Advertisement

Desi Swara: ಊರು ಟೂರು ಅಂಕಣಗಳು ಈಗ ಪುಸ್ತಕವಾಗಿ ಪ್ರಕಟಣೆ

12:46 PM Jun 22, 2024 | Team Udayavani |

ಉದಯವಾಣಿಯ ಎನ್‌ಆರ್‌ಐ ಸಂಚಿಕೆ ದೇಸಿಸ್ವರಕ್ಕೆ ಹದಿನೈದು ದಿನಕೊಮ್ಮೆ ಅಂಕಣಗಳನ್ನು ಬರೆಯುತ್ತೀರಾ ಎಂದು ಕೇಳಿದಾಗ ನಾನು ಹಿಂಜರಿಕೆಯಲ್ಲಿಯೇ ಒಪ್ಪಿಕೊಂಡಿದ್ದೆ. ನಾನು ನೋಡಿದ ಪ್ರವಾಸಿ ತಾಣಗಳ ಬಗ್ಗೆ ಬರೆಯಬೇಕು ಎಂಬ ಇರಾದೆ ಇತ್ತಾದರೂ ಅದು ಕಾರ್ಯರೂಪಕ್ಕೆ ಅಲ್ಲಿಯವರೆಗೂ ಬಂದಿರಲಿಲ್ಲ. ಅಂಕಣ ಬರೆಯುವುದು ನಿಯಮಬದ್ಧವಾದ ಕೆಲಸ. ಒಂದು ಅಂಕಣ ಬರೆದ ಕೂಡಲೇ ಮುಂದಿನದ್ದರ ಬಗ್ಗೆ ಯೋಚನೆ ಶುರುವಾಗಬೇಕು. ಹೀಗೆ ಶುರುವಾದ “ಊರು ಟೂರು’ ಅಂಕಣಗಳು ಒಂದರ ಅನಂತರ ಮತ್ತೂಂದರಂತೆ ಬಂದು ಒಟ್ಟು 35 ಅಂಕಣಗಳಾದವು. ನಾನು ಕಂಡಿದ್ದೆಲ್ಲವನ್ನು ದಾಖಲಿಸುತ್ತ ಹೋದೆ.

Advertisement

ನೋಡಿದ ಸ್ಥಳಗಳು ಇನ್ನೂ ಪಟ್ಟಿಯಲ್ಲಿ ಇವೆಯಾದರೂ ಸದ್ಯಕ್ಕೆ ಇಷ್ಟು ಸಾಕೆನ್ನಿಸಿತು. ಈಗ ಈ ಎಲ್ಲ ಅಂಕಣಗಳು ಜತೆಗೆ ಇಲ್ಲಿ ಬಂದಿರದ ಒಂದಿಷ್ಟು ವೈಯಕ್ತಿಕ ಅನುಭವಗಳನ್ನ ಸೇರಿಸಿ ಪುಸ್ತಕದಲ್ಲಿ ಬಂದಿವೆ.

ಊರು ಟೂರು – Journey Beyond The Borders. ಊರು ಬಿಟ್ಟು ಹಾರಿ ಬಂದಿರುವ ನಾನು ಅಮೆರಿಕದಲ್ಲಿ ಗುಬ್ಬಚ್ಚಿಯಂತೆ ಅಲೆಯುತ್ತಿರುತ್ತೇನೆ. ಇದು ನನಗೆ ಸಂತೃಪ್ತಿ ನೀಡುವ ಕಾಯಕ. ಪ್ರವಾಸದಿಂದ ಮರಳಿ ಬಂದು ದಣಿವೆಂದು ಕಾಲು ಚಾಚಿ ಮಲಗುವಾಗಿನ ಸುಖ ಬೇರೊಂದಿಲ್ಲ ಎಂದು ನನಗನ್ನಿಸುತ್ತದೆ. ಬಾಲ್ಯ, ಓದು, ಸೈನ್ಸ್‌ ಎಂಜಿನಿಯರಿಂಗ್‌ ಪದವಿ, ಜವಾಬ್ದಾರಿ ಎಂದು ಕಳೆದು ಹೋಗಿದ್ದ ನನಗೆ ಕೆಲಸದ ಮೂಲಕ ಬೇರೆ ದೇಶಕ್ಕೆ ಹೋಗುವ ಅವಕಾಶ ಸಿಕ್ಕಿದ್ದು ಸುಕೃತವೇ. ಇಲ್ಲದೇ ಇದ್ದಿದ್ದರೆ ಈ ತಿರುಗಾಟದ ಆಸಕ್ತಿ ನನ್ನೊಳಗೆ ಬೆಳೆಯುತ್ತಿತ್ತೋ ಇಲ್ಲವೋ ಗೊತ್ತಿಲ್ಲ.

ಮನೆಯವರನ್ನು, ಅಮ್ಮನನ್ನು ಬಿಟ್ಟು ದೂರದೇಶಕ್ಕೆ ಬಂದಾಗ ಹುಟ್ಟುವ ಅನಾಥ ಭಾವವನ್ನು, ಒಂಟಿತನವನ್ನು ಕಳೆಯಲು ಸಹಾಯ ಮಾಡಿದ್ದು ಈ ತಿರುಗಾಟ. ಈ ತಿರುಗಾಟದಲ್ಲಿ ನಾನು ಹಲವು ವಿಸ್ಮಯಗಳನ್ನು ಕಂಡಿದ್ದೇನೆ. ಅಮೆರಿಕದಲ್ಲಿರುವ ಒಟ್ಟು 63 ರಾಷ್ಟ್ರೀಯ ಉದ್ಯಾನವನಗಳಲ್ಲಿ ಹನ್ನೊಂದನ್ನು ನೋಡಿದ್ದೇನೆ. ಮಧ್ಯರಾತ್ರಿಯಲ್ಲಿ ನಾದರ್ನ್ ಲೈಟ್ಸ್‌ ಆಕಾಶದಲ್ಲಿ ಹೊಳೆಯುವುದನ್ನು ಕಂಡಿದ್ದೇನೆ. ಎರಡು ಸಾವಿರ ವರ್ಷಗಳಿಗಿಂತಲೂ ಹಳೆಯದಾದ ಮರವನ್ನು ನೋಡಿ ಬೆರಗಾಗಿದ್ದೇನೆ. ಬಣ್ಣವಿಲ್ಲದ ನದಿಯ ನೀರು ಹಸುರಾಗುವುದಕ್ಕೆ ಸಾಕ್ಷಿಯಾಗಿದ್ದೇನೆ. 18,000 ಎಕ್ರೆಗಳಷ್ಟು ದೊಡ್ಡದಾದ ಕಾಡು ಬೆಂಕಿಯಲ್ಲಿ ಸುಟ್ಟು ಹೋಗಿರುವುದನ್ನೂ, ಅಳಿದುಳಿದ ಮರಗಳ ತುದಿಯಲ್ಲಿ ಮತ್ತೆ ಚಿಗುರು ಹುಟ್ಟಿರುವುದನ್ನೂ ನೋಡಿ ಸ್ಫೂರ್ತಿಗೊಂಡಿದ್ದೇನೆ. ಅನ್ಯ ನೆಲದಲ್ಲಿ ನಮ್ಮ ದೇವರನ್ನು, ದೇವಸ್ಥಾನವನ್ನು ಕಂಡು ಭಾವಪರವಶಳಾಗಿದ್ದೇನೆ. ಭೂಮಿಯ ಆಳದಲ್ಲಿರುವ ಕಣಿವೆಯೊಳಗೆ ಸುತ್ತಾಡಿದ್ದೇನೆ.

Advertisement

ಹೆಲಿಕಾಪ್ಟ್ ರ್‌ ನಲ್ಲಿ ಕೂತು ನಗರದ ಥಳುಕನ್ನು ಕಣ್ಣು ತುಂಬಿಸಿಕೊಂಡಿದ್ದೇನೆ. ಚಳಿಯಲ್ಲಿ ಹಿಮಗಟ್ಟಿದ ಕೆರೆಯ ಮೇಲೆ ಓಡಾಡಿದ್ದೇನೆ. ಕಾಡಿನಲ್ಲಿ ದಿಕ್ಕೆಟ್ಟು ಕಂಗೆಟ್ಟಿದ್ದಾಗ ಕಣ್ಣಿಗೆ ಬಿದ್ದ ಬೆಳಕನ್ನು ನೋಡಿ ಧನ್ಯಳಾಗಿದ್ದೇನೆ. ಈ ಎಲ್ಲವೂ ನನ್ನ ಪಾಲಿನ ಅದ್ಭುತಗಳು. ಇವೆಲ್ಲವನ್ನು ದಾಖಲಿಸುವ ಸಣ್ಣ ಪ್ರಯತ್ನವೇ ಈ “ಊರುಟೂರು’ ಸಂಗ್ರಹ. ನಾನು ಕಂಡಿದ್ದನ್ನು ಅಕ್ಷರಗಳಲ್ಲಿ ಸೆರೆಹಿಡಿದು ಆ ವಿಸ್ಮಯವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಸದ್ಯಕ್ಕೆ ಎರಡು ದೊಡ್ಡ ಸಮುದ್ರಗಳನ್ನು ಹಾರಿರುವ ಈ ಗುಬ್ಬಚ್ಚಿಯ ಹಾರಾಟ ರೆಕ್ಕೆಗಳಲ್ಲಿ ಶಕ್ತಿಯಿರುವವರೆಗೂ ಅನವರತವಾಗಿರುತ್ತದೆ.

ಈ ಪುಸ್ತಕ ಹರಿವು ಪ್ರಕಾಶನದಿಂದ ಹೊರಬಂದಿದ್ದು ಈಗ ಪುಸ್ತಕ ಮಳಿಗೆಗಳಲ್ಲಿ ಮತ್ತು ಆನ್‌ಲೈನ್‌ ಮೂಲಕ ಕೊಳ್ಳಬಹುದಾಗಿದೆ. ಈ ಅಂಕಣಗಳನ್ನು ನಿಯಮಿತವಾಗಿ ಪ್ರಕಟಿಸಿದ ಉದಯವಾಣಿ ತಂಡಕ್ಕೆ ಆಭಾರಿ.

ಸಂಜೋತಾ ಪುರೋಹಿತ್‌, ಸ್ಯಾನ್‌ಫ್ರಾನ್ಸಿಸ್ಕೋ

Advertisement

Udayavani is now on Telegram. Click here to join our channel and stay updated with the latest news.

Next