ಚೆನ್ನೈ : “ನನ್ನ ಚಿಕ್ಕಮ್ಮ ವಿ ಕೆ ಶಶಿಕಲಾ ಅವರು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಕಳೆದ ವರ್ಷ ಆಸ್ಪತ್ರೆಯಲ್ಲಿದ್ದಾಗ ಚಿತ್ರೀಕರಿಸಿಕೊಂಡಿದ್ದ ವಿಡಿಯೋವನ್ನು ನಾನು ಸಿಬಿಐ ಸಹಿತ ಯಾವುದೇ ತನಿಖಾ ಸಂಸ್ಥೆಗೆ ನೀಡಲು ಸಿದ್ಧನಿದ್ದೇನೆ’ ಎಂದು ಬದಿಗೊತ್ತಲ್ಪಟ್ಟಿರುವ ಎಐಎಡಿಎಂಕೆ ನಾಯಕ ಟಿ ಟಿ ವಿ ದಿನಕರನ್ ಇಂದು ಸೋಮವಾರ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಜಯಲಲಿತಾ ಅವರು ನೈಟಿಯಲ್ಲಿ ಇದ್ದುದರಿಂದ ಈ ವರೆಗೂ ಆಕೆಯ ವಿಡಿಯೋವನ್ನು ಬಿಡುಗಡೆ ಮಾಡಿರಲಿಲ್ಲ ಎಂದು ದಿನಕರನ್ ಹೇಳಿದ್ದಾರೆ.
ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದಾಗ ಅವರ ಆರೋಗ್ಯ ಸ್ಥಿತಿಗತಿಯ ಬಗ್ಗೆ ಎಐಎಡಿಎಂಕೆ ನಾಯಕರೆಲ್ಲ ಸುಳ್ಳೇ ಹೇಳಿದ್ದರು ಎಂದು ಮುಖ್ಯಮಂತ್ರಿ ನೀಡಿರುವ ಹೇಳಿಕೆಯನ್ನು ಅನುಸರಿಸಿ ಡಿಎಂಕೆ, ಮಾಜಿ ಮುಖ್ಯಮಂತ್ರಿ ಜಯಲಲಿತಾಗೆ ನೀಡಲಾಗಿದ್ದ ಚಿಕಿತ್ಸೆ ಮತ್ತು ಆಕೆಯ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ದಿನಕರನ್ ಅವರಿಂದ ಈ ಹೇಳಿಕೆ ಬಂದಿದೆ.
“ಅಮ್ಮಾ (ಜಯಲಲಿತಾ) ತುಂಬಾ ದೇಹ ತೂಕವನ್ನು ಕಳೆದುಕೊಂಡಿದ್ದರು. ಆ ವಿಡಿಯೋವನ್ನು ನನ್ನ ಚಿಕ್ಕಮ್ಮ ಶಶಿಕಲಾ ಸ್ವತಃ ಶೂಟ್ ಮಾಡಿದ್ದರು. ನಿಮಗೆಲ್ಲ ಗೊತ್ತಿರುವ ಹಾಗೆ ಅಮ್ಮ ನನ್ನು ಯಾರೂ ನೈಟಿಯಲ್ಲಿ ನೋಡುವುದು ಸಾಧ್ಯವಿಲ್ಲ. 1989ರಲ್ಲಿ ಜಯಲಲಿತಾ ಅಪಘಾಡಕ್ಕೀಡಾಗಿದ್ದಾಗ ಆಕೆಯನ್ನು ಕಾಣಲು ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಆಸ್ಪತ್ರೆಗೆ ಬಂದಿದ್ದಾಗಲೂ ಅಮ್ಮ ಪೂರ್ತಿಯಾಗಿ ಡ್ರೆಸ್ ತೊಟ್ಟಿದ್ದರು. ಆಕೆ ಯಾವತ್ತೂ ತಮ್ಮ ಘನತೆಯ ಬಗ್ಗೆ ನಿಗಾ ವಹಿಸುತ್ತಿದ್ದರು’ ಎಂದು ದಿನಕರನ್ ಹೇಳಿದರು.
ಜಯಲಲಿತಾ ಅವರನ್ನು ಅಪೋಲೋ ಆಸ್ಪತ್ರೆಯ ಐಸಿಯು ಗೆ ಸ್ಥಳಾಂತರಿಸಿದ್ದಾಗ ಆಕೆ ಸಡಿಲು ನೈಟಿಯಲ್ಲಿದ್ದರು. ಆವಾಗ ಶಶಿಕಲಾ ತಾನೇ ಖುದ್ದು ವಿಡಿಯೋ ಶೂಟ್ ಮಾಡಿದ್ದರು ಎಂದು ದಿನಕರನ್ ಸುದ್ದಿಗಾರರಿಗೆ ಹೇಳಿದರು.
ಈ ಹಿಂದೆ ಜಯಲಲಿತಾ ಅವರಿಗೆ ಆಸ್ಪತ್ರೆಯಲ್ಲಿ ನೀಡಲಾಗಿದ್ದ ಚಿಕಿತ್ಸೆ ಮತ್ತು ಆಕೆಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ತನಿಖೆ ನಡೆಯಬೇಕೆಂದು ವಿರೋಧ ಪಕ್ಷದವರು ಒತ್ತಾಯಿಸಿದ್ದಾಗ ಖುದ್ದು ಶಶಿಕಲಾ ಅವರೇ “ನಾವೇ ಸ್ವತಃ ಈ ಬಗ್ಗೆ ನ್ಯಾಯಾಂಗ ತನಿಖೆಯನ್ನು ಒತ್ತಾಯಿಸುತ್ತೇವೆ’ ಎಂದು ಹೇಳಿದ್ದರು.
ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ನೇತೃತ್ವದಲ್ಲಿ ಜಯಲಲಿತಾ ಸಾವಿನ ತನಿಖೆಗೆ ಆಯೋಗವೊಂದನ್ನು ರೂಪಿಸುವ ಆದೇಶವನ್ನು ನೀಡಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ ದಿನಕರನ್, “ಉಪ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರನ್ನು ತೃಪ್ತಿ ಪಡಿಸುವುದಕ್ಕೆ ಪಳನಿಸ್ವಾಮಿ ಈ ತನಿಖಾ ಆದೇಶ ಹೊರಡಿಸಿದ್ದಾರೆ’ ಎಂದು ಹೇಳಿದರು.