ಬೆಂಗಳೂರು: ಬಿಜೆಪಿ ಸರ್ಕಾರ ರಚನೆಯಾದರೆ ಸಮರ್ಥ ಪ್ರತಿಪಕ್ಷವಾಗಿ ಕೆಲಸ ಮಾಡಬೇಕು. ಮಧ್ಯಂತರ ಚುನಾವಣೆ ಎದುರಾದರೂ ಸಿದ್ಧವಿರಬೇಕು ಎಂದು ಜೆಡಿಎಸ್ ತೀರ್ಮಾನಿಸಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಹಂಗಾಮಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಶಾಸಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ವಿಶ್ವಾಸಮತದಲ್ಲಿ ಮೈತ್ರಿ ಸರ್ಕಾರಕ್ಕೆ ಸೋಲು ಉಂಟಾದ ಹಿನ್ನೆಲೆಯಲ್ಲಿ ಮುಂದಿನ ನಡೆ ಹಾಗೂ ಕಾರ್ಯಯೋಜನೆಗಳ ಬಗ್ಗೆ ಪಕ್ಷದ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ, ಬಿಜೆಪಿ ಸರ್ಕಾರ ರಚನೆಯಾದರೆ ಪ್ರತಿಪಕ್ಷವಾಗಿ ಕೆಲಸ ಮಾಡಬೇಕು. ಒಂದು ವೇಳೆ ಮಧ್ಯಂತರ ಚುನಾವಣೆ ಎದುರಾದರೂ ಸಜ್ಜಾಗಬೇಕು ಎಂದು ದೇವೇಗೌಡರು ಸೂಚನೆ ನೀಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿ ಮುಂದುವರಿಸಬೇಕೇ ? ಬೇಡವೇ? ಎಂಬ ಬಗ್ಗೆಯೂ ಚರ್ಚೆಯಾಗಿ ಅಂತಿಮವಾಗಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರಲು ನಿರ್ಧರಿಸಲಾಯಿತು.
ಇದೇ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ ಮೂವರು ಶಾಸಕರ ಅನರ್ಹತೆ ಕೋರಿ ಸ್ಪೀಕರ್‌ಗೆ ಪತ್ರ ಬರೆಯಬೇಕು. ಪಕ್ಷದ ಚಿಹ್ನೆಯಡಿ ಗೆಲುವು ಸಾಧಿಸಿದ ಅವರು ಅಧಿಕಾರಕ್ಕಾಗಿ ಬಿಜೆಪಿಗೆ ಹೋಗುತ್ತಿರುವುದರಿಂದ ಸೂಕ್ತ ಪಾಠ ಕಲಿಸಬೇಕು ಎಂದು ಕೆಲ ಶಾಸಕರು ಒತ್ತಾಯಿಸಿದರು. ಈ ಬಗ್ಗೆ ಪಕ್ಷದ ವಕ್ತಾರರು ಕ್ರಮ ಕೈಗೊಳ್ಳಲಿದ್ದಾರೆ ಎಂದು ದೇವೇಗೌಡರು ತಿಳಿಸಿದರು.
ಆಪರೇಷನ್ ಕಮಲ ಕಾರ್ಯಾಚರಣೆಯಡಿ ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗಿ ಯಾರೂ ಆಮಿಷಗಳಿಗೆ ಬಲಿಯಾಗಬೇಡಿ. ಪಕ್ಷ ನಿಷ್ಠೆ ಮುಖ್ಯ, ಪಕ್ಷ ಅಧಿಕಾರದಲ್ಲಿದ್ದಾಗ ಸಾಧ್ಯವಾದಷ್ಟೂ ಎಲ್ಲರಿಗೂ ಅಧಿಕಾರ ನೀಡಲು ಪ್ರಯತ್ನಿಸಲಾಗಿದೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.