ಲಾಕ್‌ಡೌನ್‌ನಿಂದಾಗಿ ಚಿತ್ರೀಕರಣಕ್ಕೆ ಬ್ರೇಕ್‌ಕೊಟ್ಟಿದ್ದ ನಿರ್ದೇಶಕ ಆರ್.ಚಂದ್ರು ಮತ್ತೆ ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ. ತಮ್ಮ ಬಹುನಿರೀಕ್ಷಿತ “ಕಬ್ಜ’ ಚಿತ್ರದ ಚಿತ್ರೀಕರಣ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಡಿಸೆಂಬರ್20ರ ನಂತರ “ಕಬ್ಜ’ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಸುಮಾರು40 ದಿನಗಳಕಾಲ ಬೆಂಗಳೂರಿನ ಮೂರುಕಡೆಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಅದಕ್ಕಾಗಿ ಈಗ ಸೆಟ್‌ಕೆಲಸಗಳು ನಡೆಯುತ್ತಿವೆ. ಬೆಂಗಳೂರಿನ ಚಿತ್ರೀಕರಣ ಮುಗಿಸಿಕೊಂಡು ಚಿತ್ರತಂಡ ಪಾಂಡಿಚೇರಿಯತ್ತ ಪಯಣ ಬೆಳೆಸಲಿದೆ. ಪಾಂಡಿಚೇರಿ, ಜಾರ್ಖಂಡ್, ಮುಂಬೈ ಹಾಗೂ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ನಾಯಕಿಯ ಆಯ್ಕೆ ಬಹುತೇಕ ಅಂತಿಮವಾಗಿದ್ದು, ಚಂದ್ರು ಅವರು ಈಗಲೇ ಆ ಬಗ್ಗೆ ಹೇಳಲು ಸಿದ್ಧರಿಲ್ಲ. ಉಪೇಂದ್ರ ನಾಯಕರಾಗಿರುವ ಈ ಚಿತ್ರದ ಫೋಟೋಶೂಟ್, ಮೋಶನ್ ಪೋಸ್ಟರ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದಲ್ಲಿ ಉಪೇಂದ್ರ 80 ರ ದಶಕದ ಡಾನ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲೇ ಮೂಡಿ ಬರಲಿದೆ.
ಇದನ್ನೂ ಓದಿ : ಏಕದಿನ ಕ್ರಿಕೆಟ್ ನಲ್ಲಿ 12 ಸಾವಿರ ರನ್: ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ಕಿಂಗ್ ಕೊಹ್ಲಿ
ಬಹುತೇಕ ಸಿನಿಮಾ ಸೆಟ್‌ನಲ್ಲೇ ನಡೆಯುವ ಸಾಧ್ಯತೆ ಇದ್ದು, ಅದ್ಧೂರಿ ಬಜೆಟ್‌ನ ಸಿನಿಮಾ ಎಂದು ಈಗಾಗಲೇ ಗಾಂಧಿನಗರದಲ್ಲಿ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ “ಐ ಲವ್ ಯು’ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಷ್ಟೇ ಬಿಡುಗಡೆ ಮಾಡಿದ್ದ ಚಂದ್ರು, ಈ ಬಾರಿ ಬರೋಬ್ಬರಿ ಏಳು ಭಾಷೆಗಳಲ್ಲಿ ತಮ್ಮ ಹೊಸ ಸಿನಿಮಾವನ್ನು ಬಿಡುಗಡೆ ಮಾಡಲಿದ್ದಾರೆ.ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಮರಾಠಿ ಭಾಷೆಗಳಲ್ಲಿ ಈ ಚಿತ್ರವನ್ನು ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ಈ ಮೂಲಕ ಚಂದ್ರು ಪ್ಯಾನ್ ಇಂಡಿಯಾದತ್ತ ಮುಖ ಮಾಡಿದ್ದಾರೆ. “ಕಬ್ಜ’ ಮೇಲೆ ನಿರೀಕ್ಷೆ ಇದ್ದು, ಈ ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಚಂದ್ರು ಅವರದ್ದೇ.