Advertisement

ಮಳೆಗಾಲಕ್ಕೆ  ಸಿದ್ಧವಾಗಲಿ ನಮ್ಮ ಮಂಗಳೂರು

07:12 AM Jan 27, 2019 | |

ಮಳೆಗಾಲ ಇನ್ನು 4 ತಿಂಗಳಲ್ಲಿ ಬರಲಿದೆ. ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಸಾಕಷ್ಟು ಮುಂಚಿತವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ರೂಪಿಸಬೇಕು ಮತ್ತು ಎದುರಿಸಲು ಸಮಗ್ರ ಕಾರ್ಯಯೋಜನೆ ಮತ್ತು ಸಮರ್ಪಕ ಅನುಷ್ಠಾನಕ್ಕೆ ನಿಗಾ ವಹಿಸಬೇಕು ಎಂಬುದು ಕಳೆದ ವರ್ಷದ ಮಳೆಗಾಲ ಕಲಿಸಿದ ಪಾಠ. ಮಳೆಗಾಲ ಹತ್ತಿರವಾಗುವಂತೆ ಸಿದ್ಧತೆಗಳನ್ನು ಆರಂಭಿಸುವ ಬದಲು ಸಾಕಷ್ಟು ಮುಂಚಿತವಾಗಿ ಕಾರ್ಯಯೋಜನೆಗಳನ್ನು ರೂಪಿಸಿದರೆ ಇವುಗಳ ಅನುಷ್ಠಾನದಲ್ಲಿ ಕೊನೆಯ ಕ್ಷಣದ ಧಾವಂತ ತಪ್ಪುತ್ತದೆ. ಈ ಬಾರಿಯ ಇನ್ನೊಂದು ಪ್ರಮುಖ ವಿಚಾರವೆಂದರೆ ಇನ್ನೆರಡು ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ಎದುರಾಗುವ ಸಾಧ್ಯತೆಗಳಿವೆ. ಆಗ ಚುನಾವಣಾ ನೀತಿ ಸಂಹಿತೆಗಳಿರುತ್ತವೆ. ಇದು ಕಾಮಗಾರಿಗಳ ಮೇಲೂ ಪರಿಣಾಮ ಬೀರುತ್ತದೆ. ಅಧಿಕಾರಿಗಳು ಕೂಡ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳ್ಳುತ್ತಾರೆ. 

Advertisement

ಕಳೆದ ವರ್ಷ ಮೇ 29ರಂದು ಸುರಿದ ಮಳೆ ಮಂಗಳೂರಿನ ಪಾಲಿಗೆ ನಿಶ್ಚಿತವಾಗಿಯು ಪ್ರಕೃತಿ ನೀಡಿರುವ ಮುನ್ನೆಚ್ಚರಿಕೆಯಾಗಿತ್ತು. ಸ್ಮಾರ್ಟ್‌ ನಗರವಾಗಲು ಹೊರಟಿರುವ ಮಂಗಳೂರಿನ ವಾಸ್ತವಿಕ ಸ್ಥಿತಿಯನ್ನು ( ಗ್ರೌಂಡ್‌ ರಿಯಲ್ಟಿ) ನಗರದ ಜನತೆ, ಆಡಳಿತ ವ್ಯವಸ್ಥೆ, ಜನಪ್ರತಿನಿಧಿಗಳ ಮುಂದೆ ತೆರೆದಿಟ್ಟಿತ್ತು. ಆಗಿರುವ ಲೋಪಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಚ್ಚರಿಸಿದೆ. ಮಳೆಯಿಂದ ನಗರದ ಮೇಲಾಗುವ ಪರಿಣಾಮಗಳನ್ನು ವಿಶ್ಲೇಷಣೆ ನಡೆಸಿ ಆಗಬೇಕಾಗಿರುವ ಕ್ರಮಗಳನ್ನು ತುರ್ತು ನೆಲೆಯಲ್ಲಿ ಕೈಗೊಳ್ಳುವುದರಿಂದ ಮುಂದೆ ಸಂಭವಿಸಬಹುದಾದ ಇನ್ನಷ್ಟು ಅನಾಹುತಗಳನ್ನು ತಪ್ಪಿಸುವ ಯೋಜನೆಗಳ ಬಗ್ಗೆಯೂ ಮನವರಿಕೆ ಮಾಡಿಕೊಟ್ಟಿದೆ.

ವಾರ್ಡ್‌ ಮಟ್ಟದಲ್ಲಿ ಕಾರ್ಯಾಚರಣೆ
ನಗರದಲ್ಲಿ ರಾಜಕಾಲುವೆಗಳಲ್ಲಿ, ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಇರುವ ಅಡಚಣೆಗಳು, ತೋಡುಗಳ ಒತ್ತುವರಿ, ರಸ್ತೆಗಳಲ್ಲಿ ತೆರವುಗೊಳಿಸದೆ ಇರುವ ಮಣ್ಣಿನ, ತ್ಯಾಜ್ಯಗಳ ರಾಶಿ, ತಗ್ಗು ಪ್ರದೇಶದಲ್ಲಿ
ನೀರು ನಿಲ್ಲುವಂತಹ ಪ್ರದೇಶಗಳ ಪರಿಸ್ಥಿತಿ ಮುಂತಾದವುಗಳ ಬಗ್ಗೆ ಸಾಕಷ್ಟು ಮುಂಚಿತವಾಗಿ ಪರಿಶೀಲಿಸಿ ಪೂರಕ ಕ್ರಮಗಳನ್ನು ಕೈಗೊಳ್ಳುವುದು ಮುಂದೆ ಮಳೆಯಿಂದ ಸಂಭವಿಸಬಹುದಾದ ಸಮಸ್ಯೆಗಳನ್ನು ಕನಿಷ್ಠಗೊಳಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಪ್ರತಿ ವಾರ್ಡ್‌ನಲ್ಲಿ ಪಾಲಿಕೆಯ ಅಧಿಕಾರಿ, ಕ್ಷೇತ್ರದ ಪಾಲಿಕೆ ಸದಸ್ಯ, ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯ ರಚನೆ ಪೂರಕವಾಗುತ್ತದೆ. ವಾರ್ಡ್‌ನಲ್ಲಿರುವ ತೋಡು, ಚರಂಡಿಗಳ ಸ್ಥಿತಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಇರುವ ಅಡಚಣೆಗಳ ವಸ್ತು ಸ್ಥಿತಿಯನ್ನು ಪರಿಶೀಲನೆ ನಡೆಸಿ ಪಾಲಿಕೆಗೆ ವರದಿ ಸಲ್ಲಿಸಬೇಕು. ವರದಿಯನ್ನು ಪಾಲಿಕೆ ಆಡಳಿತ ಗಂಭೀರವಾಗಿ ಪರಿಗಣಿಸಿ ಆವಶ್ಯಕ ಕ್ರಮಗಳನ್ನು ಆದ್ಯತೆಯ ನೆಲೆಯಲ್ಲಿ ಕೈಗೊಳ್ಳಬೇಕು ಹಾಗೂ ಕೈಗೊಂಡ ಕ್ರಮಗಳು ಸಮರ್ಪಕವಾಗಿದೆಯೇ ಎಂಬ ಬಗ್ಗೆ ಸಮಿತಿ ನಿಗಾ ವಹಿಸಬೇಕು. ಈ ಕ್ರಮಗಳು ಮುಂದೆ ಸಂಭವಿಸಬಹುದಾದ ಸಮಸ್ಯೆಗಳಿಗೆ ಮೊದಲೇ ಪರಿಹಾರ ಕಂಡುಕೊಳ್ಳುವಲ್ಲಿ ಸಹಕಾರಿಯಾಗಬಹುದು.

ವಸ್ತು ಸ್ಥಿತಿಯ ಸಮೀಕ್ಷೆ 
ಮಂಗಳೂರು ನಗರದಲ್ಲಿ ಅತ್ತಾವರ, ಕಂಕನಾಡಿ, ಕುದ್ರೋಳಿ, ಬಳ್ಳಾಲ್‌ಬಾಗ್‌, ಜೆಪ್ಪಿನಮೊಗರು, ಪಂಪ್‌ವೆಲ್‌, ಕೊಟ್ಟಾರಚೌಕಿ, ಕೋಡಿಕಲ್‌, ಮಾಲೆಮಾರ್‌, ಉಜ್ಯೋಡಿ, ಜೆಪ್ಪು ಮಹಾಕಾಳಿ ಪಡ್ಪು, ಕೊಂಚಾಡಿ, ಪಾಂಡೇಶ್ವರ ಸಹಿತ ಅನೇಕ ರಾಜಕಾಲುವೆಗಳಿವೆ. ಇದರ ಜತೆಗೆ ನಗರದಲ್ಲಿ ಹಲವಾರು ದೊಡ್ಡ ಹಾಗೂ ಸಣ್ಣ ಗಾತ್ರದ ತೋಡುಗಳಿವೆ. ಇವುಗಳ ಹೂಳೆತ್ತುವ ಕಾರ್ಯ ಪ್ರತಿವರ್ಷವೂ ನಡೆಯುತ್ತಿದೆ. ಆದರೂ ಈ ಪ್ರದೇಶಗಳಲ್ಲಿ ಕೃತಕ ನೆರೆ ಪ್ರತಿ ವರ್ಷ ಪುನಾರಾವರ್ತನೆಯಾಗುತ್ತಿದೆ. ಆದ್ದರಿಂದ ಸಮಸ್ಯೆಯ ಮೂಲವನ್ನು ಹುಡುಕಿ ಪರಿಹಾರ ಕಂಡುಕೊಳ್ಳುವ ಕಾರ್ಯ ತುರ್ತುನೆಲೆಯಲ್ಲಿ ಪರಿಣಾಮಕಾರಿಯಾಗಿ ನಡೆಯಬೇಕಾಗಿದೆ. ಮಳೆ ನೀರು ಹರಿದು ಹೋಗುತ್ತಿದ್ದ ಅನೇಕ ಮೂಲಗಳು ಮುಚ್ಚಿವೆ ಅಥವಾ ಒತ್ತುವರಿಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ನೀರು ಹರಿದು ಹೋಗುತ್ತಿದ್ದ ತೋಡುಗಳು ಎಲ್ಲೆಲ್ಲಿ ಮುಚ್ಚಿವೆ, ರಾಜಕಾಲುವೆಗಳು ಯಾವ ಕಡೆಗಳಲ್ಲಿ ಒತ್ತುವರಿ ಆಗಿವೆ, ಹೂಳೆತ್ತುವ ಕಾರ್ಯ ಸಮರ್ಪಕವಾಗಿ ನಡೆದಿದೆಯೇ ಎಂಬ ಪರಿಶೀಲನೆ ನಡೆದು ಪೂರಕ ಕ್ರಮಗಳು ಸಮರೋಪಾದಿಯಲ್ಲಿ ನಡೆಯಬೇಕಾಗಿದೆ.

ಕಂಟ್ರೋಲ್‌ ರೂಮ್‌ ಅನ್ನು ಹೆಚ್ಚು ಸದೃಢಗೊಳಿಸುವುದು
ನಗರದಲ್ಲಿ ಕಳೆದ ವರ್ಷ ಮಳೆಯಿಂದ ಕೃತಕ ನೆರೆ ಸಂಭವಿಸಿದ ಸಂದರ್ಭದಲ್ಲಿ ಕಂಟ್ರೋಲ್‌ ರೂಮ್‌ಗಳು ಸಮರ್ಪವಾಗಿ ಸ್ಪಂದಿಸಿಲ್ಲ ಎಂಬ ಬಗ್ಗೆ ಬಹಳಷ್ಟು ಜನರಿಂದ ಸಾಕಷ್ಟು ದೂರುಗಳು ವ್ಯಕ್ತವಾಗಿದ್ದವು. ಆದ್ದರಿಂದ ಮಳೆಗಾಲದ ನಾಲ್ಕು ತಿಂಗಳ ಕಾಲ ಕಂಟ್ರೋಲ್‌ ರೂಮ್‌ನಲ್ಲಿ ಹೆಚ್ಚಿನ ಸಿಬಂದಿ ಹಾಗೂ ದೂರವಾಣಿಗಳನ್ನು ಅಳವಡಿಸಿ ಸುವ್ಯವಸ್ಥಿತಗೊಳಿಸಬೇಕು ಮತ್ತು ಹೆಚ್ಚು ಸಕ್ರಿಯವಾಗಿಸಲು ಈಗಲೇ ಅಗತ್ಯ ಕಾರ್ಯಯೋಜನೆಗಳನ್ನು ರೂಪಿಸಬೇಕು.

Advertisement

ಗ್ಯಾಂಗ್‌ಗಳ ರಚನೆ
ಪಾಲಿಕೆ 60 ವಾರ್ಡ್‌ಗಳಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಗಳಲ್ಲಿ ತುಂಬಿರುವ ಹೂಳು ಹಾಗೂ ಮಣ್ಣು ತೆಗೆದು ಸ್ವಚ್ಛಗೊಳಿಸುವ ಕಾರ್ಯಕ್ಕೆ ಪ್ರತಿ ವರ್ಷ ಗ್ಯಾಂಗ್‌ ಗಳನ್ನು ರಚಿಸಲಾಗುತ್ತದೆ. ಈ ಗ್ಯಾಂಗ್‌ ಗಳನ್ನು ಸಾಕಷ್ಟು ಮುಂಚಿತವಾಗಿ ರಚಿಸಿ ವಾರ್ಡ್‌ ಮಟ್ಟದಲ್ಲಿ ಕಾರ್ಯಯೋಜನೆ ರೂಪಿಸಿ ಕೆಲಸಗಳನ್ನು ವಹಿಸಿಕೊಡುವುದು ಉತ್ತಮ. ಈ ಗ್ಯಾಂಗ್‌ಗಳು ವಾರ್ಡ್‌ ಮಟ್ಟದಲ್ಲಿ ಯಾವ ರೀತಿ ಕಾರ್ಯನಿರ್ವಹಿಸಿದೆ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಕೂಡಾ ಸಾಕಷ್ಟು ಕಾಲಾವಕಾಶ ಲಭಿಸುತ್ತದೆ. 

ಅಡಚಣೆಗಳ ನಿವಾರಣೆ
ಮಂಗಳೂರು ನಗರದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಕಾಂಕ್ರೀಟ್‌ ಕಾಮಗಾರಿಗಳು ಬಹುತೇಕ ಮುಗಿದಿದೆ. ಕೆಲವು ಕಡೆ ಚರಂಡಿ, ಫುಟ್‌ಪಾತ್‌ಗಳ ನಿರ್ಮಾಣವಾಗಿವೆ. ಇನ್ನು ಕೆಲವು ಕಡೆ ಕಾಮಗಾರಿಗಳು ನಡೆಯುತ್ತಿವೆ. ಚರಂಡಿ ನಿರ್ಮಾಣವಾಗಿರುವ ಕಡೆಗಳಲ್ಲೂ ನೀರು ಚರಂಡಿಯಲ್ಲಿ ಹೋಗದೆ ರಸ್ತೆಯಲ್ಲೇ ಹರಿಯುತ್ತಿದೆ. ಜ್ಯೋತಿವೃತ್ತ, ಬಂಟ್‌ಹಾಸ್ಟೆಲ್‌, ಕದ್ರಿ ಕಂಬಳ, ಬಿಜೈ, ಕೆ.ಎಸ್‌.ಆರ್‌. ರಾವ್‌ ರಸ್ತೆ, ಎಂ.ಜಿ. ರಸ್ತೆ ಮುಂತಾದೆಡೆಗಳಲ್ಲಿ ಈ ಮಳೆಗಾಲದಲ್ಲಿ ರಸ್ತೆಯೇ ತೋಡು ಆಗಿ ಪರಿವರ್ತನೆಗೊಳ್ಳುತ್ತಿದೆ. ಸಂಚಾರವೂ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. 

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next