ಬೆಂಗಳೂರು: ಈಗಾಗಲೇ ಪಿ-ಸ್ಯಾಟ್ ಉಪಗ್ರಹ ರೂಪಿಸಿರುವ ಪಿಇಎಸ್ ವಿಶ್ವವಿದ್ಯಾಲಯುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅನುದಾನದಲ್ಲಿ ಸಂಶೋಧನಾ ಉಪಗ್ರಹ(ಆರ್-ಸ್ಯಾಟ್) ಸಿದ್ಧಪಡಿಸಿದ್ದು, ಫೆ.28 ರಂದು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿ ಉಡಾವಣೆ ನಡೆಯಲಿದೆ.
ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಿಇಎಸ್ ವಿವಿ ಕುಲಾಧಿಪತಿ ಪ್ರೊ.ಎಂ.ಆರ್ .ದೊರೆಸ್ವಾಮಿ, ಉಡಾವಣೆಯ ಸಂಪೂರ್ಣ ಜವಾಬ್ದಾರಿ ಡಿಆರ್‌ಡಿಒ ನೋಡಿ ಕೊಳ್ಳಲಿದೆ. ವಿವಿಯಲ್ಲಿ ಕ್ರೂಸಿಬಲ್ ಆಫ್ ರಿಸರ್ಚ್ ಆ್ಯಂಡ್ ಇನೋವೇಷನ್(ಕೋರಿ) ಸಂಶೋಧನಾ ಕೇಂದ್ರ ಸ್ಥಾಪಿಸಿದ್ದೇವೆ. 2016ರಲ್ಲಿ ಪಿ-ಸ್ಯಾಟ್ ಉಪಗ್ರಹ ರೂಪಿಸಿ ಇಸ್ರೋಗೆ ಹಸ್ತಾಂತರಿಸಿದ್ದೆವು. ಈಗ ಡಿಆರ್ ಡಿಒ ಮನವಿಯ ಮೇರೆಗೆ ಆರ್-ಸ್ಯಾಟ್ ಉಪಗ್ರಹ ಸಿದ್ಧಪಡಿಸಿದ್ದೇವೆ. ವಿವಿಯ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ತಂಡದ ಸತತ ಎರಡು ವರ್ಷಗಳ ಪರಿಶ್ರಮದಿಂದ ಆರ್-ಸ್ಯಾಟ್ ಸಿದ್ಧವಾಗಿದ್ದು, ಉಡಾವಣೆಗೆ ಸಜ್ಜಾಗಿದೆ ಎಂದರು.
ಕೋರಿ ನಿರ್ದೇಶಕ ಡಾ.ಸಾಂಬಾಶಿವ ರಾವ್ ಮಾತನಾಡಿ, 15 ವಿದ್ಯಾರ್ಥಿಗಳನ್ನು ಒಳಗೊಂಡ ಪ್ರಾಧ್ಯಾಪಕರ ತಂಡ ಆರ್-ಸ್ಯಾಟ್ ರೂಪಿಸಿದೆ. ವಿನ್ಯಾಸ ಮತ್ತು ಉಪಕರಣಗಳ ಅವಳಡಿಕೆಗೆ ಡಿಆರ್‌ಡಿಒ ಒಪ್ಪಿಗೆ ಪಡೆಯಲಾಗಿದೆ. ಈಗಾಗಲೇ ಪರೀûಾರ್ಥ ಉಡಾವಣೆಯೂ ನಡೆದಿದೆ. ಬಂದರುಗಳಲ್ಲಿ ಬರುವ ಹಡಗುಗಳ ಮೇಲೆ ನಿಗಾವಹಿಸಲು ಇದು ಅನುಕೂಲವಾಗಲಿದೆ. ವಿಮಾನಗಳ ಮಾಹಿತಿ ನೀಡಲು ರಡಾರ್ ರೀತಿಯಲ್ಲೇ ಇದು ಸಹ ಕಾರ್ಯನಿರ್ವಹಿಸಲಿದೆ. 500 ಕಿ.ಮೀ.ದೂರದಲ್ಲಿ ಬರುವಂತಹ ಹಡಗುಗಳ ಮಾಹಿತಿಯನ್ನು ತಕ್ಷಣ ಡಿಆರ್‌ಡಿಒಗೆ ಒದಗಿಸುವ ಸಾಮರ್ಥ್ಯ ಇದಕ್ಕೆ ಇದೆ ಎಂದು ಹೇಳಿದರು.
15 ಕೆ.ಜಿ.ತೂಕ ಇದ್ದು, 300 ಎಂಎಂ ಸುತ್ತಳೆಯ 3 ಸೋಲಾರ್ ಪ್ಯಾನೆಲ್, ಬ್ಯಾಟರಿ, ಆಂಟೇನಾ ಸೇರಿ ಹಲವು ಉಪಕರಣಗಳನ್ನು ಹೊಂದಿದೆ. ಡಿಆರ್‌ಡಿಒ ಆರ್-ಸ್ಯಾಟ್ ನಿಯಂತ್ರಿಸಲಿದೆ. ಉಡಾವಣೆಯಾದ ಒಂದೂವರೆ ಗಂಟೆಗೆ ಉಪಗ್ರಹ ಕಕ್ಷೆಯನ್ನು ಸೇರಲಿದೆ. ಇದರ ಜೀವಿತಾವಧಿ 2 ವರ್ಷ ಎಂದು ಮಾಹಿತಿ ನೀಡಿದರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಏಕರೂಪ ಪ್ರವೇಶ ಪರೀಕ್ಷೆ ನಡೆಸುವ ಸಂಬಂಧ ಅಖೀಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಚಿಂತನೆ ನಡೆಸುತ್ತಿದೆ. ನೀಟ್ ಮಾದರಿಯಲ್ಲೇ ಎಂಜಿನಿಯರಿಂಗ್ ಪ್ರವೇಶ ನಡೆಬೇಕು ಎಂದಿದೆ. ಆದರೆ, ಇದರಲ್ಲಿ ರಾಜ್ಯ ಸರ್ಕಾರ ಏಕರೂಪ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.
- ಡಾ.ಎಂ.ಆರ್.ದೊರೆಸ್ವಾಮಿ, ( ಪಿಇಎಸ್ ವಿವಿ ಕುಲಾಧಿಪತಿ )