ಹೊಸದಿಲ್ಲಿ: ಲಾಕ್ ಡೌನ್ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕೋವಿಡ್ ವೈರಸ್‌ನ ಸರಪಳಿಯನ್ನು ಮುರಿಯಲೇಬೇಕಿದೆ. ಇಲ್ಲದಿದ್ದರೆ ಭಾರತ, ಸಾಂಕ್ರಾಮಿಕ ರೋಗದಿಂದ ನರಳಬೇಕಾಗುತ್ತದೆ ಎಂದು ಮೂರೂ ಸೇನೆಗಳ ಮಹಾದಂಡನಾಯಕ (ಚೀಫ್ ಆಫ್ ಡಿಫೆನ್ಸ್ ಸ್ಟಾಪ್) ಜನರಲ್ ಬಿಪಿನ್ ರಾವತ್ ಖಡಕ್ ಆಗಿ ಎಚ್ಚರಿಸಿದ್ದಾರೆ.
ಎಪ್ರಿಲ್ 14ರೊಳಗೆ ಶೇ.100 ಲಾಕ್‌ಡೌನ್ ಮಾಡಿ, ವೈರಸ್ ಅನ್ನು ಅರೆಸ್ಟ್ ಮಾಡಲೇಬೇಕಿದೆ. ಒಂದು ವೇಳೆ ಇದು ಮಳೆಗಾಲಕ್ಕೆ ದಾಟಿದರೆ, ಆ ದುಃಸ್ಥಿತಿಯನ್ನು ನಿರ್ವಹಿಸುವುದು ಭಾರತಕ್ಕೆ ಕಷ್ಟವಾಗಬಹುದು. ಈಗಾಗಲೇ ಮಿಲಿಟರಿ, ಸರಕಾರ ಮತ್ತು ಜನತೆಯ ಬೇಡಿಕೆಗೆ ಸ್ಪಂದಿಸುತ್ತಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ದುರ್ಗಮ ಪ್ರದೇಶಗಳಲ್ಲೂ ಆಸ್ಪತ್ರೆ: ಭೂಸೇನೆ, ವಾಯು ಸೇನೆ ಮತ್ತು ನೌಕಾ ಪಡೆಗಳ 17- 18 ಆಸ್ಪತ್ರೆಗಳಲ್ಲಿ ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳ ಆರೈಕೆಗಾಗಿ ಒಟ್ಟು ಹಾಸಿಗೆಯ ಸಾಮರ್ಥ್ಯವನ್ನು 15 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಸೋಂಕು ಇನ್ನೂ ಹರಡದಿದ್ದರೂ, ನಾಗಲ್ಯಾಂಡ್‌ನ ದಿಮಾಪುರ, ಜಖಾಮಾದಂಥ ದುರ್ಗಮ ಪ್ರದೇಶಗಳಲ್ಲೂ ಸೇನೆ ಆಸ್ಪತ್ರೆ ತೆರೆದಿದೆ. ಪ್ರತಿ ವಲಯದಲ್ಲಿ 2-3 ಆಸ್ಪತ್ರೆಗಳನ್ನು ಸೇನೆ ಸಿದ್ಧಪಡಿಸಿದೆ ಎಂದು ಜನರಲ್ ಬಿಪಿನ್ ರಾವತ್ ಅವರು ವಿವರಿಸಿದರು.
ಶಾಲೆಗಳಲ್ಲೂ ಕ್ವಾರಂಟೈನ್: ಸೇನೆಯ ವೈದ್ಯರು ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ದೆಹಲಿಯಲ್ಲಿರುವ 3 ಪಬ್ಲಿಕ್ ಶಾಲೆ, 1 ನಾಕಾ ಶಾಲೆ ಮತ್ತು ವಾಯುದಳದ ಪಬ್ಲಿಕ್ ಶಾಲೆಗಳಲ್ಲಿ ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಪ್ರತಿ ಶಾಲಾ ಕೇಂದ್ರಗಳೂ 1500 ರೋಗಿಗಳಿಗೆ ಶುಶ್ರೂಷೆ ನೀಡುವಷ್ಟು ಸಾಮರ್ಥ್ಯ ಹೊಂದಿವೆ ಎಂದು ಹೇಳಿದ್ದಾರೆ.