Advertisement
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆರ್‌ಸಿಬಿ 5 ವಿಕೆಟಿಗೆ 171 ರನ್ ಪೇರಿಸಿದರೆ, ಡೆಲ್ಲಿ 6 ವಿಕೆಟ್‌ಗಳನ್ನು ಕೈಯಲ್ಲಿರಿಸಿಕೊಂಡೂ 170ರ ತನಕ ಬಂದು ಎಡವಿತು. ಇದು 6 ಪಂದ್ಯದಲ್ಲಿ ಕೊಹ್ಲಿ ಪಡೆಗೆ ಒಲಿದ 5ನೇ ಗೆಲುವು.
ಕೊನೆಯ 5 ಓವರ್‌ಗಳಲ್ಲಿ 30 ರನ್ ಅಗತ್ಯವಿದ್ದಾಗ ಹೆಟ್‌ಮೈರ್ ಸಿಡಿದು ನಿಂತರು. ಜಾಮೀಸನ್ ಪಾಲಾದ 18ನೇ ಓವರ್‌ನಲ್ಲಿ 21 ರನ್ ಸೋರಿ ಹೋಯಿತು. ಮೊಹಮ್ಮದ್ ಸಿರಾಜ್ ಪಾಲಾದ ಅಂತಿಮ ಓವರ್‌ನಲ್ಲಿ 14 ರನ್, ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಬೇಕಾದ ಒತ್ತಡ ಎದುರಾಯಿತು. ಆದರೆ ಅದೃಷ್ಟ ಆರ್‌ಸಿಬಿ ಪಾಲಿಗಿತ್ತು. ಪಂತ್ ಕೊನೆಯ 2 ಎಸೆತಗಳನ್ನು ಸತತವಾಗಿ ಬೌಂಡರಿಗೆ ಬಡಿದಟ್ಟಿದರೂ ಗೆಲುವು ಕೆಲವೇ ಇಂಚುಗಳಿಂದ ದೂರವೇ ಉಳಿಯಿತು. ಪಂತ್ 58 ರನ್ (48 ಎಸೆತ, 6 ಬೌಂಡರಿ) ಮತ್ತು ಹೆಟ್‌ಮೈರ್ 53 ರನ್ (25 ಎಸೆತ, 4 ಸಿಕ್ಸರ್, 2 ಬೌಂಡರಿ) ಬಾರಿಸಿ ಅಜೇಯರಾಗಿ ಉಳಿದರು.
Related Articles
ಪವರ್ ಪ್ಲೇ ಹಾಗೂ ಮಿಡ್ಲ್ ಓವರ್‌ಗಳಲ್ಲಿ ಡೆಲ್ಲಿಯ ನಿಖರವಾದ ದಾಳಿಗೆ ಪರದಾಡಿದ ಆರ್‌ಸಿಬಿ ನೂರೈವತ್ತರ ಗಡಿ ದಾಟುವುದೇ ಅನುಮಾನವಿತ್ತು. ಆದರೆ ಕೊನೆಯ 5 ಓವರ್‌ಗಳಲ್ಲಿ ಎಬಿಡಿ ಬಿರುಸಿನ ಬ್ಯಾಟಿಂಗ್ ನಡೆಸಿ ಆರ್‌ಸಿಬಿಯನ್ನು ಹೋರಾಟಕ್ಕೆ ಅಣಿಗೊಳಿಸಿದರು. ಈ ಅವಧಿಯಲ್ಲಿ 56 ರನ್ ಹರಿದು ಬಂತು. ಇದರಲ್ಲಿ “ಮಿಸ್ಟರ್ 360′ ಬ್ಯಾಟಿನಿಂದ ಸಿಡಿದದ್ದು 47 ರನ್.
ಎಬಿಡಿ 42 ಎಸೆತಗಳಿಂದ ತಮ್ಮ ಇನ್ನಿಂಗ್ಸ್ ಕಟ್ಟಿದರು. ಈ ಆಕರ್ಷಣೀಯ ಬ್ಯಾಟಿಂಗ್‌ನಲ್ಲಿ 5 ಪ್ರಚಂಡ ಸಿಕ್ಸರ್ ಹಾಗೂ 3 ಬೌಂಡರಿ ಒಳಗೊಂಡಿತ್ತು. ಇದರಲ್ಲಿ 3 ಸಿಕ್ಸರ್ ಸ್ಟೋಯಿನಿಸ್ ಪಾಲಾದ ಅಂತಿಮ ಓವರ್‌ನಲ್ಲಿ ಬಂದಿತ್ತು.
Advertisement
ಓಪನಿಂಗ್ ವೈಫಲ್ಯಆರ್ಸಿಬಿ ಆರಂಭಿಕರಾದ ಪಡಿಕ್ಕಲ್ ಮತ್ತು ಕೊಹ್ಲಿ ಬಿರುಸಿನಿಂದಲೇ ಬ್ಯಾಟ್ ಬೀಸತೊಡಗಿದ್ದರು. ಮೊದಲ 3 ಓವರ್‌ಗಳಲ್ಲಿ 25 ರನ್ ಪೇರಿಸಿ ಮುನ್ನುಗ್ಗುವ ಸೂಚನೆ ರವಾನಿಸಿದರು. ಆದರೆ ಇಬ್ಬರೂ ಸತತ ಎಸೆತಗಳಲ್ಲಿ ಔಟಾದುದು ಆರ್‌ಸಿಬಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿತು. ಆವೇಶ್ ಖಾನ್ ತಮ್ಮ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಕ್ಯಾಪ್ಟನ್ ಕೊಹ್ಲಿ (12) ವಿಕೆಟ್ ಕಿತ್ತು ಡೆಲ್ಲಿಗೆ ಮೊದಲ ಯಶಸ್ಸು ತಂದಿತ್ತರು. ಬಳಿಕ ಇಶಾಂತ್ ಶರ್ಮ ನೂತನ ಓವರ್‌ನ ಮೊದಲ ಎಸೆತದಲ್ಲಿ ಪಡಿಕ್ಕಲ್ ಅವರನ್ನು ಬೌಲ್ಡ್ ಮಾಡಿದರು (17). ಇಶಾಂತ್ ಪಾಲಿಗೆ ಇದು “ವಿಕೆಟ್-ಮೇಡನ್’ ಆಗಿತ್ತು. ಆಗ ಬೆಂಗಳೂರು ಸ್ಕೋರ್‌ಬೋರ್ಡ್ ಕೇವಲ 30 ರನ್ ತೋರಿಸುತ್ತಿತ್ತು.
ಗ್ಲೆನ್ ಮ್ಯಾಕ್ಸ್‌ವೆಲ್ ಸ್ಪಿನ್ನರ್‌ಗಳ ವಿರುದ್ಧ ಭರ್ಜರಿಯಾಗಿ ಬ್ಯಾಟ್ ಬೀಸತೊಡಗಿದರು. ಮಿಶ್ರಾ ಮತ್ತು ಪಟೇಲ್ ಎಸೆತಗಳನ್ನು ಸ್ಟಾಂಡ್ ಗೆ ಬಡಿದಟ್ಟಿ ಐಪಿಎಲ್‌ನಲ್ಲಿ 100ನೇ ಸಿಕ್ಸರ್ ಸಂಭ್ರಮ ಆಚರಿಸಿದರು. ಆದರೆ ಮಿಶ್ರಾ ಸೇಡು ತೀರಿಸಿಕೊಳ್ಳಲು ವಿಳಂಬಿಸಲಿಲ್ಲ. ಲಾಂಗ್ ಆನ್‌ನಲ್ಲಿದ್ದ ಸ್ಮಿತ್ ಕೈಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದರು. “ಮ್ಯಾಕ್ಸಿ’ ಕೊಡುಗೆ 20 ಎಸೆತಗಳಿಂದ 25 ರನ್ (ಒಂದು ಫೋರ್, 2 ಸಿಕ್ಸರ್). ಅರ್ಧ ಆಟ ಮುಕ್ತಾಯವಾದಾಗ ಆರ್‌ಸಿಬಿ 3ಕ್ಕೆ 68 ರನ್ ಮಾಡಿತ್ತು.
ಇನ್ನೊಂದು ಬದಿಯಲ್ಲಿ ಬೇರೂರಿ ನಿಂತಿದ್ದ ಪಾಟೀದಾರ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಕೆಲವು ಆಕರ್ಷಕ ಹೊಡೆತಗಳ ಮೂಲಕ ರಂಜಿಸತೊಡಗಿದರು. 2 ಸಿಕ್ಸರ್ ಎತ್ತಿದ ಅವರು 22 ಎಸೆತಗಳಿಂದ 31 ರನ್ ಮಾಡಿ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಅಲ್ಲಿಗೆ ಡೆತ್ ಓವರ್ ಮೊದಲ್ಗೊಂಡಿತು. ಎಬಿಡಿ ಕ್ರೀಸ್‌ನಲ್ಲಿದ್ದುದರಿಂದ ಆರ್‌ಸಿಬಿ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಆದರೆ ಅವರಿಗೆ ಇನ್ನೊಂದು ತುದಿಯಲ್ಲಿ ಸೂಕ್ತ ಬೆಂಬಲ ಸಿಗಲಿಲ್ಲ. ರಬಾಡ ರಿಟರ್ನ್ ಕ್ಯಾಚ್ ಮೂಲಕ ವಾಷಿಂಗ್ಟನ್ ಸುಂದರ್ (6) ವಿಕೆಟ್ ಉರುಳಿಸಿದರು. ಅಶ್ವಿನ್ ಬದಲು ಇಶಾಂತ್
ಡೆಲ್ಲಿ ತಂಡದಲ್ಲಿ ಒಂದು ಬದಲಾವಣೆ ಸಂಭವಿಸಿತು. ಕೊರೊನಾ ಕಾರಣವನ್ನು ಮುಂದೊಡ್ಡಿ ಐಪಿಎಲ್ ಬಿಟ್ಟುಹೋದ ಆರ್. ಅಶ್ವಿನ್ ಬದಲು ಇಶಾಂತ್ ಶರ್ಮ ಆಡಲಿಳಿದರು. ಆರ್‌ಸಿಬಿ ಆಡುವ ಬಳಗದಲ್ಲಿ ಎರಡು ಪರಿವರ್ತನೆ ಮಾಡಲಾಯಿತು. ನವದೀಪ್ ಸೈನಿ ಮತ್ತು ಡೇನಿಯಲ್ ಕ್ರಿಸ್ಟಿಯನ್ ಸ್ಥಾನಕ್ಕೆ ರಜತ್ ಪಾಟೀದಾರ್ ಹಾಗೂ ಡೇನಿಯಲ್ ಸ್ಯಾಮ್ಸ್ ಬಂದರು. ಸ್ಕೋರ್ ಪಟ್ಟಿ
ರಾಯಲ್ ಚಾಲೆಂಜರ್ ಬೆಂಗಳೂರು
ವಿರಾಟ್ ಕೊಹ್ಲಿ ಬಿ ಆವೇಶ್ 12
ದೇವದತ್ತ ಪಡಿಕ್ಕಲ್ ಬಿ ಇಶಾಂತ್ 17
ರಜತ್ ಪಾಟೀದಾರ್ ಸಿ ಸ್ಮಿತ್ ಬಿ ಅಕ್ಷರ್ 31
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಸ್ಮಿತ್ ಬಿ ಮಿಶ್ರಾ 25
ಎಬಿ ಡಿ ವಿಲಿಯರ್ ಔಟಾಗದೆ 75
ವಾಷಿಂಗ್ಟನ್ ಸುಂದರ್ ಸಿ ಮತ್ತು ಬಿ ರಬಾಡ 6
ಡೇನಿಯಲ್ ಸ್ಯಾಮ್ಸ್ ಔಟಾಗದೆ 3
ಇತರ 2
ಒಟ್ಟು(5 ವಿಕೆಟಿಗೆ) 171
ವಿಕೆಟ್ ಪತನ:1-30, 2-30, 3-60, 4-114, 5-139.
ಬೌಲಿಂಗ್; ಇಶಾಂತ್ ಶರ್ಮ 4-1-26-1
ಕಾಗಿಸೊ ರಬಾಡ 4-0-38-1
ಆವೇಶ್ ಖಾನ್ 4-0-24-1
ಅಮಿತ್ ಮಿಶ್ರಾ 3-0-27-1
ಅಕ್ಷರ್ ಪಟೇಲ್ 4-0-33-1
ಮಾರ್ಕಸ್ ಸ್ಟೋಯಿನಿಸ್ 1-0-23-0 ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಸಿ ಎಬಿಡಿ ಬಿ ಹರ್ಷಲ್ 21
ಶಿಖರ್ ಧವನ್ ಸಿ ಚಹಲ್ ಬಿ ಜಾಮೀಸನ್ 6
ಸ್ಟಿವನ್ ಸ್ಮಿತ್ ಸಿ ಎಬಿಡಿ ಬಿ ಸಿರಾಜ್ 4
ರಿಷಭ್ ಪಂತ್ ಔಟಾಗದೆ 58
ಸ್ಟೋಯಿನಿಸ್ ಸಿ ಎಬಿಡಿ ಬಿ ಹರ್ಷಲ್ 22
ಹೆಟ್‌ಮೈರ್ ಔಟಾಗದೆ 53
ಇತರ 6
ಒಟ್ಟು(4 ವಿಕೆಟಿಗೆ) 170
ವಿಕೆಟ್ ಪತನ: 1-23, 2-28, 3-47, 4-92.
ಬೌಲಿಂಗ್; ಡ್ಯಾನಿಯಲ್ ಸ್ಯಾಮ್ಸ್ 2-0-15-0
ಮೊಹಮ್ಮದ್ ಸಿರಾಜ್ 4-0-44-1
ಕೈಲ್ ಜಾಮೀಸನ್ 4-0-32-1
ವಾಷಿಂಗ್ಟನ್ ಸುಂದರ್ 4-0-28-0
ಹರ್ಷಲ್ ಪಟೇಲ್ 4-0-37-2
ಯಜುವೇಂದ್ರ ಚಹಲ್ 2-0-10-0