Advertisement

2 ಅಂಕದ ಹುಡುಕಾಟದಲ್ಲಿ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌

11:42 PM Oct 30, 2020 | mahesh |

ಶಾರ್ಜಾ: ಶನಿವಾರದ “ಡಬಲ್‌ ಡೆಕ್ಕರ್‌’ ಐಪಿಎಲ್‌ ಹಣಾಹಣಿ ಕ್ರಿಕೆಟ್‌ ಅಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಇಲ್ಲಿ ಮೂರು ಪ್ರಮುಖ ತಂಡಗಳ ಭವಿಷ್ಯ ನಿರ್ಧಾವಾಗಲಿದೆ. ಡೆಲ್ಲಿ, ಆರ್‌ಸಿಬಿಯ ಪ್ಲೇ ಆಫ್‌ ಪಕ್ಕಾ ಆಗಲಿದೆಯೇ, ಹೈದರಾಬಾದ್‌ಗೆ ಮುಂದಿನ ಸುತ್ತಿನ ಟಿಕೆಟ್‌ ಸಾಧ್ಯವೇ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಹೀಗಾಗಿ ಈ ಕ್ಷಣಕ್ಕಾಗಿ ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ.

Advertisement

ಶನಿವಾರದ ಮೊದಲ ಪಂದ್ಯದಲ್ಲಿ ಡೆಲ್ಲಿ ಮತ್ತು ಈಗಾಗಲೇ ಮುಂದಿನ ಸುತ್ತಿಗೆ ನೆಗೆದಿರುವ ಮುಂಬೈ ತಂಡಗಳು ಎದುರಾಗಲಿವೆ. ಅಯ್ಯರ್‌ ಪಡೆಗೆ ಅದೃಷ್ಟ ಬೇಗನೇ ಒಲಿದೀತೇ ಎಂಬುದು ಮೊದಲ ಕೌತುಕ. ರಾತ್ರಿ ಆರ್‌ಸಿಬಿ ಮತ್ತು ಹೈದರಾಬಾದ್‌ ಅಖಾಡಕ್ಕೆ ಇಳಿಯಲಿವೆ. ಕೊಹ್ಲಿ ಪಡೆ ಗೆದ್ದರೆ ಪ್ಲೇ ಆಫ್‌ ಪ್ರವೇಶ ಅಧಿಕೃತಗೊಳ್ಳಲಿದೆ. ಹೀಗಾಗಿ ಬೆಂಗಳೂರು ತಂಡದ ಅಭಿಮಾನಿಗಳು ತೀವ್ರ ಉತ್ಸಾಹದಲ್ಲಿದ್ದಾರೆ.

ಆತಂಕ ಮೂಡಿಸಿದ ಸತತ ಸೋಲು
ಆರ್‌ಸಿಬಿಯ ಪ್ಲೇ ಆಫ್‌ ಅಧಿಕೃತಗೊಳ್ಳು ವುದೊಂದು ಬಾಕಿ. ಹೈದರಾಬಾದನ್ನು ಮಣಿಸಿದರೆ ನಿಶ್ಚಿಂತೆಯಿಂದ ಇರಬಹುದು. ಆದರೆ ಚೆನ್ನೈ ಮತ್ತು ಮುಂಬೈ ವಿರುದ್ಧ ಅನುಭವಿಸಿದ ಸತತ ಸೋಲು ಆತಂಕ ಮೂಡಿಸಿದೆ. ಆರಂಭಿಕ ಪಂದ್ಯ ಗಳಲ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸಿ ತಂಡಕ್ಕೆ ಜಯ ತಂದುಕೊಡುತ್ತಿದ್ದ ವಿರಾಟ್‌ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ ಮಹತ್ವದ ಪಂದ್ಯದ ವೇಳೆ ಕೈಕೊಡುತ್ತಿ ದ್ದಾರೆ. ಇಲ್ಲವಾದರೆ ಮುಂಬೈ ಎದುರಿನ ಹಿಂದಿನ ಪಂದ್ಯದಲ್ಲಿ ಇನ್ನಷ್ಟು ರನ್‌ ಪೇರಿಸಿ ಮೇಲುಗೈ ಸಾಧಿಸಬಹುದಿತ್ತು. ಪ್ರತೀ ಪಂದ್ಯದಲ್ಲೂ ಪಡಿಕ್ಕಲ್‌ ಅವರನ್ನೇ ನಂಬಿ ಕೂರುವುದು ಸರಿಯಲ್ಲ. ಆರಂಭಿಕನ ಸ್ಥಾನಕ್ಕೆ ಆರನ್‌ ಫಿಂಚ್‌ ಮರಳುವ ಸಾಧ್ಯತೆ ಇದೆ. ಆದರೆ ಅವರ ಬ್ಯಾಟಿನಿಂದ ರನ್‌ ಹರಿದು ಬರುವುದು ತೀರಾ ಅಗತ್ಯ. 4ನೇ ಕ್ರಮಾಂಕದ ಬಳಿಕ ಆರ್‌ಸಿಬಿ ಬ್ಯಾಟಿಂಗ್‌ ಬಲಿಷ್ಠವಾಗಿಲ್ಲ ಎಂಬುದನ್ನು ಒಪ್ಪಲೇಬೇಕಾಗುತ್ತದೆ. ಬೌಲಿಂಗ್‌ ಇನ್ನಷ್ಟು ಹರಿತಗೊಳ್ಳಬೇಕಿದೆ.

ಹೈದಾರಾಬಾದ್‌ ಮೇಲೆ ಒತ್ತಡ
ವಾರ್ನರ್‌ ಸಾರಥ್ಯದ ಹೈದರಾಬಾದ್‌ಗೆ ಆರ್‌ಸಿಬಿ ವಿರುದ್ಧ ಗೆಲುವು ಅನಿವಾರ್ಯವಾಗಿದೆ. ಇಲ್ಲಿ ಎಡವಿದರೆ ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಬೀಳಲಿದೆ. ಈ ನಿಟ್ಟಿನಲ್ಲಿ ಹೈದರಾಬಾದ್‌ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಬೇಕಿದೆ. ಸದ್ಯ 10 ಅಂಕವಿದ್ದರೂ ಹೈದರಾಬಾದ್‌ ರನ್‌ರೇಟ್‌ ಉತ್ತಮವಾಗಿದೆ. ಇನ್ನುಳಿದ ಎರಡೂ ಪಂದ್ಯ ಗೆದ್ದರೆ ಅಂಕ 14ಕ್ಕೆ ಏರಲಿದೆ. ಜತೆಗೆ ಉಳಿದ ಪಂದ್ಯಗಳ ಫಲಿತಾಂಶಗಳೂ ಗಣನೆಗೆ ಬರಲಿದೆ. ಬೇರ್‌ಸ್ಟೊ ಬದಲಿಗೆ ಆರಂಭಿಕನಾಗಿ ಕಣಕ್ಕಿಳಿದ ಸಾಹಾ ಇದರಲ್ಲಿ ಭರಪೂರ ಯಶಸ್ಸು ಕಂಡಿದ್ದಾರೆ. ವಾರ್ನರ್‌, ಪಾಂಡೆ ಕೂಡ ಬ್ಯಾಟಿಂಗ್‌ ಲಯಕ್ಕೆ ಮರಳಿದ್ದಾರೆ. ಬೌಲಿಂಗ್‌ ವಿಭಾಗ ಘಾತಕವಾಗಿ ಕಾಣುತ್ತಿದೆ. ಅಫ್ಘಾನ್‌ ಸ್ಪಿನ್ನರ್‌ ರಶೀದ್‌ ಖಾನ್‌ ಎಸೆತಗಳು ತೀವ್ರ ಹರಿತಗೊಂಡಿವೆ. ಜತೆಗೆ ಜಾಸನ್‌ ಹೋಲ್ಡರ್‌, ಸಂದೀಪ್‌ ಶರ್ಮ, ಟಿ. ನಟರಾಜನ್‌ ಕೂಡ ಕರಾರುವಾಕ್‌ ಬೌಲಿಂಗ್‌ ನಡೆಸುತ್ತಿದ್ದಾರೆ.

ಡೆಲ್ಲಿಗೂ ಬೇಕಿದೆ ಎರಡು ಅಂಕ
ಡೆಲ್ಲಿ ಕ್ಯಾಪಿಟಲ್ಸ್‌ ಕೂಡ ಆರ್‌ಸಿಬಿಯಂತೆ 2 ಅಂಕಗಳ ಹುಡುಕಾಟದಲ್ಲಿದೆ. ಆದರೆ ಆರಂಭಿಕ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಅಯ್ಯರ್‌ ಬಳಗವೀಗ ಸತತವಾಗಿ ಎಡವುತ್ತಿರುವುದು ವಿಪರ್ಯಾಸವೇ ಸರಿ. ಮುಂಬೈ ಸವಾಲು ಖಂಡಿತವಾಗಿಯೂ ಸುಲಭದ್ದಲ್ಲ. ರೋಹಿತ್‌ ಗೈರಲ್ಲೂ ಅದು ಗೆಲ್ಲುತ್ತ ಬಂದಿದೆ. ಬ್ಯಾಟಿಂಗ್‌ ಲೈನ್‌ಅಪ್‌ ಸೂಪರ್ಬ್. ಬೌಲಿಂಗ್‌ ಡಿಪಾರ್ಟ್‌ ಮೆಂಟ್‌ ಬಗ್ಗೆ ಎರಡು ಮಾತಿಲ್ಲ. ಇದನ್ನೆಲ್ಲ ಗಮನಿಸುವಾಗ ಮುಂಬೈ ತನ್ನ ಅಂಕವನ್ನು 18ಕ್ಕೆ ಏರಿಸಿಕೊಂಡರೂ ಅಚ್ಚರಿ ಇಲ್ಲ ಎನಿಸುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next