Advertisement

ಶಹಬಾಜ್ ಬೌಲಿಂಗ್ ಕಮಾಲ್ : ಹೈದರಾಬಾದ್‌ ವಿರುದ್ಧ RCB ಗೆ 6 ರನ್‌ಗಳ ಗೆಲುವು

12:10 AM Apr 15, 2021 | Team Udayavani |

ಚೆನ್ನೈ: ಸನ್‌ರೈಸರ್ ಹೈದರಾಬಾದ್‌ ಎದುರಿನ ಸಣ್ಣ ಮೊತ್ತದ ಹೋರಾಟದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಆರು ರನ್ನುಗಳ ರೋಚಕ ಗೆಲುವು ದಾಖಲಿಸಿದೆ. ಕೂಟದ ಮೊದಲೆರಡೂ ಪಂದ್ಯಗಳನ್ನು ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನೊಂದೆಡೆ ಹೈದರಾಬಾದ್‌ ಎರಡೂ ಪಂದ್ಯಗಳಲ್ಲಿ ಎಡವಿತು.

Advertisement

ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಹೋರಾಟಭರಿತ ಅರ್ಧ ಶತಕದಿಂದಾಗಿ ಆರ್‌ಸಿಬಿ 8 ವಿಕೆಟಿಗೆ 149 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿತು. ಡೇವಿಡ್‌ ವಾರ್ನರ್‌ (54)-ಮನೀಷ್‌ ಪಾಂಡೆ (38) ಮುನ್ನುಗ್ಗಿ ಬರುತ್ತಿದ್ದಾಗ ಹೈದರಾಬಾದ್‌ ದೊಡ್ಡ ಅಂತರದ ಗೆಲುವು ಸಾಧಿಸುತ್ತದೆಂಬ ನಿರೀಕ್ಷೆ ಬಲವಾಗಿತ್ತು. ಆದರೆ ಆರ್‌ಸಿಬಿಯ ನಿಖರ ಬೌಲಿಂಗ್‌ ಹಾಗೂ ಅಷ್ಟೇ ಚುರುಕಿನ ಫೀಲ್ಡಿಂಗ್‌ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಅಂತಿಮವಾಗಿ ವಾರ್ನರ್‌ ಪಡೆ 9 ವಿಕೆಟಿಗೆ 143 ರನ್‌ ಗಳಿಸಿ ಸೋಲನ್ನು ಸ್ವೀಕರಿಸಿತು.

ಶಾಬಾಜ್‌ ಅಹ್ಮದ್‌ 7 ರನ್ನಿಗೆ 3 ವಿಕೆಟ್‌ ಉಡಾಯಿಸಿ ಆರ್‌ಸಿಬಿ ಬೌಲಿಂಗ್‌ ಹೀರೋ ಎನಿಸಿದರು. 17ನೇ ಓವರ್‌ ಎಸೆದ ಅವರು ಕೇವಲ 1 ರನ್‌ ನೀಡಿ ಮೂರು ವಿಕೆಟ್‌ ಕಿತ್ತು ಪಂದ್ಯ ತಿರುವು ಪಡೆಯಲು ಕಾರಣರಾದರು. ಈ ಸಾಹಸದಿಂದಾಗಿ ಒಂದು ವಿಕೆಟಿಗೆ 96 ರನ್‌ ಮಾಡಿ ಗೆಲುವಿನ ಹಾದಿಯಲ್ಲಿದ್ದ ಸನ್‌ರೈಸರ್ ನಾಟಕೀಯ ಕುಸಿತಕ್ಕೆ ಸಿಲುಕಿತು. ಹರ್ಷಲ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌ ತಲಾ 2 ವಿಕೆಟ್‌ ಕಿತ್ತು ಹೈದರಾಬಾದ್‌ಗೆ ನಿಯಂತ್ರಣ ಹೇರಿದರು.

ಮ್ಯಾಕ್ಸ್‌ವೆಲ್‌ ಅರ್ಧ ಶತಕ
ಆರ್‌ಸಿಬಿ ಪರ ಅಂತಿಮ ಎಸೆತದಲ್ಲಿ ಔಟಾದ ಮ್ಯಾಕ್ಸ್‌ ವೆಲ್‌ 41 ಎಸೆತ ಎದುರಿಸಿ 59 ರನ್‌ ಹೊಡೆದರು. ಇದು 5 ಫೋರ್‌, 3 ಸಿಕ್ಸರ್‌ಗಳನ್ನು ಒಳಗೊಂಡಿತ್ತು.

ಮೊದಲ ಪಂದ್ಯವನ್ನು ತಪ್ಪಿಕೊಂಡಿದ್ದ ಎಡಗೈ ಓಪನರ್‌ ದೇವದತ್ತ ಪಡಿಕ್ಕಲ್‌ ಆಡುವ ಬಳಗದಲ್ಲಿ ಕಾಣಿಸಿಕೊಂಡದ್ದು ಆರ್‌ಸಿಬಿ ಅಭಿಮಾನಿಗಳಿಗೆ ಖುಷಿ ಕೊಟ್ಟಿತಾದರೂ ಅವರ ಶೀಘ್ರ ನಿರ್ಗಮನ ಅಷ್ಟೇ ನಿರಾಸೆ ಮೂಡಿಸಿತು (11).
ವನ್‌ಡೌನ್‌ನಲ್ಲಿ ಬಂದ ಮತ್ತೋರ್ವ ಎಡಗೈ ಆಟಗಾರ ಶಾಬಾಜ್‌ ಅಹ್ಮದ್‌ ಈ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲಿಲ್ಲ. ನದೀಂ ಎಸೆತವೊಂದನ್ನು ಸಿಕ್ಸರ್‌ಗೆ ಬಡಿದಟ್ಟಿದರೂ ಬಳಿಕ ನದೀಂ ಎಸೆತದಲ್ಲೇ ವಿಕೆಟ್‌ ಕೈಚೆಲ್ಲಿದರು. ಪವರ್‌ ಪ್ಲೇ ಮುಗಿದ ಬಳಿಕ ಮೊದಲ ಎಸೆತದಲ್ಲೇ ಹೈದರಾಬಾದ್‌ ಈ ಯಶಸ್ಸು ಸಾಧಿಸಿತು. ಪವರ್‌ ಪ್ಲೇಯಲ್ಲಿ ಆರ್‌ಸಿಬಿ ಒಂದು ವಿಕೆಟಿಗೆ 47 ರನ್‌ ಪೇರಿಸಿತ್ತು.

Advertisement

ಮುಂದಿನದು ವಿರಾಟ್‌ ಕೊಹ್ಲಿ-ಗ್ಲೆನ್‌ ಮ್ಯಾಕ್ಸ್‌ವೆಲ್‌ ಜೋಡಿಯ ಆಟ. 10 ಓವರ್‌ ತನಕ ಇವರ ಬ್ಯಾಟಿಂಗ್‌ನಲ್ಲಿ ಯಾವುದೇ ಅಬ್ಬರ ಇರಲಿಲ್ಲ. ಅರ್ಧ ಹಾದಿ ಕ್ರಮಿಸು ವಾಗ 2 ವಿಕೆಟಿಗೆ ಕೇವಲ 63 ರನ್‌ ಒಟ್ಟುಗೂಡಿತ್ತು.

ನದೀಂ ಪಾಲಾದ 11ನೇ ಓವರಿನಲ್ಲಿ ಮ್ಯಾಕ್ಸ್‌ ವೆಲ್‌-ಕೊಹ್ಲಿ ಸಿಡಿದು ನಿಂತು 22 ರನ್‌ ಸೂರೆಗೈದರು. ಮ್ಯಾಕ್ಸಿ ಸತತ ಎಸೆತಗಳಲ್ಲಿ 2 ಸಿಕ್ಸರ್‌, ಒಂದು ಬೌಂಡರಿ ಬಾರಿಸಿದರು. ನಾಯಕ ವಿರಾಟ್‌ ಕೊಹ್ಲಿ 13ನೇ ಓವರ್‌ ತನಕ ನಿಂತು ರನ್‌ಗತಿ ಏರಿಸಲು ಪ್ರಯತ್ನಿಸಿದರು. ಈ ಹಂತದಲ್ಲಿ ದ್ವಿತೀಯ ಸ್ಪೆಲ್‌ ಬೌಲಿಂಗ್‌ ಆಕ್ರಮಣಕ್ಕಿಳಿದ ಜಾಸನ್‌ ಹೋಲ್ಡರ್‌ ದೊಡ್ಡ ಬೇಟೆಯಾಡಿದರು. ಕೊಹ್ಲಿ ಬ್ಯಾಟಿಗೆ ಟಾಪ್‌ ಎಜ್‌ ಆಗಿ ಚಿಮ್ಮಿದ ಚೆಂಡು ನೇರವಾಗಿ ವಿಜಯ್‌ ಶಂಕರ್‌ ಕೈ ಸೇರಿತು. ಕೊಹ್ಲಿ ಆಕ್ರೋಶದಿಂದಲೇ ಮೈದಾನ ತೊರೆದರು. ಆರ್‌ಸಿಬಿ ಕಪ್ತಾನನ ಗಳಿಕೆ 29 ಎಸೆತಗಳಿಂದ 33 ರನ್‌.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಸಿ ಶಂಕರ್‌ ಬಿ ಹೋಲ್ಡರ್‌ 33
ದೇವದತ್ತ ಪಡಿಕ್ಕಲ್‌ ಸಿ ನದೀಂ ಬಿ ಭುವನೇಶ್ವರ್‌ 11
ಶಾಬಾಜ್‌ ಅಹ್ಮದ್‌ ಸಿ ರಶೀದ್‌ ಬಿ ನದೀಂ 14
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ಸಾಹಾ ಬಿ ಹೋಲ್ಡರ್‌ 59
ಎಬಿ ಡಿ ವಿಲಿಯರ್ ಸಿ ವಾರ್ನರ್‌ ಬಿ ರಶೀದ್‌ 1
ವಾಷಿಂಗ್ಟನ್‌ ಸುಂದರ್‌ಸಿ ಪಾಂಡೆ ಬಿ ರಶೀದ್‌ 8
ಡಿ. ಕ್ರಿಸ್ಟಿಯನ್‌ ಸಿ ಸಿ ಸಾಹಾ ಬಿ ನಟರಾಜನ್‌ 1
ಕೈಲ್‌ ಜಾಮೀಸನ್‌ ಸಿ ಪಾಂಡೆ ಬಿ ಹೋಲ್ಡರ್‌ 12
ಹರ್ಷಲ್‌ ಪಟೇಲ್‌ ಔಟಾಗದೆ 0
ಇತರ 10
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 149
ವಿಕೆಟ್‌ ಪತನ: 1-19, 2-47, 3-91, 4-95, 5-105, 6-109, 7-136, 8-149.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌ 4-0-30-1
ಜಾಸನ್‌ ಹೋಲ್ಡರ್‌ 4-0-30-3
ಶಾಬಾಜ್‌ ನದೀಂ 4-0-36-1
ಟಿ. ನಟರಾಜನ್‌ 4-0-32-1
ರಶೀದ್‌ ಖಾನ್‌ 4-0-18-2

ಸನ್‌ರೈಸರ್ ಹೈದರಾಬಾದ್‌
ವೃದ್ಧಿಮಾನ್‌ ಸಾಹಾ ಸಿ ಮ್ಯಾಕ್ಸ್‌ವೆಲ್‌ ಬಿ ಸಿರಾಜ್‌ 1
ಡೇವಿಡ್‌ ವಾರ್ನರ್‌ ಸಿ ಕ್ರಿಸ್ಟಿಯನ್‌ ಬಿ ಕೈಲ್‌ 54
ಮನೀಷ್‌ ಪಾಂಡೆ ಸಿ ಪಟೇಲ್‌ ಬಿ ಶಾಬಾಜ್‌ 38
ಜಾನಿ ಬೇರ್‌ಸ್ಟೊ ಸಿ ಎಬಿಡಿ ಬಿ ಶಾಬಾಜ್‌ 12
ಅಬ್ದುಲ್‌ ಸಮದ್‌ ಸಿ ಮತ್ತು ಬಿ ಶಾಬಾಜ್‌ 0
ವಿಜಯ್‌ ಶಂಕರ್‌ ಸಿ ಕೊಹ್ಲಿ ಬಿ ಪಟೇಲ್‌ 3
ಜಾಸನ್‌ ಹೋಲ್ಡರ್‌ ಸಿ ಕ್ರಿಸ್ಟಿಯನ್‌ ಬಿ ಸಿರಾಜ್‌ 4
ರಶೀದ್‌ ಖಾನ್‌ ರನೌಟ್‌ 17
ಭುವನೇಶ್ವರ್‌ ಔಟಾಗದೆ 2
ಶಾಬಾಜ್‌ ನದೀಂ ಸಿ ಅಹ್ಮದ್‌ ಬಿ ಪಟೇಲ್‌ 0
ಟಿ. ನಟರಾಜನ್‌ ಔಟಾಗದೆ 0
ಇತರ 12
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 143
ವಿಕೆಟ್‌ ಪತನ: 1-13, 2-96, 3-115, 4-115, 5-116, 6-123, 7-130, 8-142, 9-142.
ಬೌಲಿಂಗ್‌: ಮೊಹಮ್ಮದ್‌ ಸಿರಾಜ್‌ 4-1-25-2
ಕೈಲ್‌ ಜಾಮೀಸನ್‌ 3-0-30-1
ವಾಷಿಂಗ್ಟನ್‌ ಸುಂದರ್‌ 2-0-14-0
ಯಜುವೇಂದ್ರ ಚಹಲ್‌ 4-0-29-0
ಹರ್ಷಲ್‌ ಪಟೇಲ್‌ 4-0-25-2
ಡೇನಿಯಲ್‌ ಕ್ರಿಸ್ಟಿಯನ್‌ 1-0-7-0
ಶಾಬಾಜ್‌ ಅಹ್ಮದ್‌ 2-0-7-3
ಪಂದ್ಯಶ್ರೇಷ್ಠ: ಗ್ಲೆನ್‌ ಮ್ಯಾಕ್ಸ್‌ವೆಲ್‌

Advertisement

Udayavani is now on Telegram. Click here to join our channel and stay updated with the latest news.

Next