ಡರ್ಬಿ: ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ಸವಾಲನ್ನು ಎದುರಿಸಲು ಆಸ್ಟ್ರೇಲಿಯ ಸಿದ್ಧವಾಗಿದೆ ಎಂದಿದ್ದಾರೆ ಆ ತಂಡದ ಆರಂಭಿಕ ಆಟಗಾರ್ತಿ ಬೆತ್ ಮೂನಿ. ಇತ್ತಂಡಗಳ ನಡು ವಿನ ಮುಖಾಮುಖೀ ಗುರುವಾರ ಡರ್ಬಿಯಲ್ಲಿ ನಡೆಯಲಿದೆ.
“ಭಾರತ ತಂಡದಲ್ಲಿ ಬಹಳಷ್ಟು ಮಂದಿ ಮ್ಯಾಚ್ ವಿನ್ನರ್ ಇದ್ದಾರೆ. ಇವರೆಲ್ಲ ಎದುರಾಳಿಯ ಕೈಯಿಂದ ಪಂದ್ಯವನ್ನು ತಮ್ಮೆಡೆಗೆ ಸೆಳೆದೊಯ್ಯಬಲ್ಲರು. ಏಶ್ಯದ ಈ ಪ್ರಬಲ ತಂಡ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲ್ಯಾಂಡನ್ನು 186 ರನ್ನುಗಳ ಭಾರೀ ಅಂತರದಿಂದ ಪರಾಭವಗೊಳಿಸಿದ್ದನ್ನು ಮರೆಯುವಂತಿಲ್ಲ. ಭಾರತವನ್ನು ಎದುರಿಸುವುದು ದೊಡ್ಡ ಸವಾಲು. ಆದರೆ ಇದನ್ನು ಎದುರಿಸಲು ನಾವು ತಯಾರಾಗಿದ್ದೇವೆ…’ ಎಂದು ಮೂನಿ ಹೇಳಿದರು.
“ಬಹು ನಿರೀಕ್ಷಿತ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯದ ಯೋಜನೆ, ಕಾರ್ಯತಂತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ. ಆರಂಭದಲ್ಲೇ ಒಂದೆರಡು ವಿಕೆಟ್ ಹಾರಿಸಿ ಎದುರಾಳಿಗೆ ಹಿನ್ನಡೆ ಆಗುವಂತೆ ಮಾಡುವುದು ನಮ್ಮ ಯೋಜನೆ. ಗುರುವಾರವೂ ನಮ್ಮ ಬೌಲರ್‌ಗಳು ಸಿಡಿದು ನಿಲ್ಲುವ ವಿಶ್ವಾಸವಿದೆ…’ ಎಂದರು ಮೂನಿ.
ಕ್ರಿಸ್ಟನ್ ಬೀಮ್ಸ್ (10), ಜೆಸ್ ಜೊನಾಸೆನ್ (9), ಮೆಗಾನ್ ಶಟ್ (9 ವಿಕೆಟ್) ಅವರೆಲ್ಲ ಆಸೀಸ್ ದಾಳಿಯ ಮುಂಚೂಣಿಯಲ್ಲಿದ್ದಾರೆ. ಎಲಿಸ್ ಪೆರ್ರಿ ಮತ್ತು ನಾಯಕಿ ಮೆಗ್ ಲ್ಯಾನಿಂಗ್ ಅಮೋಘ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಸ್ವತಃ ಮೂನಿ 231 ರನ್ ಬಾರಿಸಿ ಅಪಾಯಕಾರಿ ಆಗಬಲ್ಲ ಮುನ್ಸೂಚನೆ ನೀಡಿದ್ದಾರೆ.
ಆಸ್ಟ್ರೇಲಿಯ ಹಾಲಿ ಚಾಂಪಿಯನ್ ಕೂಡ ಆಗಿದ್ದು, ಈ ಕಿರೀಟವನ್ನು ಉಳಿಸಿಕೊಳ್ಳುವ ಮಹತ್ತರ ಗುರಿಯನ್ನು ಹೊಂದಿದೆ ಎಂದೂ ಬೆತ್ ಮೂನಿ ಹೇಳಿದರು.