Advertisement

ಆಲೂಗಡ್ಡೆ ಸಾರಿನ ಊಟಕ್ಕಾಗಿ ಓದಿದೆ!

11:40 AM Dec 12, 2017 | |

ಅನಕ್ಷರಸ್ಥರೇ ಹೆಚ್ಚಾಗಿದ್ದ ನಮ್ಮ ಊರಿನಲ್ಲಿ, ಕಾಗದ ಓದಿದರೆ, ಲೆಕ್ಕಪತ್ರಗಳನ್ನು ನೋಡಿಕೊಟ್ಟರೆ ಅದಕ್ಕೆ ಪ್ರತಿಯಾಗಿ ಅನ್ನ- ಆಲೂಗಡ್ಡೆ ಸಾರಿನ ಊಟ ಸಿಗುತ್ತಿತ್ತು. ನೌಕರಿ ಪಡೆಯುವ ಆಸೆಯಿಂದಲ್ಲ, ನೆರೆಹೊರೆಯ ಮನೆಯಲ್ಲಿ ಊಟ ಸಂಪಾದಿಸಬಹುದು ಎಂಬ ಆಸೆಯಿಂದಲೇ ನಾನು ಓದಲು, ಚೆನ್ನಾಗಿ ಲೆಕ್ಕ ಬಿಡಿಸಲು ಕಲಿತೆ…

Advertisement

ದಶಕಗಳ ಹಿಂದಿನ ಮಾತು. ಆಗ ನಮ್ಮ ಓಣಿಯಲ್ಲಿ ಎಲ್ಲಾ ಮಕ್ಕಳು ಈಗಿನ ಹಾಗೆ ಪ್ರತಿನಿತ್ಯ ಶಾಲೆಗೆ ಹೋಗುತ್ತಿದ್ದರು. ಆ ದಿನಗಳಲ್ಲಿ ವಿದ್ಯುದ್ದೀಪದ ಸೌಲಭ್ಯವಿದ್ದುದು ಶ್ರೀಮಂತರ ಮನೆಗಳಲ್ಲಿ ಮಾತ್ರ. ಶಾಲೆಯಿಂದ ಬಂದ ಮಕ್ಕಳು ಸಾಯಂಕಾಲದ ನಂತರ ಬೀದಿ ದೀಪದ ಬೆಳಕಿನಲ್ಲಿ ಓದು ಬರಹ ಮಾಡುತ್ತಿದ್ದರು. ಅದರಲ್ಲಿ ಕೆಲವರು ಇಪ್ಪತ್ತರವರೆಗಿನ ಮಗ್ಗಿಯನ್ನು ಎಲ್ಲಿಯೂ ತಪ್ಪದೇ ಹೇಳುತ್ತಿದ್ದರು. ಓದಿನಲ್ಲಿ ಮುಂದಿದ್ದ ಗೆಳೆಯರಿಗೆ ಓಣಿಯ ಜನರಿಂದ ಅವರು ಆ ದಿನ ಸಂಪಾದಿಸಿದ ಕೂಲಿ ಹಣದ ಲೆಕ್ಕ ಮಾಡುವ “ಆಫ‌ರ್‌’ ಸಿಗುತ್ತಿತ್ತು. ಸರಿಯಾಗಿ ಲೆಕ್ಕ ಮಾಡಿದವನಿಗೆ ಎರಡು ರೂಪಾಯಿಯೋ, ಮೂರು ರೂಪಾಯಿಯೋ ಪುರಸ್ಕಾರವೂ ಸಿಗುತ್ತಿತ್ತು. 

ಆವಾಗಲೇ ನಮ್ಮಪ್ಪನ ಮನದಲ್ಲಿ ಸಣ್ಣದಾದ ಆಶೆ ಮೊಳಕೆಯೊಡೆಯಿತು. ನನ್ನ ಮಗನನ್ನು ಶಾಲೆಗೆ ಕಳುಹಿಸಬೇಕು, ಓಣಿಯ ಜಾಣ ಹುಡುಗರ ಹಾಗೆ ಇವನೂ ಲೆಕ್ಕ, ಪತ್ರ ಓದಿ “ಭೇಷ್‌’ ಅನ್ನಿಸಿಕೊಳ್ಳಬೇಕು ಎಂದು ಯೋಚಿಸಿ, ಅದನ್ನೇ ನನಗೂ ಐದಾರು ಬಾರಿ ಹೇಳಿ ಶಾಲೆಗೆ ಕಳುಹಿಸಿದರು. ಸ್ವಲ್ಪ ಸಮಯದಲ್ಲೇ ಓಣಿಯ ಜಾಣ ಹುಡುಗರಂತೆ ನಾನೂ ಒಂದರಿಂದ ಇಪ್ಪತ್ತರವರೆಗೆ ಮಗ್ಗಿಯನ್ನು ಕಲಿತುಕೊಂಡೆ, ಲೆಕ್ಕ ಪತ್ರ ಬಿಡಿಸುವುದನ್ನೂ ಅಭ್ಯಾಸ ಮಾಡಿಕೊಂಡೆ. ಇದೇ ಕಾರಣದಿಂದ ನಮ್ಮ ಬೀದಿಯಲ್ಲಿ ನನಗೆ ಬೇಡಿಕೆ ಹೆಚ್ಚಾಯಿತು. ಪತ್ರ ಓದಲು ನನ್ನನ್ನೇ ಕರೆಯುತ್ತಿದ್ದರು, ಲೆಕ್ಕ ಬಿಡಿಸಲೂ ನನ್ನನ್ನೇ ಕರೆಯುತ್ತಿದ್ದರು… ಇದಕ್ಕೆ ಪ್ರತಿಯಾಗಿ ಆ ಮನೆಯವರು ನನಗೆ ಸಿಹಿ ತಿನಿಸುಗಳನ್ನು ಕೊಡುತ್ತಿದ್ದರು, ರಾತ್ರಿಯಾಗಿದ್ದರೆ ಅನ್ನ- ಆಲೂಗಡ್ಡೆ ಸಾರಿನ ಊಟ ಮಾಡಿಸಿ ಕಳಿಸುತ್ತಿದ್ದರು. 

ಒಟ್ಟಿನಲ್ಲಿ, ಚಿಕ್ಕವಯಸ್ಸಿಗೇ ನನಗೆ ಗುಮಾಸ್ತನ ಕೆಲಸ ಸಿಕ್ಕಿತ್ತು ಎನ್ನಬಹುದು. ನನಗೂ ನೆರೆಹೊರೆಯ ಮನೆಗಳ ಜನ ಹೇಳುವ ಲೆಕ್ಕವನ್ನು ಮಾಡಲು ಖುಷಿ ಅನಿಸುತ್ತಿತ್ತು. ಅಲ್ಲದೆ ನಮ್ಮ ಮನೆಯಲ್ಲಿ ಬಡತನವಿದ್ದಿದ್ದರಿಂದ ಕೆಲಸ ಮಾಡಿಸಿಕೊಂಡವರು ನೀಡುತ್ತಿದ್ದ ಪುರಸ್ಕಾರಗಳಿಂದ ನನಗೆ ಸಹಾಯವಾಗುತ್ತಿತ್ತು. ಕೆಲವರು ರೆನಾಲ್ಡ್‌ ಪೆನ್ನು ತೆಗೆದುಕೊಳ್ಳಲು ನಾಲ್ಕಾರು ರೂಪಾಯಿ ಕೊಡುತ್ತಿದ್ದರು. ನನಗೆ ಅದುವೇ ಲಕ್ಷ ರೂಪಾಯಿ ಹಣಕ್ಕೆ ಸಮನಾಗಿತ್ತು. ಓದಿದರೆ ನೌಕರಿ ಸಿಗುತ್ತೆ ಅಂತಲೋ, ಭವಿಷ್ಯ ಚೆನ್ನಾಗಿರುತ್ತೆ ಅಂತಲೋ ಯಾವತ್ತೂ ಓದಿದವನಲ್ಲ ನಾನು. ಓದಿದರೆ ಪಕ್ಕದ ಮನೆಯವರೂ ಅನ್ನ- ಆಲೂ ಸಾರು ಹಾಕುತ್ತಾರೆ, ತಿಂಡಿ ತಿನಿಸು ಕೊಡುತ್ತಾರೆ ಅನ್ನೋ ಆಮಿಷದಿಂದಲೇ ಓದಿದವನು ನಾನು. ಅದಕ್ಕೆ ತಕ್ಕನಾಗಿ ಉತ್ತಮ ಅಂಕಗಳು ಸಿಗತೊಡಗಿದವು. ಹೆಚ್ಚಿನ ಪರಿಶ್ರಮವಿಲ್ಲದೆಯೇ ನನ್ನ ಮಗ ಶಾಲಾ ಶಿಕ್ಷಕನಾಗಬೇಕು ಎಂದು ಕನಸು ಕಂಡಿದ್ದ ಅಪ್ಪನ ಆಸೆ ನನಗರಿವಿಲ್ಲದಂತೆಯೇ ಕೈಗೂಡಿತ್ತು. ಈಗ, ಮನೆಯಲ್ಲಿ ಆಲೂಗಡ್ಡೆ ಸಾರು ಉಣ್ಣುವಾಗ ಈಗಲೂ ಬಾಲ್ಯದ ಕಷªದ ದಿನಗಳು ಕಣ್ಮುಂದೆ ಬರುತ್ತವೆ.

ಮಲ್ಲಪ್ಪ ಫ‌. ಕರೇಣ್ಣನವರ, ಬ್ಯಾಡಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next