Advertisement

ಮಳೆಗಾಲ ಎದುರಿಸಲು ರೆಡಿಯಾಗೋಣ…

03:39 PM Jun 04, 2019 | Lakshmi GovindaRaj |

ಮತ್ತೊಂದು ಮಳೆಗಾಲ ಬಂದಿದೆ. ಮುಂಗಾರು ಪೂರ್ವ ಮಳೆಯೇ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿರುವ ಜತೆಗೆ, ಅಲ್ಪ ಮಳೆಗೇ ಹಲವು ಬಡಾವಣೆಗಳಲ್ಲಿ ನೀರು ನುಗ್ಗಿ ಜನರ ನಿದ್ದೆಗೆಡಿಸಿದೆ. ಇನ್ನೂ ಪೂರ್ಣ ಪ್ರಮಾಣದ ಮಳೆಗಾಲ ಆರಂಭವಾದರೆ ಎದುರಾಗಬಹುದಾದ ಅನಾಹುತಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಸಾಂಕ್ರಾಮಿಕ ರೋಗಗಳೂ ಸೇರಿದಂತೆ ಪ್ರತಿ ಮಳೆಗಾಲದಲ್ಲೂ ನಮ್ಮೆಲ್ಲರನ್ನು ಸಾಮಾನ್ಯವಾಗಿ ಕಾಡುವ ಹಲವು ಸಮಸ್ಯೆಗಳನ್ನು ಎದುರಿಸಲು ನಾವು ಸಿದ್ಧರಾಗಬೇಕಿದೆ. ಯಾವ ಸಮಸ್ಯೆಗೆ ಹೇಗೆ ಸಿದ್ಧರಾಗಬೇಕೆಂಬ ವಿವರ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…

Advertisement

ಬೆಂಗಳೂರು: ಕೊರಿಯರ್‌ ಪ್ಯಾಕೇಜ್‌ ತಲುಪಿಸಲು ಹೊರಟಿದ್ದ ಯುವಕನ ಮೇಲೆ ಮರ ಬಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ. ವಾರದ ಹಿಂದೆ ಅದೇ ಮರದ ಕೊಂಬೆಯನ್ನು ತೆರವುಗೊಳಿಸಲು ಮುಂದಾಗ ಯುವಕ ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟ. ಮನೆ ಕಡೆಗೆ ಹೊರಟಿದ್ದ ಟೆಕ್ಕಿಯೊಬ್ಬನ ಮೇಲೆ ಗೋಡೆ ಕುಸಿದು ಆತ ಅಸುನೀಗಿದ. ರಾಜಧಾನಿ ಬೆಂಗಳೂರಿನಲ್ಲಿ ಮಳಗಾಲ ಆರಂಭವಾಗುವ ಮೊದಲೇ ಸಂಭವಿಸಿದ ಅನಾಹುತಗಳ ಸ್ಯಾಂಪಲ್‌ಗ‌ಳು ಇವು.

ಸಾವು ನೋವಿನ ಕತೆ ಮುಂದುವರಿದಿದೆ. ಹೆಚ್ಚೇಕೆ, ಕಳೆದ ವರ್ಷ ನೂರಾರು ಮನೆಗಳಿಗೆ ಮಳೆ ನೀರಿನೊಂದಿಗೆ ಹಾವುಗಳು ಪ್ರವೇಶಿಸಿ ಅವಾಂತರ ಸೃಷ್ಟಿಸಿದ್ದವು… ಪ್ರತಿವರ್ಷ ಮಳೆಗಾಲ ಪೂರ್ವ ಹಾಗೂ ಮಳೆಗಾಲದಲ್ಲಿ ನೂರಾರು ಮರ, ಕೊಂಬೆಗಳು ಬಿದ್ದು ಸಾವು-ನೋವುಗಳು ಸಂಭವಿಸುತ್ತಿವೆ. ಜತೆಗೆ ಮಳೆಗಾಲದಲ್ಲಿ ಸೃಷ್ಟಿಯಾಗುವ ರಸ್ತೆಗುಂಡಿ ತಪ್ಪಿಸಲು ಹೋಗಿ ಅನಾಹುತಗಳು ಸಂಭವಿಸಿದ ಉದಾಹರಣೆಗಳಿದ್ದು, ಮಳೆಯ ನಡುವೆ ಯಾವುದೇ ಕೆಲಸ ಮಾಡುವಾಗ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.

ಮಳೆ ಬೀಳುವ ಸಂದರ್ಭದಲ್ಲಿ ನಾಗರಿಕರು ಮರಗಳು, ವಿದ್ಯುತ್‌ ಕಂಬಗಳು, ರಾಜಕಾಲುವೆಗಳಿಂದ ಅಂತರ ಕಾಯ್ದುಕೊಳ್ಳುವುದು ಉಚಿತ. ಜತೆಗೆ ಮರಗಳು, ವಿದ್ಯುತ್‌ ಕಂಬಗಳು, ಮಳೆನೀರು ನುಗ್ಗಿದ ಹಾಗೂ ಹಾವು ಸೇರಿದಂತೆ ಇತರೆ ಸಂದರ್ಭಗಳಲ್ಲಿ ಸಹಾಯಕ್ಕಾಗಿ ಬಿಬಿಎಂಪಿ, ಬೆಸ್ಕಾಂ ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳನ್ನು ಸಮಸ್ಯೆಗೆ ಪರಿಹಾರ ಪಡೆಯಬಹುದಾಗಿದೆ. ಆದರೆ, ಬಹುತೇಕರಿಗೆ ಅಪಾಯ ಸಂದರ್ಭದಲ್ಲಿ ಯಾರಿಗೆ ಕರೆ ಮಾಡಬೇಕು ಎಂಬ ಮಾಹಿತಿ ಇರುವುದಿಲ್ಲ. ಅಂತಹ ಮಾಹಿತಿಯೊಂದಿಗೆ ಮಳೆಗಾಲದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳು ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಮಾಹಿತಿ ಇಲ್ಲಿದೆ.

ಹಾವುಗಳು ಬರುತ್ತವೆ ಎಚ್ಚರ: ಬೇಸಿಗೆ ಹಾಗೂ ಮಳೆಗಾಲದಲ್ಲಿ ಮನೆಗೆ ಕರೆಯದೆ ಬರುವ ಅತಿಥಿಗಳೆಂದರೆ ಅದು ಹಾವುಗಳು. ಅಡುಗೆ ಮನೆ, ಬಟ್ಟೆತೊಳೆಯುವ ವಾಷಿಂಗ್‌ ಮಷೀನ್‌, ಶೌಚಾಲಯ, ಮನೆಯ ಅಂಗಳ, ಚಪ್ಪಲಿ ಸ್ಟಾಂಡ್‌, ನಾವು ಧರಿಸುವ ಶೂ ಸೇರಿ ಹಲವೆಡೆ ನಾಗಪ್ಪ ವಿಶ್ರಾಂತಿ ಪಡೆಯುವುದು ಸಾಮಾನ್ಯ. ಇಂಥ ಸನ್ನಿವೇಶಗಳನ್ನು ನೆನೆಸಿಕೊಳ್ಳಲೂ ಭಯಾನಕ. ಎಂತಹ ಧೈರ್ಯಶಾಲಿಗೂ ಒಂದು ಕ್ಷಣ ಏನೂ ತೋಚದಂತಾಗುತ್ತದೆ.

Advertisement

ಅಂತಹ ಸಂದರ್ಭಗಳಲ್ಲಿ ಗಾಬರಿಗೊಳ್ಳದೆ, ಶಾಂತವಾಗಿ ಪರಿಸ್ಥಿತಿ ನಿಭಾಯಿಸಬೇಕಾಗುತ್ತದೆ. ಕೂಡಲೇ ಹಾವಿರುವ ಜಾಗದಿಂದ ಸುರಕ್ಷಿತ ಸ್ಥಳಕ್ಕೆ ಹೋಗಬೇಕು. ಬಳಿಕ ಬಿಬಿಎಂಪಿಯ ವನ್ಯಪಾಲಕರು ಅಥವಾ ಸಮೀಪದ ಹಾವು ಹಿಡಿಯುವವರಿಗೆ ಕರೆ ಮಾಡಿ ವಿಷಯ ತಿಳಿಸಬೇಕು.
ಹಾವು ಬಂದಾಗ ಯಾರಿಗೆ ಕರೆ ಮಾಡಬೇಕು: 080-22221188, 9880108801, 9448987920, 9980855720.

ಬಿಡಿಎ ಬಡಾವಣೆಗಳಲ್ಲೂ ಇದೆ ಸಮಸ್ಯೆ: ಭಾರೀ ಮಳೆ ಸುರಿದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿರ್ಮಿಸಿರುವ ಬಡಾವಣೆಗಳಲ್ಲಿ ನೀರು ತುಂಬಿ ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅದರಲ್ಲೂ ನಾಡು ಪ್ರಭು ಕೆಂಪೇಗೌಡ ಬಡಾವಣೆಯ 2ನೇ ಹಂತದಲ್ಲಿನ ಕನ್ನಹಳ್ಳಿ ಗ್ರಾಮ ವ್ಯಾಪ್ತಿಯ ಕಳೆದ ವರ್ಷ ಮಳೆ ಹಲವು ರೀತಿಯ ಸಮಸ್ಯೆಗಳನ್ನು ತಂದೊಡಿತ್ತು. ಭೂಮಿಗೆ ಬಿದ್ದ ಮಳೆ ನೀರು ಸಮರ್ಪಕ ರೀತಿಯಲ್ಲಿ ರಾಜಕಾಲುವೆ ಸೇರಲು ಚರಂಡಿ ವ್ಯವಸ್ಥೆ ಇಲ್ಲದಿರುವುದು ಕೂಡ ಇದಕ್ಕೆ ಕಾರಣ ಎನ್ನಲಾಗಿದೆ.

ಹುಳಿಮಾವು ಬಿಡಿಎ 6ನೇ ಹಂತ ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ಮಳೆ ಸುರಿದಾಗ ಸಮಸ್ಯೆಗಳು ಎದುರಾಗಿವೆ. ಆಲೂರಿನಲ್ಲಿರುವ ಬಿಡಿನ ಪ್ಲಾಟ್‌ ನಲ್ಲಿ ಇತ್ತೀಚೆಗಷ್ಟೇ ವಿದ್ಯುತ್‌ ಸಮಸ್ಯೆ ಕಂಡು ಬಂದು ಪ್ಲಾಟ್‌ ಖರೀದಿದಾರರು ತೊಂದರೆ ಅನುಭವಿಸುವಂತಾಗಿತ್ತು. ಮಳೆ ಬಂದ ವೇಳೆ ಸಾರ್ವಜನಿಕರಿಗೆ ಸಮಸ್ಯೆಗಳು ಎದುರಾದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಲಯವಾರು ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಬಿಡಿಎ ಹಿರಿಯ ಎಂಜಿನಿಯರ್‌ ಮಾಹಿತಿ ನೀಡಿದ್ದಾರೆ.  ದೂರವಾಣಿ ಸಂಖ್ಯೆ 080 23442273 / 2344227 / 23368615 / 23445005

ವಿದ್ಯುತ್‌ ಕಂಬಗಳಿಂದ ಅಂತರ ಕಾಯ್ದುಕೊಳ್ಳಿ: ಮಳೆಯಾಗುವ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ವಿದ್ಯುತ್‌ ಕಂಬಗಳು ಹಾಗೂ ಟ್ರಾನ್ಸ್‌ಫಾರ್ಮರ್ಗಳ ಸಮೀಪದಲ್ಲಿ ನಿಂತುಕೊಳ್ಳಬಾರದು. ಒಂದೊಮ್ಮೆ ವಿದ್ಯುತ್‌ ತಂತಿಗಳು ಮೇಲೆ ಮರಗಳು ಉರುಳಿ ತುಂಡಾಗಿದ್ದರೆ, ಯಾವುದೇ ಕಾರಣಕ್ಕೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಆ ಭಾಗಕ್ಕೆ ಹೋಗಬಾರದು. ಕೂಡಲೇ ಬೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಹಿತಿ ನೀಡಬೇಕು. ಜತೆಗೆ ಬೀದಿ ದೀಪವಿಲ್ಲದ ಕಡೆಗಳಲ್ಲಿ ಟಾರ್ಚ್‌ ಲೈಟ್‌ ಅಥವಾ ದೀಪ ಬೆಳಕಿಲ್ಲದೆ ಸಂಚರಿಸುವುದು ಸೂಕ್ತವಲ್ಲ.
ಬೆಸ್ಕಾಂ ಸಂಬಂಧಿತ ದೂರುಗಳನ್ನು ನೀಡುವ ಸಂಖ್ಯೆ: 1912.

ಸೊಳ್ಳೆಗಳ ಬಗ್ಗೆ ಎಚ್ಚರ ವಹಿಸಿ: ಮಳೆಗಾಲದಲ್ಲಿ ಡೆಂಘೀ ಹಾಗೂ ಮಲೇರಿಯಾ ಹರಡುವಂತಹ ಸೊಳ್ಳೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಮನೆಯಲ್ಲಿ ಹಾಗೂ ಮನೆಯ ಸುತ್ತಮುತ್ತಲಿನ ಭಾಗಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಒಂದೊಮ್ಮೆ ಸೊಳ್ಳೆಗಳ ಸಮಸ್ಯೆ ಹೆಚ್ಚಾಗಿದ್ದರೆ, ಸ್ಥಳೀಯ ಪಾಲಿಕೆ ಸದಸ್ಯರು ಅಥವಾ ಅಧಿಕಾರಿಗಳ ಗಮನಕ್ಕೆ ತಂದು ಫಾಗಿಂಗ್‌ ಮಾಡಿಸಬೇಕಾಗುತ್ತದೆ.
ಸೊಳ್ಳೆಯ ನಿಯಂತ್ರಣ ವಿಭಾಗ: 080 22115439

ಸಿಡಿಲಿನಿಂದ ರಕ್ಷಣೆ ಪಡೆಯಲು ಆ್ಯಪ್‌ ಬಳಸಿ: ರಾಜ್ಯದ ಹಲವಾರು ಭಾಗಗಳಲ್ಲಿ ಸಿಡಿಲು ಬಡಿದು ಜನರು ಹಾಗೂ ಜಾನುವಾರುಗಳು ಮೃತಪಟ್ಟಿರುವ ಉದಾಹರಣೆಗಳಿವೆ. ಹೀಗಾಗಿ ಸಿಡಿಲು ಕುರಿತು ಮಾಹಿತಿ ನೀಡುವ ‘ಸಿಡಿಲು’ ಎಂಬ ಆ್ಯಪ್‌ನ್ನು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರ ಅಭಿವೃದ್ಧಿಪಡಿಸಿದೆ.

ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವುದರಿಂದ ಸಿಡಿಲು ಬರುವ ಅರ್ಧ ಅಥವಾ ಮುಕ್ಕಾಲು ಗಂಟೆ ಮೊದಲೇ ನೀವಿರುವ ಜಾಗದಿಂದ ಒಂದು ಕಿ.ಮೀ., ಐದು ಕಿ.ಮೀ. ಅಥವಾ 15 ಕಿ.ಮೀ. ವ್ಯಾಪ್ತಿಯಲ್ಲಿ ಸಿಡಿಲು ಬರುವುದೇ ಎಂಬ ಮಾಹಿತಿ ಪಡೆಯಬಹುದಾಗಿದೆ. ಜತೆಗೆ ಸಿಡಿಲಿನ ತೀವ್ರತೆಯನ್ನು ಸಹ ತಿಳಿಸುವುದರಿಂದ ಕೂಡಲೇ ಅಂತಹ ಸ್ಥಳದಿಂದ ಬೇರೆಗೆ ಹೋಗಬಹುದಾಗಿದೆ.

ಸಿಡಿಲು ಬಂದಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು
* ಸಾಧ್ಯವಾದಷ್ಟು ಕಟ್ಟಡ ಒಳಗಿರಬೇಕು
* ಮರದಡಿ, ನೀರಿರುವ ಕಡೆ, ಎಲೆಕ್ಟ್ರಿಕ್‌ ಕಂಬಗಳ ಬಳಿ ನಿಲ್ಲಬಾರದು.
* ಮನೆಯೊಳಗೆ ಇದ್ದಾಗ ಪಾತ್ರೆ ತೊಳೆಯುವುದು, ಸ್ನಾನ ಮಾಡಬಾರದು
* ಎಲೆಕ್ಟ್ರಾನಿಕ್‌ ಉಪಕರಣಗಳು, ಲ್ಯಾಂಡ್‌ ಲೈನ್‌ ಫೋನ್‌ ಬಳಸಬಾರದು
* ಸಿಡಿಲು ಬಡಿಯುವ ಪ್ರದೇಶದಲ್ಲಿ ನೀವಿದ್ದರೆ ಕಣ್ಣು, ಕಿವಿ ಮುಚ್ಚುವ ರೀತಿ ಕುಕ್ಕುರುಗಾಲಲ್ಲಿ ಕೂರಬೇಕು

ವಲಯವಾರು ನಿಯಂತ್ರಣ ಕೊಠಡಿ: ಮರ ಬಿದ್ದಿರುವುದು, ಮನೆಗಳಿಗೆ ನೀರು ನುಗ್ಗಿರುವುದು, ರಸ್ತೆಯಲ್ಲಿ ನೀರು ನಿಂತಿರುವುದು ಹಾಗೂ ರಾಜಕಾಲುವೆಗಳು ಉಕ್ಕಿರುವ ಬಗ್ಗೆ ಬಿಬಿಎಂಪಿಗೆ ದೂರು ನೀಡಬಹುದು. ದೂರುಗಳನ್ನು ಕೇಂದ್ರ ಕಚೇರಿಗೆ ನೀಡುವ ಬದಲಿಗೆ ವಲಯವಾರು ನಿಯಂತ್ರಣ ಕೊಠಡಿಗಳಿಗೆ ನೀಡುವುದರಿಂದ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಪಡೆಯಬಹುದಾಗಿದೆ.
ಬಿಬಿಎಂಪಿ ವಲಯವಾರು ನಿಯಂತ್ರಣ ಕೊಠಡಿಗಳ ದೂರವಾಣಿ ಸಂಖ್ಯೆ
ವಲಯ ದೂರವಾಣಿ ಸಂಖ್ಯೆ (080 ಬಳಸಿ)
ಕೇಂದ್ರ ಕಚೇರಿ 22221188
ಮಹದೇವಪುರ 28512301
ದಾಸರಹಳ್ಳಿ 28393688
ಯಲಹಂಕ 22975949/22975942
ಬೊಮ್ಮನಹಳ್ಳಿ 25732628
ರಾಜರಾಜೇಶ್ವರಿನಗರ 28604652
ದಕ್ಷಿಣ 22975701
ಪಶ್ಚಿಮ 22975648 / 22975601
ಪೂರ್ವ 22975801

ಕೊಳವೆ ಬಾವಿ ರಿಚಾರ್ಜ್‌ಗೆ ಸೂಕ್ತ ಸಮಯ: ನಗರದಲ್ಲಿ ಅಂತರ್ಜಲ ಪ್ರಮಾಣ ಕುಗ್ಗಿದ್ದು, 1,400 ಅಡಿ ಆಳಕ್ಕೆ ಕೊಳವೆ ಬಾವಿಗಳನ್ನು ಕೊರೆದರೂ ನೀರು ಸಿಗುತ್ತಿಲ್ಲ. ಅಲ್ಲದೇ ಇರುವ ಕೊಳವೇ ಬಾವಿಗಳು ಕೂಡಾ ಬತ್ತುತ್ತಾ ಹೋಗುತ್ತಿವೆ. ಕೆಲವು ಕೊಳವೆ ಬಾವಿಗಳಲ್ಲಿ ಮೊದಲಿನಷ್ಟು ಪ್ರಮಾಣದಲ್ಲಿ ನೀರು ಬರುತ್ತಿಲ್ಲ.

ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಲು ಈ ಮಳೆಗಾಲ ಸಹಾಯಕವಾಗಲಿದೆ. ಮನೆಯ ಬಳಿಯೇ 2×3 ಅಡಿ ಅಳೆತೆಯಲ್ಲಿ ‘ಇಂಗುಗುಂಡಿ’ ನಿರ್ಮಿಸುವ ಮೂಲಕ ಮಳೆ ನೀರನ್ನು ಇಂಗಿಸಿ ಕೊಳವೆ ಬಾವಿಗಳನ್ನು ಮರುಪೂರ್ಣ(ರಿಚಾರ್ಜ್‌) ಮಾಡಬಹುದಾಗಿದೆ. ನಗರದ ಯಾವ ಭಾಗದಲ್ಲಾದರು ಇಂಗುಗುಂಡಿ ನಿರ್ಮಿಸಲು ಹಾಗೂ ಮಳೆನೀರು ಕೋಯ್ಲು ಅಳವಡಿಸಲು ಸಂಪರ್ಕ ಸಂಖ್ಯೆ: 9743538649 (ರಾಮಕೃಷ್ಣ), 9900283755 (ಶಂಕರ್‌)

ಮಳೆಗಾಲದಲ್ಲಿ ತ್ಯಾಜ್ಯ ನೀರಿನ ಸಮಸ್ಯೆ ಸಾಮಾನ್ಯ: ನಗರದಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಾಗ ಜಲಮಂಡಳಿ ತ್ಯಾಜ್ಯ ನೀರಿನ ಪೈಪುಗಳು ಹೊಡೆದು ಹೋಗುವುದು, ಕುಡಿಯುವ ನೀರು ಕಡಿತ, ಒಳಚರಂಡಿ ಕೊಳವೆ ಸಮಸ್ಯೆ, ಇಂಗು ಗುಂಡಿಗಳಿಂದ ತ್ಯಾಜ್ಯ ನೀರು ಹೊರಬರುವುದು, ಕುಡಿಯುವ ನೀರಿನೊಂದಿಗೆ ತ್ಯಾಜ್ಯ ನೀರು ಸೇರುವ ಸಮಸ್ಯೆಗಳು ಉಂಟಾಗುತ್ತವೆ.

ಈ ಸಂದರ್ಭದಲ್ಲಿ ಜಲಮಂಡಳಿ ಸಹಾಯವಾಣಿ ಕರೆ ಮಾಡುವುದು ಅಥವಾ ಆನ್‌ಲೈನ್‌ಮೂಲಕ ಸಮಸ್ಯೆ ನೋಂದಣಿ ಮಾಡಿಕೊಂಡು ಪರಿಹಾರ ಕಂಡುಕೊಳ್ಳಬಹುದು.

ಜಲಮಂಡಳಿ 24/7 ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ: 22238888, ಸಹಾಯವಾಣಿ:1916 ಹಾಗೂ ವಾಟ್ಸ್‌ಆಪ್‌ ಸಂಖ್ಯೆ:8762228888 ಗೆ ಸಂಪರ್ಕಿಸಬಹುದಾಗಿದೆ.

ಇನ್ನು ಹೆಚ್ಚಿನ ಮಾಹಿತಿಗೆ ಸಹಾಯವಾಣಿಗೆ ಕರೆ ಮಾಡಿ ಉಪವಲಯ ವ್ಯಾಪ್ತಿಯ ಸಹಾಯಕ ಎಂಜಿನಿಯರ್‌ ದೂರವಾಣಿ ಪಡೆದು ಸಂಪರ್ಕಿಸಬಹುದಾಗಿದೆ. ಅಲ್ಲದೇ ಉಪವಿಭಾಗದ ವ್ಯಾಪ್ತಿಯಲ್ಲಿ ನಡೆಯುವ ಅದಾಲತ್‌ಗಳಲ್ಲಿ ಭಾಗವಹಿಸಿ ಅಥವಾ ಪ್ರತಿ ಶನಿವಾರ ಬೆ.9 ರಿಂದ 10.30 ಜಲಮಂಡಳಿಯು ಅಧ್ಯಕ್ಷರೊಂದಿಗೆ ನೇರ ಫೋನ್‌-ಇನ್‌ ಕಾರ್ಯಕ್ರಮಕ್ಕೆ ಕರೆ ಮಾಡಿ ಆರ್‌.ಆರ್‌.ಸಂಖ್ಯೆಯನ್ನು ತಿಳಿಸಿ ಸಮಸ್ಯೆಗೆ ನೇರ ಪರಿಹಾರ ಪಡೆಯಬಹುದು. ಸಂಪರ್ಕಿಸುವ ಸಂಖ್ಯೆ: 080-22945119.

ಇರಲಿ ಆರೋಗ್ಯ ಕಾಳಜಿ: ಮಳೆಗಾಲ ಬಂತೆಂದರೆ ಸಾಂಕ್ರಾಮಿಕ ರೋಗಗಳ ಹಬ್ಬ ಬಂದಂತೆ. ರೋಗ್ಯಕ್ಕೆ ಹಾನಿ ಉಂಟು ಮಾಡುವ ಸೂಕ್ಷ್ಮಾಣುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಳೆಗಾಲದಲ್ಲಿಯೇ ಉತ್ಪತ್ತಿಯಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ. ಸೊಳ್ಳೆಗಳ ಸಂತಾಸೋತ್ಪತ್ತಿಗೆ ಇದು ಪರ್ವಕಾಲವಿದ್ದಂತೆ. ಅದರಲ್ಲೂ ನಗರದ ಪ್ರದೇಶಗಳಲ್ಲಿ ತ್ಯಾಜ್ಯ, ಒಳಚರಂಡಿ ನೀರು ನಿಲ್ಲುವ ಸಮಸ್ಯೆಗಳಿಂದ ಸೊಳ್ಳೆಗಳು ಹೆಚ್ಚಾಗುತ್ತವೆ. ಇದರಿಂದ ಆ ಪ್ರದೇಶದಲ್ಲಿ ಡೆಂಘೀ, ಮಲೇರಿಯಾ, ಟೈಫಾಯಿಡ್‌, ಚಿಕನ್‌ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ.

ಹೀಗಾಗಿ, ಮನೆಯ ಸುತ್ತಮುತ್ತ ತ್ಯಾಜ್ಯ ಹಾಕದಂತೆ ಹಾಗೂ ನೀರು ನಿಲ್ಲದಂತೆ ಎಚ್ಚರವಹಿಸಬೇಕಿದೆ. ಸದ್ಯ ರಾಜ್ಯದಲ್ಲಿಯೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂ ಘೀ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗಿವೆ. ಮೇ ತಿಂಗಳಲ್ಲಿ 200ಕ್ಕೂ ಹೆಚ್ಚು ಮಂದಿಯಲ್ಲಿ ರೋಗ ದೃಢಪಟ್ಟಿದೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಎಚ್‌1 ಎನ್‌1 ಪ್ರಕರಣಗಳು ವರ್ಷದಿಂದೀಚೆಗೆ 234 ಮಂದಿಯಲ್ಲಿ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 84 ಮಂದಿಯಲ್ಲಿ ರೋಗ ದೃಢಪಟ್ಟಿದ್ದು, 3 ಮಂದಿ ಸಾವಿಗೀಡಾಗಿದ್ದಾರೆ.

ರೋಗ ಲಕ್ಷಣಗಳು: ಸಾಂಕ್ರಾಮಿಕ ರೋಗಗಳಾದ ಡೆಂಘೀ, ಮಲೇರಿಯಾ, ಚಿಕನ್‌ ಗುನ್ಯಾ, ಎಚ್‌1ಎನ್‌1 ಸೋಂಕಿದಾಗ ಒಂದಿಷ್ಟು ಸಾಮಾನ್ಯ ಲಕ್ಷಣಗಳು ಕಂಡು ಬರುತ್ತವೆ. ಪ್ರಮುಖವಾಗಿ ದಿಢೀರ್‌ ಜ್ವರ, ತಲೆನೋವು, ನೆಗಡಿ, ಗಂಟಲು ನೋವು, ವಾಂತಿ, ಹೊಟ್ಟೆ ನೋವು, ತೀವ್ರ ಮೈ-ಕೈ ನೋವು, ಅತಿಸಾರ ಶ್ವಾಸಕೋಶದ ಸೋಂಕು, ವಾಕರಿಕೆ ಮತ್ತು ಬಾಯಿ ಅಥವಾ ಗಂಟಲಿನಲ್ಲಿ ಗುಳ್ಳೆಗಳು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೂಡಲೇ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಮೇರೆಗೆ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು.

ಹೆಪಟೈಟೀಸ್‌ ಎ ಕೂಡ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದು, ಕಲುಷಿತ ನೀರು ಹಾಗೂ ಆಹಾರ ಇದಕ್ಕೆ ಕಾರಣ. ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಸುಸ್ತು, ಬಳಲಿಕೆ, ಹಸಿವಾಗದಿರುವಿಕೆ, ತಲೆಸುತ್ತು, ವಾಂತಿ, ಜ್ವರ, ಗಾಢ ವರ್ಣದ ಮೂತ್ರ, ಮೈ ಕೆರೆತ ಹೆಪಟೈಟೀಸ್‌ ಎ ಲಕ್ಷಣಗಳು. ಇನ್ನು ಕಲುಷಿತ ನೀರು, ಆಹಾರ ಕಾರಣದಿಂದ ಜಾಂಡೀಸ್‌ ರೋಗ ಕಾಣಿಸಿಕೊಳ್ಳುತ್ತದೆ.

ಸೊಳ್ಳೆ ಸಮಸ್ಯೆ ನಿವಾರಣೆಗೆ ಹೇಗೆ?: ನಿಂತ ನೀರಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ ಮನೆಯ ಮುಂದೆ ಸ್ವಚ್ಛತೆ ಕಾಪಾಡಿಕೊಳ್ಳಿ. ನೀರು ನಿಲ್ಲಲು ಬಿಡಬೇಡಿ. ಸೊಳ್ಳೆ ಔಷಧಿ, ಸೀಮೆ ಎಣ್ಣೆ ಸಿಂಪಡಣೆಯಿಂದ ಸೊಳ್ಳೆಗಳನ್ನು ಕಡಿಮೆ ಮಾಡುವುದು, ಮೈ ಮುಚ್ಚಿಕೊಳ್ಳುವ ಬಟ್ಟೆ ತೊಡುವುದು, ನೀಲಗಿರಿ ತೈಲವನ್ನು ಮೈಗೆ ಹಚ್ಚಿಕೊಳ್ಳುವುದರಿಂದ ಸೊಳ್ಳೆ ಕಡಿತದಿಂದ ಪಾರಾಗಬಹುದು.

ಮುಂಜಾಗ್ರತಾ ಕ್ರಮಗಳು: ಕುದಿಸಿ ಆರಿಸಿದ ನೀರನ್ನೇ ಕುಡಿಯುವುದು. ಆಹಾರ ಸೇವನೆಗೂ ಮುನ್ನ ಸ್ವಯಂ ಶುಚಿತ್ವ. ಮಳೆಗಾಲದಲ್ಲಿ ಬೇಯಿಸದ ತಿನಿಸುಗಳ ಸೇವನೆ ಬೇಡ. ರಸ್ತೆ ಅಕ್ಕಪಕ್ಕ ಸ್ಥಳಗಳ ಆಹಾರ ಸೇವನೆ ಬೇಡ.

ಮಳೆಗಾಲದಲ್ಲಿ ಸಾರ್ವಜನಿಕರು ಆರೋಗ್ಯದ ಕಡೆ ಅಗತ್ಯ ಮುಂಜಾಗ್ರತೆ ವಹಿಸಬೇಕು. ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮುಖ್ಯವಾಗಿ ಸೊಳ್ಳೆಯಿಂದ ದೂರವಿರಬೇಕು, ಜ್ವರ ಲಕ್ಷಣ ಬಂದರೆ ಶೀಘ್ರ ಆಸ್ಪತ್ರೆಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಬೇಕು. ಇತರೆ ಯಾವುದೇ ರೋಗ ಲಕ್ಷಣ ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.
-ಶಿವರಾಜ್‌ ಸಜ್ಜನ್‌ ಶೆಟ್ಟಿ, ಸಾಂಕ್ರಾಮಿಕ ರೋಗ ವಿಭಾಗ ಆರೋಗ್ಯ ಇಲಾಖೆ

— ವೆಂ. ಸುನೀಲ್‌ಕುಮಾರ್‌/ ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next