ಥಾಣೆ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ಸಜ್ಜಾಗುತ್ತಿದೆ. ತಂಡವು ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಥಾಣೆಯ ದಾದೋಜಿ ಕೊಂಡದೇವ್ ಸ್ಟೇಡಿಯಂನಲ್ಲಿ ಆಡಿದೆ. ಅಭ್ಯಾಸ ಪಂದ್ಯಕ್ಕೆ ಫಾಫ್ ಡು ಪ್ಲೆಸಿಸ್ (ಎ ತಂಡ) ಮತ್ತು ಹರ್ಷಲ್ ಪಟೇಲ್ (ಟೀಮ್ ಬಿ) ಇಬ್ಬರು ನಾಯಕರಾಗಿದ್ದರು.
ಆರ್ ಸಿಬಿ ತಂಡವು ಈ ಬಾರಿ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಎದುರಿಸಲಿದೆ. ಆದ್ದರಿಂದ, ಅಭ್ಯಾಸ ಪಂದ್ಯಕ್ಕಾಗಿ, ಪಂಜಾಬ್ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಆಟಗಾರರನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿದೆ.
ಮೊದಲು ಬ್ಯಾಟಿಂಗ್ ಮಾಡಿ ಫಾಫ್ ಪಡೆ 20 ಓವರ್ ಗಳಲ್ಲಿ 215 ರನ್ ಗಳಿಸಿದರೆ, ಹರ್ಷಲ್ ಪಡೆಯು 213 ರನ್ ಗಳಿಸಿತು. ಈ ಮೂಲಕ ಮೊದಲ ಅಭ್ಯಾಸ ಪಂದ್ಯದಲ್ಲಿ ಫಾಫ್ ಪಡೆ ಎರಡು ರನ್ ಅಂತರದ ರೋಚಕ ಜಯ ಸಾಧಿಸಿತು.
ಇದನ್ನೂ ಓದಿ:
ಎ ತಂಡದ ಪರ ನಾಯಕ ಫಾಫ್ ಮತ್ತು ಯುವ ಆಟಗಾರ ಅನುಜ್ ರಾವತ್ ಆರಂಭ ಮಾಡಿದರು. ಫಾಫ್ 76 ರನ್ ಗಳಿಸಿದರೆ, ರಾವತ್ 25 ಎಸೆತಗಳಲ್ಲಿ 46 ರನ್ ಬಾರಿಸಿದರು. ರುದರ್ಫೋರ್ಡ್ ಅವರು 31 ಎಸೆತಗಳಲ್ಲಿ 59 ರನ್ ಸಿಡಿಸಿದರು. ಹರ್ಷಲ್ ಪಟೇಲ್ ಮೂರು ವಿಕೆಟ್ ಕಿತ್ತರೆ, ಕರ್ಣ್ ಶರ್ಮಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಹರ್ಷಲ್ ಪಡೆಯ ಕೊನೆಯ ಓವರ್ ತನಕ ಹೋರಾಡಿತು. ಬಿ ಟೀಮ್ ಪರ ಸುಯಾಶ್ ಪ್ರಭುದೇಸಾಯ್ ಕೇವಲ 46 ಎಸೆತಗಳಲ್ಲಿ 87 ರನ್ ಚಚ್ಚಿದರು. ದಿನೇಶ್ ಕಾರ್ತಿಕ್ ಅವರು 21 ಎಸೆತಗಲ್ಲಿ 49 ರನ್ ಗಳಿಸಿದರು. ಎ ತಂಡದ ಪರ ಆಕಾಶ್ ದೀಪ್ ನಾಲ್ಕು ವಿಕೆಟ್, ಹಸರಂಗ ಮತ್ತು ಶಹಾಬಾಜ್ ತಲಾ ಒಂದು ವಿಕೆಟ್ ಕಿತ್ತರು.