ನವದೆಹಲಿ: ತನ್ನ ನೆಲವಾಗಲಿ ಅಥವಾ ವಿದೇಶಿ ನೆಲವಾಗಲಿ, ಯಾವುದೇ ಪ್ರದೇಶಕ್ಕೂ ನುಗ್ಗಿ ಧ್ವಂಸ ಮಾಡುವ ತಾಕತ್ತು ಭಾರತಕ್ಕಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಖಡಕ್ಕಾಗಿ ನುಡಿದಿದ್ದಾರೆ.
ಪಾಕ್ ನೆಲದೊಳಗೆ ನುಗ್ಗಿ ಅಲ್ಲಿನ ಯೋಧರು ಮತ್ತು ಉಗ್ರರನ್ನು ಹೊಡೆದು ಹಾಕಿದ ಒಂದು ವಾರದ ನಂತರ ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಭಾರತ ಎಂದಿಗೂ ಆಂತರಿಕ ಭದ್ರತೆ ವಿಚಾರದಲ್ಲಿ ರಾಜಿಯಾಗಿಲ್ಲ ಎಂದಿದ್ದಾರೆ. ಈಗಾಗಲೇ ಭಾರತ ಅಗತ್ಯಬಿದ್ದರೆ ತನ್ನ ನೆಲದೊಳಗೆ ನುಗ್ಗುವ ಶತ್ರುಗಳು ಮತ್ತು ವಿದೇಶಿ ನೆಲದೊಳಗೆ ಹೋಗಿ ಅಲ್ಲಿನ ಶತ್ರುಗಳ ವಿರುದ್ಧ ಯಶಸ್ವಿಯಾಗಿ ದಾಳಿ ನಡೆಸಬಹುದು ಎಂಬುದನ್ನು ಸಾಧಿಸಿ ತೋರಿಸಿದೆ. ಭಾರತದ ಈ ಸಮರ್ಥ ದಾಳಿಯು ಜಾಗತಿಕ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನೂ ಜಾಹೀರು ಮಾಡಿದೆ ಎಂದೂ ಅವರು ಬಣ್ಣಿಸಿದ್ದಾರೆ.
ಇದರ ಜತೆಯಲ್ಲೇ ಕೆಲವು ತಿಂಗಳ ಹಿಂದೆ ಪಾಕಿಸ್ತಾನ ತನ್ನ ಬೆನ್ನಿಗೆ ಚೂರಿ ಇರಿಯುವ ಕಾಯಕ ಮುಂದುವರಿಸಿದ ಕಾರಣದಿಂದಾಗಿ ನಮ್ಮ 17 ಯೋಧರು ಹುತಾತ್ಮರಾಗಿದ್ದರು. ಹೀಗಾಗಿ ಪಾಕಿಸ್ತಾನದ ವಿರುದ್ಧ ಪ್ರಧಾನಿ ಮೋದಿ ಅವರು ಕಠಿಣ ನಿರ್ಧಾರ ತಳೆದು ಸರ್ಜಿಕಲ್ ಸ್ಟ್ರೈಕ್‌ಗೆ ಆದೇಶಿಸಿದ್ದರು. ಆಗಲೂ ಭಾರತದ ಸೇನೆ ಪಾಕಿಸ್ತಾನದೊಳಗೆ ನುಗ್ಗಿ ಅಲ್ಲಿ ಅಪಾರ ಪ್ರಮಾಣದ ಹಾನಿ ನಡೆಸಿತ್ತು ಎಂದೂ ರಾಜನಾಥ್ ಸಿಂಗ್ ಹೇಳಿದರು.
ಮತ್ತೆ ಮತ್ತೆ ಸಮನ್ಸ್: ಈ ಮಧ್ಯೆ ಸತತ ನಾಲ್ಕನೇ ದಿನವೂ ಪಾಕಿಸ್ತಾನ ಭಾರತದ ಡೆಪ್ಯುಟಿ ಹೈಕಮಿಷನರ್ ಅವರನ್ನು ಕರೆಸಿಕೊಂಡು ಪ್ರತಿಭಟನೆ ಸಲ್ಲಿಸಿದೆ. ಭಾರತ ಗಡಿಯುದ್ಧಕ್ಕೂ ಗುಂಡಿನ ದಾಳಿ ನಡೆಸುತ್ತಿದೆ ಎಂದು ಈ ಸಂದರ್ಭದಲ್ಲಿ ಆರೋಪಿಸಿದೆ.
ಗಡಿಯುದ್ಧಕ್ಕೂ ಹೆಚ್ಚಿನ ಭದ್ರತೆ ಗಣರಾಜ್ಯೋತ್ಸವ ವೇಳೆಯಲ್ಲಿ ಪಾಕಿಸ್ತಾನ ಮೂಲದ ಉಗ್ರರ ದಾಳಿಯ ಬಗ್ಗೆ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿದೆ. ನಾಲ್ಕು ಅಥವಾ ಮೂರು ಮಂದಿ ಉಗ್ರರು ಗಡಿಯೊಳಗೆ ನುಸುಳಲು ಹೊಂಚು ಹಾಕುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.