ಇದು ಅಭಿಮಾನಿಗಳ ದಿನ… ಆದರೆ, ಈ ದಿನ ನಾವೆಲ್ಲ ಜೊತೆಯಾಗಿ ಸೇರಲು ಸಾಧ್ಯವಾಗುತ್ತಿಲ್ಲ… – ಹೀಗೆ ಉಪೇಂದ್ರ ಅಭಿಮಾನಿ ಗಳಿಗೆ ಮೊದಲೇ ಹೇಳಿಬಿಟ್ಟಿದ್ದಾರೆ. ಇದಕ್ಕೆ ಕಾರಣ, ಉಪೇಂದ್ರ ಹುಟ್ಟುಹಬ್ಬ. ಸೆ.18 ( ಇಂದು) ಎಂದರೆ ಅದು ರಿಯಲ್‌ಸ್ಟಾರ್‌ಅಭಿಮಾನಿಗಳ ಪಾಲಿಗೆ ದೊಡ್ಡ ಹಬ್ಬ. ಪ್ರತಿ ವರ್ಷ ಸೆ.17ರ ಮಧ್ಯಾಹ್ನ ದಿಂದಲೇ ಉಪೇಂದ್ರ ಅವರ ಮನೆಮುಂದೆ ಅಭಿಮಾನಿಗಳುಸೇರುತ್ತಿದ್ದರು. ಆದರೆ, ಈ ವರ್ಷಕೋವಿಡ್ ಕಾರಣದಿಂದ ಸಮೂಹ ಸಂಭ್ರಮವಿಲ್ಲ. ಹಾಗಂತ ಅಭಿಮಾನಿ ಗಳು ಸುಮ್ಮನೆ ಕುಳಿತಿಲ್ಲ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ತಾವು ಇದ್ದ ಜಾಗದಿಂದಲೇ ಸಂಭ್ರಮಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಉಪೇಂದ್ರ ಕೂಡಾ ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಲು ಮುಂದಾಗಿದ್ದಾರೆ. ಸದ್ಯ ಉಪೇಂದ್ರ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.
ಸದ್ಯ ಉಪೇಂದ್ರ ಏಕಕಾಲಕ್ಕೆ ಕನ್ನಡ ಐದಾರು ಸಿನಿಮಾಗಳಲ್ಲಿ ಬ್ಯುಸಿ ಯಾಗಿದ್ದಾರೆ. ಅಲ್ಲದೆ ತೆಲುಗಿನಲ್ಲಿ ಅಲ್ಲು ಅರ್ಜುನ್ ನಿರ್ಮಾಣ ಸಂಸ್ಥೆಯ “ಬಾಕ್ಸರ್’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಕನ್ನಡದಲ್ಲಿ ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ “ಹೋಮ್ ಮಿನಿಸ್ಟರ್’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಈಗಾಗಲೇ ಸೆನ್ಸಾರ್ ನಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ “ಹೋಮ್ ಮಿನಿಸ್ಟರ್’ ಥಿಯೇಟರ್‌ಗಳು ತೆರೆಯುತ್ತಿದ್ದಂತೆ, ಬಿಡುಗಡೆಯಾಗ ಲಿದೆ. ಇನ್ನು ಉಪೇಂದ್ರ ಅಭಿನಯದ “ಕಬj’ ಚಿತ್ರ ಕೂಡ ಬಹುಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಆರ್. ಚಂದ್ರು ಈ ಚಿತ್ರವನ್ನು ನಿರ್ದೇಶಿ ಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಒಂದಷ್ಟು ಭಾಗ ಚಿತ್ರೀಕರಣ ಪೂರ್ಣಗೊಂಡಿದ್ದು, ಬಾಕಿಯಿರುವ ಚಿತ್ರೀ ಕರಣ ಶುರು ವಾಗಲಿದೆ. ಜೊತೆಗೆ “ಬುದ್ಧಿವಂತ-2′ ಕೂಡಾ ಸಿದ್ಧವಾಗುತ್ತಿದೆ.
ಇದರೊಂದಿಗೆ ರವಿಚಂದ್ರನ್ ಅವರೊಂದಿಗೆ ಅಭಿನಯಿಸುತ್ತಿರುವ ತ್ರಿಶೂಲಂ ಚಿತ್ರದ ಚಿತ್ರೀಕರಣ ಕೂಡ ನಡೆಯುತ್ತಿದ್ದು, ಆ ಚಿತ್ರ ಕೂಡ ಈ ವರ್ಷದ ಕೊನೆಗೆ ತೆರೆಗೆ ಬರುವ ಸಾಧ್ಯತೆಯಿದೆ. ಇನ್ನು ಶಶಾಂಕ್ ಮತ್ತು ಮಂಜು ಮಾಂಡವ್ಯ ನಿರ್ದೇಶನದ ಎರಡು ಚಿತ್ರಗಳಲ್ಲಿ ಉಪೇಂದ್ರ ಅಭಿನಯಿಸುತ್ತಿದ್ದಾರೆ. ಇದಲ್ಲದೇ ಕೆ.ಮಾದೇಶ್ ನಿರ್ದೇಶನದ ಚಿತ್ರವೂ ಉಪ್ಪಿ ಕೈಯಲ್ಲಿದೆ.
ಪ್ಯಾನ್ ಇಂಡಿಯಾ ಕಬ್ಜ : ಸದ್ಯ ಉಪೇಂದ್ರ ಅವರ ಪಟ್ಟಿಯಲ್ಲಿರುವ ಸಿನಿಮಾಗಳಲ್ಲಿ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಚಿತ್ರವೆಂದರೆ ಅದು “ಕಬ್ಜ’. ಅದಕ್ಕೆ ಕಾರಣ ಪ್ಯಾನ್ ಇಂಡಿಯಾ. ಹೌದು, ಆರ್.ಚಂದ್ರು ನಿರ್ಮಾಣ, ನಿರ್ದೇಶನದ”ಕಬ್ಜ’ ಚಿತ್ರ ಈಗಾಗಲೇ ಕೆಲವು ದಿನಗಳ ಚಿತ್ರೀಕರಣ ಪೂರೈಸಿದೆ. ಚಿತ್ರದ ಫೋಟೋಶೂಟ್ ಹಾಗೂ ಝಲಕ್ ನೋಡಿದವರು ಸಿನಿಮಾ ಬಗ್ಗೆ ಖುಷಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ “ಕಬ್ಜ’ ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸೆಂಟಿಮೆಂಟ್, ಲವ್ ಸ್ಟೋರಿ ಚಿತ್ರಗಳ ಮೂಲಕ ಗಮನ ಸೆಳೆದಿರುವ ಚಂದ್ರು, ಈ ಬಾರಿ ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾ ಮಾಡಲು ಹೊರಟಿದ್ದಾರೆ. ಚಿತ್ರದಲ್ಲಿ ಉಪೇಂದ್ರ 80ರ ದಶಕದ ಡಾನ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲೇ ಮೂಡಿ ಬರಲಿದೆ. ಬಹುತೇಕ ಸಿನಿಮಾ ಸೆಟ್‌ನಲ್ಲೇ ನಡೆಯುವ ಸಾಧ್ಯತೆ ಇದ್ದು, ಅದ್ಧೂರಿ ಬಜೆಟ್‌ನ ಸಿನಿಮಾ ಎಂದು ಈಗಾಗಲೇ ಗಾಂಧಿ ನಗರದಲ್ಲಿ ಮಾತುಗಳು ಕೇಳಿಬರುತ್ತಿವೆ.
ಕುತೂಹಲ ಹೆಚ್ಚಿಸಿದ ಶೋ ರೀಲ್ : ನಿರ್ದೇಶಕ ಆರ್. ಚಂದ್ರು ಈಗಾಗಲೇ ಮಾಡಿರುವ ಚಿತ್ರೀಕರಣದ ತುಣುಕುಗಳನ್ನೆಲ್ಲಾ ಸೇರಿಸಿ ಒಂದು ಶೋ ರೀಲ್ ಮಾಡಿದ್ದಾರೆ. ಈಗಾಗಲೇ ಬೇರೆ ಬೇರೆ ಭಾಷೆಯ ಸಿನಿಮಾ ಮಂದಿ ಈ ಶೋ ರೀಲ್ ನೋಡಿ ಥ್ರಿಲ್ ಆಗಿದ್ದಾರೆ. ಜೊತೆಗೆ ಈ ಚಿತ್ರ ಬ್ಲಾಕ್ ಬ್ಲಿಸ್ಟರ್ ಆಗಲಿದೆ ಎಂದು ಭವಿಷ್ಯ ಕೂಡಾ ನುಡಿದಿದ್ದಾರೆ. ಉಪೇಂದ್ರ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ನಿರ್ದೇಶಕ ಆರ್.ಚಂದ್ರು ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಮ್‌ಗೊàಪಾಲ್ ವರ್ಮಾ ಈ ಥೀಮ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಮಾಸ್ ಅಭಿಮಾನಿ ಗಳು ಖುಷಿಯಾಗಿದ್ದಾರೆ. ಚಿತ್ರದ ಕಥೆಗೆ ಪೂರಕವಾಗಿ ಈ ಥೀಮ್ ಪೋಸ್ಟರ್ ಅನ್ನು ಡಿಸೈನ್ ಮಾಡಲಾಗಿದೆ.
ಸಿದ್ಧವಾಗುತ್ತಿದೆ ಬುದ್ಧಿವಂತ 2 : ಉಪೇಂದ್ರ ಈ ಹಿಂದೆ “ಬುದ್ಧಿವಂತ’ ಸಿನಿಮಾದಲ್ಲಿ ನಟಿಸಿರೋದು ನಿಮಗೆ ಗೊತ್ತೇ ಇದೆ. ಈಗ “ಬುದ್ಧಿವಂತ-2′ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಬ್ಯಾನರ್‌ನಡಿ ಟಿ.ಆರ್.ಚಂದ್ರಶೇಖರ್ ನಿರ್ಮಿಸುತ್ತಿದ್ದು, ಜಯರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸೋನಾಲ್ ಮೊಂತೆರೋ ನಾಯಕಿ. ಈಗಾಗಲೇ ಬಹುತೇಕ ಚಿತ್ರೀಕರಣವಾಗಿದೆ. ಈ ಚಿತ್ರದಲ್ಲೂ ಉಪೇಂದ್ರ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಡುವೆಯೇ ಜಯರಾಂ ನಿರ್ದೇಶನದಲ್ಲಿ ಹೊಸ ಚಿತ್ರವೊಂದರಲ್ಲೂ ಉಪೇಂದ್ರ ನಟಿಸುತ್ತಿದ್ದಾರೆ.
ನಿರ್ದೇಶನದತ್ತ ಉಪೇಂದ್ರ : ಉಪೇಂದ್ರ ಎಲ್ಲೇ ಹೋದರೂ ಅವರ ಅಭಿಮಾನಿಗಳು ಕೇಳುವ ಒಂದೇ ಒಂದು ಪ್ರಶ್ನೆ ಎಂದರೆ ಅದು ನಿರ್ದೇಶನ ಯಾವಾಗ ಎಂಬುದು. ಈಗ ಅದಕ್ಕೆ ಉಪೇಂದ್ರ ಉತ್ತರಿಸಿದ್ದಾರೆ. “ನಿರ್ದೇಶನಕ್ಕೆ ಬೇಕಾದ ಕಥೆ ಸಿದ್ಧವಾಗಿದೆ. ಶೀಘ್ರದಲ್ಲೇ ಅದರ ಟೈಟಲ್, ಫಸ್ಟ್‌ಲುಕ್ ಲಾಂಚ್ ಆಗಲಿದೆ’ ಎನ್ನುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.