Advertisement

ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಉತ್ತೇಜನ: ಬೇಕಿದೆ ಪೂರಕ ಸ್ಪಂದನೆ

11:56 AM Jul 12, 2020 | sudhir |

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಆದಾಯ ಮೂಲಗಳಲ್ಲಿ ರಿಯಲ್‌ ಎಸ್ಟೇಟ್‌ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರವೂ ಒಂದು. ವರ್ಷಾರಂಭದಲ್ಲಿ ಆರ್ಥಿಕತೆ ತುಸು ಚೇತರಿಕೆ ಹೊಂದಿದ್ದರಿಂದ ರಿಯಲ್‌ ಎಸ್ಟೇಟ್‌ ವಲಯ ದಲ್ಲಿಯೂ ಆಶಾದಾಯಕ ಬೆಳವಣಿಗೆ ಕಾಣುವ ಲಕ್ಷಣ ಗೋಚರಿಸಿತು. ಮರಳಿನ ಸಮಸ್ಯೆ ನಿವಾರಣೆಯಾಗಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಚುರುಕುಗೊಳ್ಳತೊಡಗುತ್ತಿದ್ದಂತೆಯೇ ವಕ್ಕರಿಸಿದ ಕೊರೊನಾ ಹೊಸ ಸಮಸ್ಯೆಯನ್ನು ತಂದೊಡ್ಡಿ ಈ ವಲಯವನ್ನು ಅಕ್ಷರಶಃ ಹೈರಾಣಾಗಿಸಿದೆ. ಆರ್ಥಿಕ ಸಂಕಷ್ಟ, ಮರಳಿನ ಕೊರತೆ, ಕಾರ್ಮಿಕರ ಸಮಸ್ಯೆ, ಕೊರೊನಾ ನಿರ್ಬಂಧಗಳು, ಸರಕಾರದಿಂದ ನಿರೀಕ್ಷಿತ ಪ್ರೋತ್ಸಾಹ ಲಭಿಸದೇ ಇರುವುದರಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಇನ್ನೂ ಪೂರ್ತಿಯಾಗಿ ಚೇತರಿಸಿಲ್ಲ. ರಿಯಲ್‌ ಎಸ್ಟೇಟ್‌ ಉದ್ಯಮಗಳ ಚೇತರಿಕೆಗೆ ಸರಕಾರ ವಿಶೇಷ ಯೋಜನೆಗಳನ್ನು ಘೋಷಿಸಿದರೆ ಕ್ಷೇತ್ರ ಮತ್ತೆ ಚಿಗಿತುಕೊಂಡು ಜಿಲ್ಲೆಯ ಆರ್ಥಿಕ ಪ್ರಗತಿಗೆ ಮುನ್ನುಡಿ ಬರೆಯಲಿದೆ.

Advertisement

ಮಂಗಳೂರು: ರಿಯಲ್‌ ಎಸ್ಟೇಟ್‌ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕತೆ, ಉದ್ಯೋಗಾವಕಾಶಗಳ ಸೃಷ್ಟಿ ಸೇರಿದಂತೆ ಒಟ್ಟು ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿರುವ ಕ್ಷೇತ್ರ. ಇದನ್ನು ಅವಲಂಬಿಸಿ ನೂರಾರು ಉದ್ದಿಮೆಗಳಿವೆ. ಲಕ್ಷಾಂತರ ಮಂದಿಗೆ ಉದ್ಯೋಗ ನೀಡುತ್ತಿದೆ. ಆದರೆ ಮೂರು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ಮತ್ತು ನಿರ್ಮಾಣ ಕ್ಷೇತ್ರ ಹಿನ್ನಡೆ ಅನುಭವಿಸುತ್ತಿದೆ. ಈಗ ಕೊರೊನಾ ಇನ್ನಷ್ಟು ಹೊಡೆತ ನೀಡಿದ್ದು, ಉದ್ಯಮವನ್ನು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಸಿದೆ. ಹೀಗಾಗಿ ಈ ಕ್ಷೇತ್ರದ ಚೇತರಿಕೆಗೆ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಪೂರಕ ಸ್ಪಂದನೆ ಅಗತ್ಯ. ನೆರವು ಉಪಕ್ರಮಗಳು ಲಭ್ಯವಾದರೆ ಈ ಉದ್ಯಮ ಪ್ರಗತಿ ಹೊಂದಲು ಸಾಧ್ಯ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಿಯಲ್‌ ಎಸ್ಟೇಟ್‌ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಪ್ರತ್ಯಕ್ಷವಾಗಿ ದುಡಿಮೆ ಕಂಡುಕೊಂಡಿರುವವರು ಸುಮಾರು 1.5 ಲಕ್ಷ ಮಂದಿ. ಸುಮಾರು 150 ಮಂದಿ ಬಿಲ್ಡರ್‌ಗಳಿದ್ದಾರೆ. ಸಿಮೆಂಟ್‌, ಕಬ್ಬಿಣ, ಸ್ಯಾನಿಟರಿವೇರ್‌, ಪೈಂಟಿಂಗ್‌, ಅಲ್ಯೂಮಿನಿಯಂ, ಪೀಠೊಪಕರಣ, ಇಂಟೀರಿಯರ್‌, ಎಂಜಿನಿಯರಿಂಗ್‌, ವಾಸ್ತು ವಿನ್ಯಾಸ, ಫ್ಯಾಬ್ರಿಕೇಶನ್‌, ಎಲೆಕ್ಟ್ರಿಕಲ್‌, ಸಾರಿಗೆ ಸಹಿತ ನೂರಾರು ಉಪ ವಿಭಾಗಗಳು ಇದರಲ್ಲಿವೆ.

ವಸ್ತುಸ್ಥಿತಿ
ಲೌಕ್‌ಡೌನ್‌ನಿಂದಾಗಿ ಎರಡು ತಿಂಗಳು ರಿಯಲ್‌ ಎಸ್ಟೇಟ್‌ ಮತ್ತು ನಿರ್ಮಾಣ ಕ್ಷೇತ್ರ ಸ್ಥಗಿತಗೊಂಡಿದ್ದು, ಈಗ ಚಟುವಟಿಕೆ ಪುನರಾರಂಭಗೊಂಡಿದೆ. ಆದರೆ ನಿರ್ಮಾಣ ವೆಚ್ಚ ಏರಿದೆ. ಸಿಮೆಂಟ್‌, ಕಬ್ಬಿಣ ಸಹಿತ ಆವಶ್ಯಕ ಸಾಮಗ್ರಿಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಸಿಆರ್‌ಝಡ್‌ನ‌ಲ್ಲಿ ಮರಳುಗಾರಿಕೆ ಆರಂಭಗೊಳ್ಳದಿರುವ ಹಿನ್ನೆಲೆಯಲ್ಲಿ ಮರಳಿನ ಸಮಸ್ಯೆ ಉದ್ಭವಿಸಿದೆ. ಐದು ತಿಂಗಳುಗಳ ಹಿಂದೆ ಒಂದು ಲೋಡಿಗೆ 5ರಿಂದ 6 ಸಾವಿರ ರೂ.ಗಳಿಗೆ ದೊರಕುತ್ತಿದ್ದ ಮರಳಿನ ಬೆಲೆ ಈಗ 15ರಿಂದ 20 ಸಾವಿರ ರೂ.ಗೇರಿದೆ. ಇಲ್ಲಿನ ನಿರ್ಮಾಣ ಕ್ಷೇತ್ರದಲ್ಲಿದ್ದ ಶೇ. 70 ಮಂದಿ ಕಾರ್ಮಿಕರು ಹೊರಜಿಲ್ಲೆ, ಹೊರರಾಜ್ಯಗಳವರು. ಅವರಲ್ಲಿ ಸುಮಾರು 25 ಸಾವಿರಕ್ಕಿಂತಲೂ ಹೆಚ್ಚು ಮಂದಿ ತಮ್ಮ ಊರಿಗೆ ತೆರಳಿದ್ದು, ಕಾರ್ಮಿಕರ ಸಮಸ್ಯೆಯೂ ಎದುರಾಗಿದೆ. ಇಲ್ಲೇ ಉಳಿದಿರುವ ಕಾರ್ಮಿಕರಿಗೆ ಬಿಲ್ಡರ್‌ಗಳೇ ವಾಸ್ತವ್ಯ ಮತ್ತು ಸಾರಿಗೆ ವ್ಯವಸ್ಥೆ ಮಾಡುತ್ತಿದ್ದಾರೆ.

ಉತ್ತೇಜನಗಳು ಅವಶ್ಯ
ಪ್ರಸ್ತುತ ಕೊಲ್ಲಿ ರಾಷ್ಟ್ರಗಳ ಸಹಿತ ವಿದೇಶಗಳಿಂದ ಬಹಳಷ್ಟು ಮಂದಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಫ್ಲಾಟ್‌, ಮನೆಗಳಿಗೆ ಬೇಡಿಕೆ ಸೃಷ್ಟಿಯಾಗುತ್ತಿದೆ. ಬೇಡಿಕೆಗೆ ಸ್ಪಂದಿಸುವ ಸಾಮರ್ಥ್ಯವನ್ನು ರಿಯಲ್‌ ಎಸ್ಟೇಟ್‌ ಮತ್ತು ನಿರ್ಮಾಣ ಕ್ಷೇತ್ರ ವೃದ್ಧಿಸಿಕೊಳ್ಳಬೇಕಿದೆ. ಇದಕ್ಕೆ ಪೂರಕವಾಗಿ ಈ ಕ್ಷೇತ್ರಕ್ಕೆ ಉತ್ತೇಜಕ ಕ್ರಮಗಳು ಅವಶ್ಯ.

Advertisement

ಮಧ್ಯಮ ವರ್ಗದವರು ಸ್ವಂತ ಸೂರು ಹೊಂದುವ ನಿಟ್ಟಿನಲ್ಲಿ 2017ರಲ್ಲಿ ಜಾರಿಗೆ ತಂದ ವಾರ್ಷಿಕ 6ರಿಂದ 18 ಲಕ್ಷ ರೂ. ಆದಾಯ ಇರುವವರಿಗೆ ಸಾಲ ಸಂಪರ್ಕಿತ ಸಬ್ಸಿಡಿ ಯೋಜನೆ (ಸಿಎಸ್‌ಎಸ್‌ಎಸ್‌)ಯನ್ನು ಸರಕಾರ 2021ರ ಮಾರ್ಚ್‌ವರೆಗೆ ವಿಸ್ತರಿಸಿದೆ. ಈಗಾಗಲೇ ಸ್ಥಗಿತಗೊಂಡಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಚೇತರಿಕೆ ನೀಡುವುದಕ್ಕಾಗಿ ರೇರಾ ಅಡಿಯಲ್ಲಿ ನೋಂದಾಯಿತ ಕಟ್ಟಡ ಕಾಮಗಾರಿಗಳನ್ನು ಮುಗಿಸುವ ಅವಧಿಯನ್ನು 9 ತಿಂಗಳು ಗಳವರೆಗೆ ವಿಸ್ತರಿಸುವ ಕೊಡುಗೆ ನೀಡಿದೆ. ಇದು ಸ್ವಲ್ಪ ಮಟ್ಟಿಗೆ ನೆರವಾಗಬಹುದು. ಆದರೆ ನೇರವಾಗಿ ಯಾವುದೇ ಪ್ಯಾಕೇಜ್‌ ಘೋಷಣೆಯಾಗಿಲ್ಲ.

ರಿಯಲ್‌ ಎಸ್ಟೇಟ್‌ಗೆ ಪ್ರಸ್ತುತ ಇರುವ ಶೇ.12 ಜಿಎಸ್‌ಟಿಯನ್ನು ಫ್ಲಾಟ್‌ಗೆ ಶೇ.5ಕ್ಕೆ ಇಳಿಸಲಾಗಿದೆ. ಆದರೆ ಮೊದಲು ಇದ್ದ ಇನ್‌ಪುಟ್‌ ತೆರಿಗೆ ಸೌಲಭ್ಯವನ್ನು ತೆಗೆದುಹಾಕಲಾಗಿದೆ. ಹೀಗಾಗಿ ಜಿಎಸ್‌ಟಿ ಇಳಿಕೆಯಿಂದ ಕ್ಷೇತ್ರಕ್ಕೆ ಹೆಚ್ಚಿನ ಲಾಭವಾಗಿಲ್ಲ. ಮೊದಲಿನಂತೆಯೇ ಇನ್‌ಪುಟ್‌ ತೆರಿಗೆ ಸೌಲಭ್ಯ ನೀಡಿದರೆ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಮನೆ ನೀಡಲು ಸಾಧ್ಯವಾಗುತ್ತದೆ. ಸಾಲ ಸೌಲಭ್ಯ ಮತ್ತು ಸ್ವರೂಪದಲ್ಲೂ ಕೆಲವು ಮಾರ್ಪಾಡು ಮತ್ತು ರಿಯಾಯಿತಿಗಳನ್ನು ರಿಯಲ್‌ ಎಸ್ಟೇಟ್‌ ಕ್ಷೇತ್ರ ಬಯಸುತ್ತಿದೆ. ಮರಳು ನೀತಿಯಲ್ಲೂ ಪರಿವರ್ತನೆ ತಂದು ಲಭ್ಯವಾಗುವಂತೆ ಆಗಬೇಕು. ಪರವಾನಿಗೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವುದರಿಂದ ಯೋಜನೆಗಳ ಶೀಘ್ರ ಆರಂಭ ಸಾಧ್ಯ.

ಸರಕಾರದಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ?

– ರಿಯಲ್‌ ಎಸ್ಟೇಟ್‌ ಮತ್ತು ನಿರ್ಮಾಣ ಕ್ಷೇತ್ರ ಮೂರು ವರ್ಷಗಳಿಂದ ನಿರಂತರ ಹಿನ್ನಡೆಯಲ್ಲಿದೆ. ಇದೇ ಸಂದರ್ಭದಲ್ಲಿ ಕೊರೊನಾ ಇನ್ನಷ್ಟು ಹೊಡೆತ ನೀಡಿದೆ. ಆದುದರಿಂದ ಪ್ರಸ್ತುತ ಇರುವ ಸಾಲವನ್ನು ಬ್ಯಾಂಕ್‌ಗಳು, ನಾನ್‌ ಬ್ಯಾಂಕಿಂಗ್‌ ಹಣಕಾಸು ಸಂಸ್ಥೆಗಳು ಪುನಾರೂಪಿಸುವುದು ಅವಶ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ, ಆರ್‌ಬಿಐ ನಿರ್ದೇಶನ ನೀಡಬೇಕು.

– ರಿಯಲ್‌ ಎಸ್ಟೇಟ್‌ ಮತ್ತು ನಿರ್ಮಾಣ ಕ್ಷೇತ್ರ ಸರಕಾರಕ್ಕೆ ಗರಿಷ್ಠ ತೆರಿಗೆ ಪಾವತಿಸುವ ಮತ್ತು ಉದ್ಯೋಗಾವಕಾಶ ನೀಡುವ ಕ್ಷೇತ್ರವೂ ಆಗಿದೆ. ಇದಕ್ಕೆ ಕೈಗಾರಿಕೆ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಕೈಗಾರಿಕೆ ಸ್ಥಾನಮಾನ ನೀಡಿದರೆ ಅದು ಆದ್ಯತಾ ವಲಯದಡಿ ಬರಲು ಸಾಧ್ಯವಾಗುತ್ತದೆ. ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತದೆ.

– ಪ್ರಸ್ತುತ ಬಹುಮಹಡಿ ಕಟ್ಟಡಗಳಿಗೆ ನಿರ್ಮಾಣ ಪರವಾನಿಗೆ ಪಡೆಯಲು ಸುಮಾರು ಒಂದು ವರ್ಷ ಅವಧಿ ಬೇಕು. ಸುಮಾರು 12 ಇಲಾಖೆಗಳಿಗೆ ಹೋಗಬೇಕಾಗುತ್ತದೆ. ಇದರಿಂದ ನಿರ್ಮಾಣ ವೆಚ್ಚ ಏರುತ್ತದೆ ಮತ್ತು ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಫ್ಲಾಟ್‌ ನೀಡುವಲ್ಲಿಯೂ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪರವಾನಿಗೆಗೆ ಏಕಗವಾಕ್ಷಿ ವ್ಯವಸ್ಥೆ ಶೀಘ್ರ ರೂಪಿಸಬೇಕು. ರೇರಾ ಕಾಯ್ದೆಯಲ್ಲೂ ಈ ಅಂಶ ಒಳಗೊಂಡಿದೆ.

– ರಿಯಲ್‌ ಎಸ್ಟೇಟ್‌ ಮತ್ತು ನಿರ್ಮಾಣ ಕ್ಷೇತ್ರ ದೇಶದಲ್ಲಿ ಕೃಷಿ ಬಿಟ್ಟರೆ ಅತೀ ಹೆಚ್ಚು ಉದ್ಯೋಗದಾತ ಕ್ಷೇತ್ರ. ಆದುದರಿಂದ ಪ್ರಸ್ತುತ ಕೇಂದ್ರ ಸರಕಾರ ಘೋಷಿಸಿರುವ ಆರ್ಥಿಕ ನೆರವು ಪ್ಯಾಕೇಜ್‌ನಲ್ಲಿ ಎಂಎಸ್‌ಎಂಇಗಳಿಗೆ ನೀಡಿರುವಂತೆ ಕಡಿಮೆ ಬಡ್ಡಿಯಲ್ಲಿ ಸಾಲ ಮತ್ತು ಇತರ ಸೌಲಭ್ಯ ನೀಡಬೇಕು.

– ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸರಕಾರ ಈಗಾಗಲೇ ಕೆಲವು ಸೌಲಭ್ಯಗಳನ್ನು ನೀಡಿದೆ. ಇದನ್ನು ಇನ್ನಷ್ಟು ಹೆಚ್ಚಿಸಬೇಕು. ಈ ರೀತಿ ಮಾಡಿದರೆ ಸ್ಥಳೀಯರು ಹೆಚ್ಚಾಗಿ ಇದರತ್ತ ಆಕರ್ಷಣೆಗೊಂಡರೆ ಹೊರ ಪ್ರದೇಶದ ಕಾರ್ಮಿಕರನ್ನು ಅತಿಯಾಗಿ ನಂಬುವುದು ತಪ್ಪುತ್ತದೆ.

ಪುನಶ್ಚೇತನಕ್ಕೆ ನೆರವು ಅಗತ್ಯ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರ ಸಂಕಷ್ಟದಲ್ಲಿದೆ. ಈಗ ಕೊರೊನಾ ಇನ್ನಷ್ಟು ಹೊಡೆತ ನೀಡಿದೆ ಮಾತ್ರವಲ್ಲದೆ, ಹಲವಾರು ಹೊಸ ಸಮಸ್ಯೆಗಳನ್ನು ಸೃಷ್ಟಿಸಿದೆ. ಕ್ಷೇತ್ರದ ಚೇತರಿಕೆಗೆ ಸರಕಾರದಿಂದ ಉತ್ತೇಜನಕಾರಿ ಕ್ರಮಗಳು ಅಗತ್ಯ. ಪ್ರಸ್ತುತ ಕೊರೊನಾ ಹಿನ್ನೆಲೆಯಲ್ಲಿ ಇತರ ಕ್ಷೇತ್ರಗಳಿಗೆ ನೀಡುತ್ತಿರುವಂತೆಯೇ ರಿಯಲ್‌ ಎಸ್ಟೇಟ್‌ ಮತ್ತು ನಿರ್ಮಾಣ ಕ್ಷೇತ್ರಕ್ಕೆ ಸರಕಾರದಿಂದ ಉತ್ತೇಜನ ದೊರಕಬೇಕು.

– ನವೀನ್‌ ಕಾರ್ಡೋಜಾ, ಅಧ್ಯಕ್ಷರು, ಕ್ರೆಡೈ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next