Advertisement

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಆರ್‌ಸಿಬಿ 45 ಕೋ.ರೂ. ನೆರವು

01:55 AM May 25, 2021 | Team Udayavani |

ಬೆಂಗಳೂರು : ಮಹಾಮಾರಿ ಕೊರೊನಾ ವಿರುದ್ಧದ ಹೋರಾಟಕ್ಕೆ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್‌ ಚಾಲೆಂಜರ್ ಬೆಂಗಳೂರಿನ ಮೂಲ ಸಂಸ್ಥೆಯಾಗಿರುವ “ಡಿಯಾಜಿಯೋ’ದ ಎಂಡಿ ಹಾಗೂ ಸಿಇಒ ಆನಂದ್‌ ಕೃಪಾಲು 45 ಕೋಟಿ ರೂ.ಗಳ ದೇಣಿಗೆ ಘೋಷಿಸಿದ್ದಾರೆ.

Advertisement

“ಭಾರತವಿಂದು ತೀವ್ರ ಕಷ್ಟಕ್ಕೆ ಸಿಲುಕಿದೆ. ಇಂತಹ ಸಮಯದಲ್ಲಿ ದೇಶದ ಪರವಾಗಿ ನಿಂತು ವೈರಸ್‌ ವಿರುದ್ಧ ಹೋರಾಡುವುದು ನಮ್ಮ ಜವಾಬ್ದಾರಿಯಾಗಿದೆ. ವೈದ್ಯಕೀಯ ಸವಲತ್ತು, ಬೆಡ್‌ ಮತ್ತು ಆಕ್ಸಿಜನ್‌ ಒದಗಿಸಲು ಈ ದೇಣಿಗೆ ನೀಡುತ್ತಿದ್ದೇವೆ’ ಎಂದು ಆನಂದ್‌ ಕೃಪಾಲು ಟ್ವೀಟ್‌ ಮಾಡಿದ್ದಾರೆ. ಇದಕ್ಕೂ ಮೊದಲು ಹೈದರಾಬಾದ್‌ ಫ್ರಾಂಚೈಸಿ 30 ಕೋಟಿ ರೂ. ನೆರವು ಒದಗಿಸಿತ್ತು.

ಬಿಸಿಸಿಐನಿಂದಲೂ ನೆರವು

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಕೋವಿಡ್‌-19 ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದೆ. 10 ಲೀಟರ್‌ ಸಾಮರ್ಥ್ಯದ 2,000 ಆಮ್ಲಜನಕ ಸಾಂದ್ರಕಗಳನ್ನು ನೀಡುವುದಾಗಿ ತನ್ನ ಅಧಿಕೃತ ಟ್ವಿಟರ್‌ನಲ್ಲಿ ತಿಳಿಸಿದೆ.

“ಕೋವಿಡ್‌-19 ಪಿಡುಗಿನ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲಿಸಿ 10 ಲೀಟರ್‌ಗಳ 2,000 ಆಮ್ಲಜನಕ ಸಾಂದ್ರಕಗಳನ್ನು ನೀಡಲಿದ್ದೇವೆ. ಮುಂದಿನ ಕೆಲವು ತಿಂಗಳ ಕಾಲ ಭಾರತದಾದ್ಯಂತ ಆಸ್ಪತ್ರೆಗಳಲ್ಲಿ ಆಮ್ಲಜನಕ ನೆರವು ಬೇಕಾದವರಿಗೆ ಈ ಸಾಂದ್ರಕಗಳನ್ನು ವಿತರಿಸಲಾಗುತ್ತದೆ. ತುರ್ತಾಗಿ ಆಮ್ಲಜನಕದ ಅಗತ್ಯವಿರುವವರಿಗೆ ಈ ನೆರವು ಸಿಗಲಿ ಎಂಬುದು ನಮ್ಮ ಆಶಯ’ ಎಂದು ಬಿಸಿಸಿಐ ತಿಳಿಸಿದೆ.

Advertisement

ಪಾಂಡ್ಯ ಸಹೋದರರಿಂದ ಮತ್ತೂಂದು ಕಂತಿನ ಸಹಾಯ
ಟೀಮ್‌ ಇಂಡಿಯಾದ ಆಲ್‌ರೌಂಡರ್‌ಗಳಾದ ಪಾಂಡ್ಯ ಸಹೋದರರು ಕೊರೊನಾ ಪರಿಹಾರಕ್ಕೆ ಮತ್ತೂಂದು ಕಂತಿನ ನೆರವು ಒದಗಿಸಿದ್ದಾರೆ. ಕೋವಿಡ್‌ ಕೇಂದ್ರಗಳಿಗೆ ಇನ್ನಷ್ಟು ಆಮ್ಲಜನಕದ ಸಾಂದ್ರಕಗಳನ್ನು ನೀಡಿದ್ದಾಗಿ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಕೃಣಾಲ್‌ ಮತ್ತು ಹಾರ್ದಿಕ್‌, “ಸೋಂಕಿತರು ಶೀಘ್ರ ಗುಣಮುಖರಾಗಲಿ ಎಂಬ ತುಂಬು ಮನದ ಹಾರೈಕೆಯೊಂದಿಗೆ ಕೋವಿಡ್‌ ಕೇಂದ್ರಗಳಿಗೆ ಹೊಸ ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸಿಕೊಡುತ್ತಿದ್ದೇವೆ. ನಾವು ಕಠಿನ ಯುದ್ಧದ ಮಧ್ಯಭಾಗದಲ್ಲಿದ್ದೇವೆ. ನಾವೆಲ್ಲರೂ ಜತೆಯಾಗಿ ಹೋರಾಡಿದರೆ ಮಾತ್ರ ಈ ಕೊರೊನಾ ಯುದ್ಧವನ್ನು ಗೆಲ್ಲಬಹುದು’ ಎಂದಿದ್ದಾರೆ.

ಇದಕ್ಕೂ ಮುನ್ನ ಪಾಂಡ್ಯ ಕುಟುಂಬ 200 ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next