Advertisement

ಶ್ರೀರಾಮುಲು ವಿರುದ್ಧ ಸ್ಪರ್ಧಿಸಿಯೇ ಸಿದ್ದ

05:17 PM Apr 15, 2018 | |

ನಾಯಕನಹಟ್ಟಿ: ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದು ಇದರಲ್ಲಿ ಯಾವುದೇ ಅನುಮಾನ ಬೇಡ. ಶ್ರೀರಾಮುಲು ಅವರನ್ನು ಸೋಲಿಸಲು ಯಾವುದೇ ಪಕ್ಷದ ಸಹಾಯ ಪಡೆಯಲು ಸಿದ್ಧ ಎಂದು ಶಾಸಕ ಎಸ್‌. ತಿಪ್ಪೇಸ್ವಾಮಿ ಘೋಷಿಸಿದ್ದಾರೆ.

Advertisement

ಚಳ್ಳಕೆರೆ ತಾಲೂಕಿನ ನೇರಲಗುಂಟೆ ಗ್ರಾಮದ ತಮ್ಮ ನಿವಾಸದಲ್ಲಿ ಶನಿವಾರ ಬೆಂಬಲಿಗರ ಸಭೆ ನಡೆಸಿದ ಅವರು, ಒಂದೊಮ್ಮೆ ರಾಷ್ಟ್ರೀಯ ಪಕ್ಷದ ಟಿಕೆಟ್‌ ಸಿಗದಿದ್ದರೆ ಪಕ್ಷೇತರನಾಗಿ ಕಣಕ್ಕಿಳಿದು ಶಕ್ತಿ ತೋರಿಸುತ್ತೇನೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. 

ಬಳ್ಳಾರಿಯಲ್ಲಿ ಗೆಲ್ಲಲು ರಾಮುಲುಗೆ ಯೋಗ್ಯತೆ ಇಲ್ಲ: ಬಳ್ಳಾರಿ ಕ್ಷೇತ್ರದಲ್ಲಿ ಗೆಲ್ಲಲು ಯೋಗ್ಯತೆ ಇಲ್ಲದ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರಕ್ಕೆ ಟಿಕೆಟ್‌ ಪಡೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿ, ಬೂತ್‌ ಮಟ್ಟದ ಕಾರ್ಯಕರ್ತರ ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ಬಹು ದೊಡ್ಡ ಸಂಖ್ಯೆಯ ಜನರನ್ನು ನೋಡಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ಬೆಂಬಲವಿದೆ ಎಂಬುದನ್ನು ಅರಿತು ಇಲ್ಲಿ ಸ್ಪರ್ಧಿಸಲು ಬಯಸಿದ್ದಾರೆ ಎಂದು ಟೀಕಿಸಿದರು. 

ನನ್ನ ಸಹೋದರ ಬಳ್ಳಾರಿ ಡಿಸಿಎಫ್‌ ಆಗಿದ್ದ ಎಸ್‌. ಮುತ್ತಯ್ಯ ಜೈಲುಪಾಲಾಗಲು ಶ್ರೀರಾಮುಲು ಹಾಗೂ ಅವರ ಗುಂಪೇ ಕಾರಣ. ಈ ರೀತಿಯ ಮೋಸ, ದೌರ್ಜನ್ಯಗಳಿಂದ ಬಳ್ಳಾರಿ ರಾಜ್ಯದಲ್ಲಿ ಕುಖ್ಯಾತಿ ಪಡೆದಿದೆ. ಬಳ್ಳಾರಿಯ ಗನ್‌ಮ್ಯಾನ್‌ ಸಂಸ್ಕೃತಿ ಮೊಳಕಾಲ್ಮೂರು ಕ್ಷೇತ್ರದಲ್ಲಿಲ್ಲ ಎಂದು ಕುಟುಕಿದರು. ಜಿಪಂ ಸದಸ್ಯ ಒ. ಮಂಜುನಾಥ್‌ ಮಾತನಾಡಿ, ಶಾಸಕ ತಿಪ್ಪೇಸ್ವಾಮಿ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳಿಂದ ಜನರ ವಿಶ್ವಾಸ ಗಳಿಸಿದ್ದಾರೆ. ಹೀಗಾಗಿ ಜನರು ಒಗ್ಗಟ್ಟಾಗಿ ಅವರಿಗೆ ಬೆಂಬಲ ನೀಡಬೇಕು.

ಶ್ರೀರಾಮುಲು ಸಾಮಾನ್ಯ ಜನರಿಗೆ ಸಿಗದೇ ಇರುವ ವ್ಯಕ್ತಿ. ಹಾಗಾಗಿ ಜನರ ಸಮಸ್ಯೆಗೆ ಸ್ಪಂದಿಸುವ ಸ್ಥಳೀಯರನ್ನು ಆಯ್ಕೆ
ಮಾಡಬೇಕು ಎಂದು ಮನವಿ ಮಾಡಿದರು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸೈಯ್ಯದ್‌ ಅನ್ವರ್‌ ಮಾತನಾಡಿ, ಶಾಸಕರು ಪ್ರದೇಶದಲ್ಲಿ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಹೊರಗಿನ ಅಭ್ಯರ್ಥಿಗಳಿಗೆ ಬದಲಾಗಿ ಸ್ಥಳೀಯರಿಗೆ ಅವಕಾಶ ನೀಡಬೇಕು. ಶಾಸಕರು ಯಾವುದೇ ಪಕ್ಷ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಬೆಂಬಲ ನೀಡಬೇಕು ಎಂದರು. ಮುಖಂಡರಾದ ಚನ್ನಪ್ಪ, ಕನ್ನಯ್ಯ, ಶಿವಲಿಂಗ, ರಾಜಣ್ಣ, ಗ್ರಾಪಂ ಸದಸ್ಯ ದಿವಾಕರ ರೆಡ್ಡಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next