Advertisement
ನಾಡಿನ ಪುಸ್ತಕ ಪ್ರಿಯರ ಮನದಿಂಗಿತವನ್ನು ಅರಿತಿರುವ ಕನ್ನಡ ಪುಸ್ತಕ ಪ್ರಾಧಿಕಾರ ಈ ಕಾರಣಕ್ಕಾಗಿಯೇ ಹೊಸ ಯೋಜನೆ ರೂಪಿಸುತ್ತಿದೆ. ಕನ್ನಡ ಪುಸ್ತಕಗಳನ್ನು ಹಳ್ಳಿಹಳ್ಳಿಗೆ ತಲುಪಿಸಬೇಕು ಎಂಬ ಸದುದ್ದೇಶದಿಂದ ಇಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿದೆ.
Related Articles
Advertisement
ಕೆಎಸ್‌ಆರ್‌ಟಿಸಿ ಸಾಥ್: ಸಂಚಾರಿ ಪುಸ್ತಕ ವಾಹನ ಯೋಜನೆ ಕಾರ್ಯಗತಗೊಳಿಸಲು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಗಳ ಜತೆ, ಕನ್ನಡ ಪುಸ್ತಕ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸಿ ಯೋಜನೆಯ ರೂಪುರೇಷೆ ಬಗ್ಗೆ ನಿರ್ಧರಿಸಿದ್ದಾರೆ. ಅದರ ಫಲವಾಗಿ ಇದೀಗ ಪ್ರಾಧಿಕಾರಕ್ಕೆ ಸಂಚಾರಿ ವಾಹನಗಳನ್ನು ನೀಡಲು ಕೆಎಸ್‌ಆರ್‌ಟಿಸಿ ಕೂಡ ಒಪ್ಪಿಕೊಂಡಿದೆ. ಆರಂಭದಲ್ಲಿ ಐದು ಬಸ್‌ಗಳನ್ನು ನೀಡುವಂತೆ ಸಾರಿಗೆ ಇಲಾಖೆಗೆ ಪ್ರಾಧಿಕಾರ ಮನವಿ ಮಾಡಿದೆ.
ಆರ್ಥಿಕ ಸಹಾಯ ನಿರೀಕ್ಷೆ: ಯೋಜನೆಯಲ್ಲಿರುವಂತೆ ಒಟ್ಟು 4 ವಲಯಗಳಲ್ಲಿ ಈ ಬಸ್ ಸಂಚರಿಸಲಿವೆ. ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಒಂದು ಸಂಚಾರಿ ವಾಹನ ವಾರ್ಡ್ ಮಟ್ಟದಲ್ಲಿ ತೆರಳಲಿದೆ. ಜಿಲ್ಲಾವಾರು ಯಶಸ್ಸಿನ ನಂತರ ತಾಲೂಕು ಮಟ್ಟದಲ್ಲಿ ವಿಸ್ತರಿಸುವ ಆಲೋಚನೆ ಪ್ರಾಧಿಕಾರದ್ದು. ಸಾಕಷ್ಟು ಹಣದ ಅಗತ್ಯವಿರುವ ಹಿನ್ನೆಲೆಯಲ್ಲಿ ಸರ್ಕಾರ ಬಜೆಟ್‌ನಲ್ಲಿ ನೀಡುವ ಆರ್ಥಿಕ ಸಹಾಯವನ್ನು ನೋಡಿ ಮುಂದಿನ ಹಂತಗಳಲ್ಲಿ ಯೋಜನೆ ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರಿಗೆ ಸಚಿವರಿಂದ ಗ್ರೀನ್‌ಸಿಗ್ನಲ್: ಪುಸ್ತಕಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಸಂಚಾರಿ ವಾಹನಗಳನ್ನಾಗಿ ಬಳಕೆ ಮಾಡಿಕೊಳ್ಳಲು ಬಸ್‌ಗಳ ನಿರ್ವಹಣೆ ಮತ್ತು ವೆಚ್ಚದ ಕುರಿತು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರ ಜತೆ ಮಾತುಕತೆ ನಡೆದಿದೆ. ಇದಕ್ಕೆ ಸಚಿವರು ಕೂಡ ಸಮ್ಮತಿಸಿದ್ದಾರೆ. ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಜತೆಗೂ ಸಮಾಲೋಚನೆ ನಡೆದಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಳ್ಳಿ ಹಳ್ಳಿಗೂ ಕನ್ನಡದ ಪುಸ್ತಕಗಳನ್ನು ಜನತೆಗೆ ತಲುಪಿಸಬೇಕು ಎಂಬ ಉದ್ದೇಶ ಪ್ರಾಧಿಕಾರದ್ದಾಗಿದೆ. ಬೆಳ್ಳಿಹಬ್ಬದ ಹಿನ್ನೆಲೆಯಲ್ಲಿ ಹಲವು ಯೋಜನೆಗಳನ್ನು ಪ್ರಾಧಿಕಾರ ರೂಪಿಸುತ್ತಿದೆ. ಇದರಲ್ಲಿ ಸಂಚಾರಿ ವಾಹನ ಯೋಜನೆ ಕೂಡ ಒಂದು. -ವಸುಂಧರಾ ಭೂಪತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ * ದೇವೇಶ ಸೂರಗುಪ್ಪ