ವಿಧಾನ ಪರಿಷತ್ತು: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತವನ್ನು “ರಾಷ್ಟ್ರೀಯ ಯೋಜನೆ’ಯಾಗಿ ಘೋಷಿಸುವ ನೆಪದಲ್ಲಿ ಅನುಷ್ಠಾನಕ್ಕೆ ವಿಳಂಬ ಮಾಡಿದರೆ, ನಾವು ಯಾವ ತ್ಯಾಗಕ್ಕೂ ಸಿದ್ಧರಾಗಬೇಕಾಗುತ್ತದೆ’ ಎಂದು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಗುಡುಗಿದರು.
ಮೇಲ್ಮನೆಯಲ್ಲಿ ಸೋಮವಾರ ರಾಜ್ಯಪಾ ಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತ ನಾಡಿ, ಈಗಾಗಲೇ ಯೋಜನೆ ಅನುಷ್ಠಾನದಲ್ಲಿ ಸಾಕಷ್ಟು ವಿಳಂಬ ವಾಗಿದೆ. ಈಗ ಪುನಃ “ರಾಷ್ಟ್ರೀಯ ಯೋಜನೆ’ಯಾಗಿ ಘೋಷಿಸುವ ನೆಪದಲ್ಲಿ ತಡವಾದರೆ, ಯಾವ ತ್ಯಾಗಕ್ಕೂ ಸಿದ್ಧರಾಗಬೇಕಾಗುತ್ತದೆ. ಅಷ್ಟಕ್ಕೂ ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಅಗತ್ಯವೂ ಇಲ್ಲ. ಹಾಗಾಗಿ ರಾಜ್ಯ ಸರ್ಕಾರ ತಡಮಾಡದೆ ತಕ್ಷಣದಿಂದ ಅನುಷ್ಠಾ ನಕ್ಕೆ ಕ್ರಮ ಕೈಗೊಳ್ಳಬೇ ಕೆಂದು ಆಗ್ರಹಿಸಿದರು.
ಮೊದಲೆರಡು ಹಂತಗಳ ಅನುಷ್ಠಾನಕ್ಕಾಗಿ 2.73 ಲಕ್ಷ ಎಕರೆ ಜಮೀನು ಸ್ವಾಧೀನಪಡಿಸಿ ಕೊಳ್ಳಲಾಗಿದೆ. 176 ಹಳ್ಳಿಗಳು ಮುಳುಗಡೆಯಾ ಗಿದ್ದು, ಶಾಶ್ವತವಾಗಿ ಅವುಗಳಿಗೆ ಪುನರ್‌ವಸತಿ ಕಲ್ಪಿಸಲಾಗಿದೆ. 25 ಸಾವಿರ ಮನೆಗಳನ್ನು ಸ್ಥಳಾಂತ ರಿಸಲಾಗಿದೆ. ಇದೆಲ್ಲವೂ ರಾಜ್ಯ ಸರ್ಕಾರ ತನ್ನ ಹಣದಲ್ಲೇ ಮಾಡಿ ಮುಗಿಸಿದೆ. 3ನೇ ಹಂತದಲ್ಲಿ 1.30 ಲಕ್ಷ ಎಕರೆ ಭೂಸ್ವಾಧೀನ ಹಾಗೂ ಕೇವಲ 20 ಹಳ್ಳಿಗಳಿಗೆ ಪುನರ್‌ವಸತಿ ಕಲ್ಪಿಸಬೇಕಾಗಿದೆ. ಇದನ್ನು “ರಾಷ್ಟ್ರೀಯ ಯೋಜನೆ’ ಘೋಷಿಸುವುದರ ಹಿಂದೆ ಕೇಂದ್ರ ಸರ್ಕಾರವೇ ಮಾಡಿದ್ದು ಎಂದು ಬಿಂಬಿಸುವ ಹುನ್ನಾರ ಇದೆ ಎಂದು ಆರೋಪಿಸಿದರು.
ನಂತರ ಮಾತನಾಡಿದ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ, “ರಾಷ್ಟ್ರೀಯ ಯೋಜನೆ’ಯಾಗಿ ಘೋಷಿಸುವುದು ಸೂಕ್ತ. ಇದರಿಂದ ಶೇ.90ರಷ್ಟು ಅನುದಾನವನ್ನು ಕೇಂದ್ರವೇ ಭರಿಸಲಿದೆ. ಈಗಾಗಲೇ ದೇಶದ ಐದಾರು ಪ್ರಮುಖ ನೀರಾವರಿ ಯೋಜನೆಗಳನ್ನು ಕೇಂದ್ರ ಹೀಗೆ ಘೋಷಿಸಿ, ಅನುದಾನ ಒದಗಿಸಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆದಿದ್ದರು ಎಂದು ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಆರ್. ಪಾಟೀಲ್, ಕೇಂದ್ರ ಅನುದಾನ ನೀಡುವುದಾ ದರೆ ಸ್ವಾಗತ. ಆದರೆ, ಅದೇ ನೆಪದಲ್ಲಿ ತಡ ಮಾಡಿದರೆ ಕೇಳುವುದಿಲ್ಲ. ಯಾಕೆಂದರೆ, ಈಗಾಗಲೇ ಆರು ದಶಕ ಕಳೆದಿವೆ. 75 ಸಾವಿರ ಕೋಟಿ ಮೊತ್ತದ ಈ ಯೋಜನೆಗೆ ಸರ್ಕಾರ ಒಟ್ಟಾರೆ ಬಜೆಟ್‌ನ ಶೇ. 10ರಷ್ಟು ಅನುದಾನ ಮೀಸಲಿಡಬೇಕು. ಸತತ ಮೂರು ವರ್ಷ ಹೀಗೆ ಮಾಡಿದರೆ, ಯೋಜನೆ ಪೂರ್ಣಗೊಳ್ಳುತ್ತದೆ. ಇದರಿಂದ ಉತ್ತರ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯುತ್ತದೆ. ದಕ್ಷಿಣದಷ್ಟೇ ಕೊಡುಗೆ ಯನ್ನು ಉತ್ತರವೂ ನೀಡಲಿದೆ ಎಂದು ಹೇಳಿದರು.
14 ಸಾವಿರ ಅವ್ಯವಹಾರ; 28 ಸಾವಿರ ಓಕೆ?: ಇದೇ ವೇಳೆ ಹಿಂದಿನ ಮತ್ತು ಇಂದಿನ ಸರ್ಕಾರಗಳು ದುಬಾರಿ ಮೊತ್ತದಲ್ಲಿ ಲ್ಯಾಪ್‌ಟಾಪ್ ಖರೀದಿಸಿರುವುದೂ ಚರ್ಚೆಗೆ ಗ್ರಾಸವಾಯಿತು. “ಹಿಂದಿನ ಸರ್ಕಾರವು ಲ್ಯಾಪ್‌ಟಾಪ್‌ಗೆ ಖರೀದಿಗೆ ಟೆಂಡರ್ ಕೂಡ ಕರೆದಿರಲಿಲ್ಲ. ಆದರೆ, ಹತ್ತು ಸಾವಿರ ಮೊತ್ತದ ಲ್ಯಾಪ್‌ಟಾಪ್ ಅನ್ನು 14 ಸಾವಿರಕ್ಕೆ ಪಡೆಯು ತ್ತಿದ್ದು, ಲ್ಯಾಪ್‌ಟಾಪ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಈಗಿನ ಆಡಳಿತ ಪಕ್ಷ ಬಿಜೆಪಿ ಆರೋಪಿಸಿತ್ತು. ಆದರೆ, ಈಗ ಅದೇ ಬಿಜೆಪಿ ಸರ್ಕಾರವು 28 ಸಾವಿರ ರೂ. ಕೊಟ್ಟು ಖರೀದಿಸುತ್ತಿದೆ’ ಎಂದು ಪ್ರತಿಪಕ್ಷದ ಸದಸ್ಯರು ಆರೋಪಿಸಿದರು.