ಮೈಸೂರು: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾ ಪ್ರದೇಶದ ವ್ಯಾಪ್ತಿಗೆ ಬರುವ ನುಗು ಜಲಾಶಯ ವಲಯದಲ್ಲಿ ಅಧಿಕಾರಿಗಳು ಸಫಾರಿಗ ಸದ್ದಿಲ್ಲದೆ ಸಿದ್ಧತೆ ನಡೆಸಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ತಕ್ಷಣ ಎಚ್ಚೆತ್ತ ಅಧಿಕಾರಿಗಳು ಸಫಾರಿ ಆರಂಭಿಸುವ ಯೋಜನೆಯನ್ನು ಕೈಬಿಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ನುಗು ವನ್ಯಜೀವಿ ವಲಯ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾ ಪ್ರದೇಶದ ವ್ಯಾಪ್ತಿಯಲ್ಲಿದ್ದು, ಈ ಪ್ರದೇಶದಲ್ಲಿ ಭಾರೀ ಸಂಖ್ಯೆಯ ಆನೆಗಳು ಕಂಡು ಬರುತ್ತವೆ. ಅಲ್ಲದೇ ಆಗಾಗ ಆನೆ ಮತ್ತು ಮಾನವ ಸಂಘರ್ಷ ಏರ್ಪಡುವುದುಂಟು. ಜೊತೆಗೆ ಹುಲಿ ಮತ್ತು ಚಿರತೆಗಳು ಕಾಡಂಚಿನ ಪ್ರದೇಶಗಳಲ್ಲಿ ಉಪಟಳ ನೀಡುವ ಹಲವು ನಿದರ್ಶನಗಳಿದ್ದರೂ, ಅಧಿಕಾರಿಗಳು ಏಕಾಏಕಿ ಯೋಜನೆ ಕೈಗೊಂಡಿದ್ದಾರೆ. ಒಂದು ವೇಳೆ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಉತ್ತೇಜಿತ ಸಫಾರಿ ಆರಂಭಿಸಿದಲ್ಲಿ ವನ್ಯಜೀವಿಗಳು ಕಾಡಂಚಿಗೆ ಬರುವ ಅಪಾಯವಿದೆ. ಜೊತೆಗೆ ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯೂ ಆಗಲಿದೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನುಗು ಅತೀ ಸೂಕ್ಷ್ಮ ಅರಣ್ಯ ಪ್ರದೇಶ (ಎಕೋ ಸೆನ್ಸಿಟಿವ್ ಜೋನ್) ವ್ಯಾಪ್ತಿಗೆ ಬರುತ್ತದೆ. ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯ ವಾಗಿರುವುದರಿಂದ ಇಲ್ಲಿ ಪ್ರವಾಸೋದ್ಯಮ ಚಟುವಟಿಕೆ ಮಾಡುವಂತಿಲ್ಲ. ಇದಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ) ಅನುಮತಿ ಬೇಕು. ಇದಕ್ಕೆ ಅನುಮತಿ ನೀಡುವುದು ಕಷ್ಟ. ಎನ್‌ಟಿಸಿಎ ಗಮನಕ್ಕೆ ತಾರದೇ ಆರಂಭಿಸಲು ಯೋಜನೆ ರೂಪಿಸಲಾಗಿತ್ತು ಎಂಬ ಸಂದೇಹ ಮೂಡಿದೆ.
ಬಂಡೀಪುರ ನಿರ್ದೇಶಕ ಟಿ. ಬಾಲಚಂದ್ರ ಅ. 30ರಂದು ನಿವೃತ್ತರಾಗಲಿದ್ದು, ಇದಕ್ಕೆ ಮುನ್ನಾ ಸಫಾರಿ ಉದ್ಘಾಟಿಸಿ ಹೋಗಲು ನಿರ್ಧರಿಸಿದ್ದರು. ಅಕ್ಟೋಬರ್ 30ರಿಂದ ಬೆಳಗ್ಗೆ ಹಾಗೂ ಸಂಜೆ ಸಫಾರಿ ನಡೆಸಲು ಆಹ್ವಾನ ಪತ್ರಿಕೆಯನ್ನೂ ಹೊರಡಿಸಲಾಗಿತ್ತು. ಆದರೆ ಇದಕ್ಕೆ ಬಲವಾದವಿರೋಧ ವ್ಯಕ್ತವಾಗಿದ್ದರಿಂದ ಅಧಿಕಾರಿಗಳು ಸದ್ಯಕ್ಕೆ ಯೋಜನೆ ಕೈಬಿಟ್ಟಿದ್ದಾರೆ.
ನುಗು ಭಾಗದಲ್ಲಿ ಮಾಜಿ ಸಚಿವರೊಬ್ಬರ ಪುತ್ರನಿಗೆ ಸೇರಿದ ಜಮೀನು ಇದ್ದು, ಅವರ ಪ್ರಭಾವದಿಂದ ಸಫಾರಿ ಆರಂಭಿಸಲಾಗುತ್ತಿದೆಯೇ ಎಂಬ ಅನುಮಾನ ಅರಣ್ಯ ಇಲಾಖೆಯಲ್ಲಿ ಮೂಡಿದೆ. ಒಟ್ಟಾರೆ ಹಾಲಿ ಬಂಡೀಪುರ ನಿರ್ದೇಶಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಟಿ.ಬಾಲಚಂದ್ರ 31 ರಂದು ಸೇವೆಯಿಂದ ನಿವೃತ್ತರಾಗುತ್ತಿದ್ದು, ತರಾತುರಿಯಲ್ಲಿ ನುಗು ಸಫಾರಿ ಆರಂಭಿಸಲು ಮುಂದಾಗಿದ್ದು ಚರ್ಚೆಗೆ ಎಡೆಮಾಡಿದೆ..
ಸಫಾರಿ ಆರಂಭಿಸುವ ಬಗ್ಗೆ ಪಿಸಿಸಿಎಫ್ ಅವರು ವರದಿ ಕೇಳಿದ್ದ ಹಿನ್ನೆಲೆ ಸದ್ಯಕ್ಕೆ ನುಗು ವ್ಯಾಪ್ತಿಯಲ್ಲಿ ಸಫಾರಿ ಆರಂಭಿಸುವ ಯೋಜನೆಯನ್ನು ತಡೆ ಹಿಡಿಯಲಾಗಿದೆ. ಕಣ್ತಪ್ಪಿನಿಂದ ಮಾಹಿತಿ ಪತ್ರಿಕೆ ಹೊರ ಹೋಗಿದೆ ಅಷ್ಟೇ. ಯಾವುದೇ ಆಹ್ವಾನ ಪತ್ರಿಕೆ ಮುದ್ರಿಸಿಲ್ಲ. ಬಂಡೀಪುರದಲ್ಲಿ ಸದ್ಯಕ್ಕೆ ಇರುವುದು ಒಂದೇ ಸಫಾರಿ ಕೇಂದ್ರ ಇದ್ದು, ಇದರ ಮೇಲೆ ಹೆಚ್ಚು ಒತ್ತಡವಿರುವುದರಿಂದ ನುಗು ವ್ಯಾಪ್ತಿಯಲ್ಲಿ ಸಫಾರಿ ಆರಂಭಿಸಲು ಯೋಜನೆ ರೂಪಿಸಲಾಗಿದೆ.
–ಬಾಲಚಂದ್ರ, ಸಿಎಫ್, ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯ