ವಿಶ್ವಸಂಸ್ಥೆ:ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದ ಲಕ್ಷಾಂತರ ಜನರು ಸಂಕಷ್ಟಕ್ಕೊಳಗಾಗಿರುವುದಾಗಿ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ, ಉಭಯ ದೇಶಗಳ ನಡುವಿನ ಯುದ್ಧವನ್ನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಭಾರತ ತಿಳಿಸಿದೆ.
ಇದನ್ನೂ ಓದಿ:ಜೀವನದಲ್ಲಿ ಸಂತೋಷದ ಪ್ರತಿಯೊಂದು ಬಣ್ಣವನ್ನು ತರಲಿ: ಹೋಳಿ ಹಬ್ಬದ ಶುಭ ಕೋರಿದ ಪ್ರಧಾನಿ
ರಷ್ಯಾ, ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಲು ಬೇರೆ ಆಯ್ಕೆಗಳಿಲ್ಲ. ಆದರೆ ಮಾತುಕತೆ ಮತ್ತು ರಾಜತಾಂತ್ರಿಕ ಮೂಲಕವೇ ಯುದ್ಧವನ್ನು ನಿಲ್ಲಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಿ ಹೇಳಿರುವುದಾಗಿ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಜತೆ ಮಾತುಕತೆ ನಡೆಸಿದ್ದು, ಉಭಯ ದೇಶಗಳು ನೇರವಾಗಿ ಮಾತುಕತೆ ನಡೆಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ರಷ್ಯಾ ಸೇನಾಪಡೆಯ ನಿರಂತರ ದಾಳಿಯಿಂದಾಗಿ ಲಕ್ಷಾಂತರ ಮಂದಿ ಉಕ್ರೇನ್ ನಿವಾಸಿಗಳು ಮನೆ ತೊರೆಯುವಂತಾಗಿದೆ. ಅಲ್ಲದೇ ಲಕ್ಷಾಂತರ ಮಂದಿ ಭಯದಲ್ಲಿಯೇ ಕಾಲಕಳೆಯುತ್ತಿದ್ದಾರೆ. ಏತನ್ಮಧ್ಯೆ ರಷ್ಯಾ, ಉಕ್ರೇನ್ ನಡುವಿನ ಮಾತುಕತೆಯಲ್ಲಿ ಕೆಲವೊಂದು ಧನಾತ್ಮಕ ಬೆಳವಣಿಗೆ ಕಂಡುಬಂದಿರುವುದಾಗಿ ರೋಸ್ಮೆರಿ ಡಿಕಾರ್ಲೋ ತಿಳಿಸಿದ್ದಾರೆ.