ್ವತ.
ಹಾಗೋ ಹೀಗೆ ಒಂದು ತಿಂಗಳ ಬಳಿಕ ಮನೆಗೆ ಬರುವ ತವಕ. ಬಂದವಳು ಮೊದಲು ಕೇಳಿದ್ದೆ ಅಮ್ಮ ನಾನಿಲ್ದೆ ಖುಷಿ ಆಯ್ತಾ ಎಂದು. ಆಗ ಅಮ್ಮ ಎಳೆಎಳೆಯಾಗಿ ಬಿಚ್ಚಿಟ್ಟಳು ಆಕೆಯ ದುಃಖ. ಅಮ್ಮನ ಪ್ರೀತಿಯೇ ಹಾಗೆ. ಅವಳಿಗೆ ಎಷ್ಟೇ ಕಷ್ಟಗಳಿದ್ದರೂ ತನ್ನವರು ಸುಖವಾಗಿರಬೇಕೆಂದು ಬಯಸುತ್ತಾಳೆ. ತನ್ನ ಮಕ್ಕಳಿಗೆ ಯಾವ ತೊಂದರೆಯೂ ಬರಬಾರದೆಂದು ಭಗವಂತನನ್ನು ಬೇಡುತ್ತಾಳೆ ಆ ಮಮತಾಮಯಿ..
-ಲಾವಣ್ಯ. ಎಸ್.
ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು