ಚೌಕ ಇದು ಹಲವು ವಿಶೇಷತೆ ಹೊಂದಿರುವ ಸಿನಿಮಾ. ಮೊದಲನೆಯದು ತರುಣ್ ಸುಧೀರ್ ನಿರ್ದೇಶನದ ಮೊದಲ ಚಿತ್ರ. ಎರಡನೆಯದು ದ್ವಾರಕೀಶ್ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರುತ್ತಿರುವ 50 ನೇ ಸಿನಿಮಾ. ಮೂರನೆಯದು ನಾಲ್ವರು ಹೀರೋಗಳು ಒಟ್ಟಿಗೆ ನಟಿಸಿರುವುದು.
ನಾಲ್ಕನೆಯದು ಐವರು ಕ್ಯಾಮೆರಾಮೆನ್‌ಗಳು ಕೆಲಸ ಮಾಡಿರೋದು. ಆರನೆಯದು ಐವರು ಸಂಗೀತ ನಿರ್ದೇಶಕರು ಮ್ಯೂಸಿಕ್ ಕೊಟ್ಟಿರೋದು. ಏಳನೆಯದು ಐವರು ಸಂಭಾಷಣೆ ಬರೆದಿರೋದು. ಎಂಟನೆಯದು “ಅಪ್ಪ’ನ ಕುರಿತು ಬರೆದಿರುವ ಹಾಡೊಂದು ಈಗಾಗಲೇ ಎಲ್ಲೆಡೆ ಜೋರು ಸುದ್ದಿ ಮಾಡಿರುವುದು… ಇಷ್ಟೇ ಅಲ್ಲ, ಇನ್ನೂ ಇತ್ಯಾದಿ ವಿಶೇಷತೆಗಳು “ಚೌಕ’ ಚಿತ್ರದಲ್ಲಿ ಅಡಗಿವೆ.
ಈಗ ವಿಷಯ ಏನೆಂದರೆ, “ಚೌಕ’ ಬಿಡುಗಡೆಗೆ ರೆಡಿಯಾಗಿದೆ. ಯೋಗೀಶ್ ದ್ವಾರಕೀಶ್ ನಿರ್ಮಾಣದ “ಚೌಕ’ ಎಲ್ಲವೂ ಅಂದುಕೊಂಡಂತೆ ನಡೆದರೆ ಜನವರಿ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. “ಚೌಕ’ ಮಲ್ಟಿಸ್ಟಾರ್ ಸಿನಮಾ ಎಂಬುದು ಎಲ್ಲರಿಗೂ ಗೊತ್ತು. ಈವರೆಗೆ ಸಹೋದರ ನಂದಕಿಶೋರ್ ನಿರ್ದೇಶನದ ಯಶಸ್ವಿ ಚಿತ್ರಗಳ ಹಿಂದೆ ನಿಂತಿದ್ದ ತರುಣ್ ಸುಧೀರ್, ಬಹಳ ದಿನಗಳಿಂದಲೂ ಒಂದೊಳ್ಳೆಯ ಸಿನಿಮಾ ನಿರ್ದೇಶಿಸಬೇಕು ಎಂದು ಅಂದುಕೊಂಡಿದ್ದರು.
ಅದಕ್ಕೆ “ಚೌಕ’ ಸಾಕ್ಷಿಯಾಗಿದೆ. ಈ ಚಿತ್ರದಲ್ಲಿ ಪ್ರೇಮ್, ದಿಗಂತ್, ಪ್ರಜ್ವಲ್ ದೇವರಾಜ್ ಹಾಗೂ ವಿಜಯರಾಘವೇಂದ್ರ ನಾಯಕರುಗಳಾಗಿ ಕಾಣಿಸಿಕೊಂಡರೆ, ಇವರಿಗೆ ನಾಯಕಿಯರಾಗಿ, ಐಂದ್ರಿತಾ ರೇ, ಪ್ರಿಯಾಮಣಿ, ದೀಪಾ ಸನ್ನಿಧಿ, ಭಾವನಾ ನಟಿಸಿದ್ದಾರೆ. ಒಂದು ಸಿನಿಮಾ ಬಿಡುಗಡೆ ಮುನ್ನವೇ ಸುದ್ದಿ ಮಾಡುತ್ತದೆ ಅಂದರೆ, ಅದು ಹಾಡುಗಳಿಂದ. ಈಗಾಗಲೇ “ಚೌಕ’ ಸಿನಿಮಾ ಕೂಡ ಅಂಥದ್ದೊಂದು ಸುದ್ದಿ ಮಾಡಿದೆ.
ಯೋಗರಾಜಭಟ್ ಬರೆದಿರುವ “ಅಲ್ಲಾಡ್ಸು ಅಲ್ಲಾಡ್ಸು ..’ ಹಾಡು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ನಾಗೇಂದ್ರಪ್ರಸಾದ್ ಅವರು “ಅಪ್ಪ ಐಲವ್‌ಯೂ..’ ಹಾಡು ಕೂಡ ಭಾವುಕತೆಯನ್ನು ಹೆಚ್ಚಿಸುವಂತಿದೆ. ಈಗಾಗಲೇ ಈ ಹಾಡು ಕೇಳಿರುವ ರಕ್ಷಿತ, ಅಮೂಲ್ಯ, ಶ್ರುತಿ, ಶ್ರುತಿ ಹರಿಹರನ್, ತಾರಾ, ಸುಧಾರಾಣಿ. ಭಾವನಾ, ಪ್ರಣೀತಾ ಮುಂತಾದ ನಟಿಯರು ಭಾವುಕರಾಗಿರುವುದುಂಟು. ಚಿತ್ರಕ್ಕೆ ಕೃಷ್ಣ, ಸತ್ಯಹೆಗ್ಡೆ, ಸಂತೋಷ್ ರೈ ಪಾತಾಜೆ, ಶೇಖರ್ ಚಂದ್ರು, ಸುಧಾಕರ್ ಎಸ್ ರಾಜ್ ಕ್ಯಾಮೆರಾ ಹಿಡಿದಿದ್ದಾರೆ.