Advertisement

ಓದಿನಿಂದ ಪ್ರಶ್ನೆಗಳು ಹುಟ್ಟುತ್ತವೆ : ಡಾ|ಕೆ.ವಿ. ತಿರುಮಲೇಶ್‌

03:43 PM Apr 11, 2017 | Harsha Rao |

ಕಾಸರಗೋಡು: ಓದುಗರ ಸಂಖ್ಯೆಯನ್ನು ಲೆಕ್ಕಹಾಕಿ ಕವಿ ಬರೆಯುವುದಿಲ್ಲ. ಒಳಗಿನ ಒತ್ತಡಕ್ಕೆ ಹೊರದಾರಿ ಕಂಡುಕೊಳ್ಳಲು ಬರೆಯುತ್ತಾನೆ. ಕಾಲ ಅನಂತವಾಗಿದೆ. ಯಾವಾಗಲೋ ಯಾರೋ ಒಬ್ಬ ಓದಿದರೆ ಸಾಕು. ಅದು ಕವಿಗೆ ಸಿಕ್ಕುವ ದೊಡ್ಡ ಗೌರವ. ಓದು ಬೇಕಾಗಿರೋದು ಓದುಗನಿಗೇ ಹೊರತು ಲೇಖಕನಿಗಲ್ಲ ಎಂದು ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಡಾ| ಕೆ.ವಿ. ತಿರುಮಲೇಶ್‌ ಹೇಳಿದರು.

Advertisement

ಕಾಸರಗೋಡಿನ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿಯ ದಶಮಾನೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹ ಯೋಗದೊಂದಿಗೆ ಏರ್ಪಡಿಸಿದ “ಓದಿನ ಸುತ್ತ ಮುತ್ತ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮನುಷ್ಯ ತಾಳ್ಮೆಯಿಂದಿದ್ದಾಗ, ಉಲ್ಲಸಿತ ವಾಗಿದ್ದಾಗ ಯೋಚಿಸುತ್ತಾ, ಅನುಭವಿಸುತ್ತಾ ಓದುವುದೇ ನಿಜವಾದ ಓದು. ಓದಿನಿಂದ ಪ್ರಶ್ನೆಗಳು ಹುಟ್ಟುತ್ತವೆ ಮತ್ತು ಆ ಮೂಲಕ ಮನುಷ್ಯನ ಚಿಂತನೆಯ ಮಟ್ಟದಲ್ಲಿ ಬೆಳವಣಿಗೆ ಯುಂಟಾಗುತ್ತದೆ. ಓದು ಮೇಲು ನೆಲೆಯ ಓದಾಗಿ ರೂಪುಗೊಳ್ಳಬೇಕಾದ್ದು ಇಂದಿನ ಅನಿವಾರ್ಯತೆ ಎಂದು ಅವರು ಅಭಿಪ್ರಾಯಪಟ್ಟರು.
ಶ್ರೀಕೃಷ್ಣಯ್ಯ ಅನಂತಪುರ, ಜಯಶ್ರೀ ಅನಂತಪುರ ದಂಪತಿಗಳು ಜೊತೆಯಾಗಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಡಾ| ಕೆ.ವಿ. ತಿರುಮಲೇಶ್‌ ಅವರನ್ನು ರಂಗಚಿನ್ನಾರಿ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅನಂತರ ನಡೆದ ಸಂವಾದದಲ್ಲಿ ಹಲವು ಸಾಹಿತಿ ಗಳು, ಗಣ್ಯರು ಭಾಗವಹಿಸಿದರು. ರಮ್ಯಾ ಅಂಬಿಕಾನ, ಶ್ರದ್ಧಾ  ಪೈವಳಿಕೆ ಮತ್ತು ಜಯಶ್ರೀ ಅನಂತಪುರ ಭಾವಗೀತೆಗಳನ್ನು ಹಾಡಿದರು. ರಂಗ ಚಿನ್ನಾರಿ ನಿರ್ದೇಶಕ ಕೆ. ಸತೀಶ್ಚಂದ್ರ ಭಂಡಾರಿ ವೇದಿಕೆಯಲ್ಲಿದ್ದರು. ಡಾ| ಯು. ಮಹೇಶ್ವರಿ, ಡಾ| ಶ್ರೀಪತಿ ಕಜಂಪಾಡಿ, ಶಶಿಕಲಾ ಬಾಯಾರು, ಶಂಕರನಾರಾಯಣ ಭಟ್‌ ಟಿ. ಮುಂತಾದವರು ಉಪಸ್ಥಿತರಿದ್ದರು.

ನಿರ್ದೇಶಕ ಕಾಸರಗೋಡು ಚಿನ್ನಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ| ರಾಧಾಕೃಷ್ಣ ಬೆಳ್ಳೂರು ಕಾರ್ಯಕ್ರಮ ನಿರೂಪಿಸಿದರು. ಕೆ. ಸತ್ಯನಾರಾಯಣ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next