ನವದೆಹಲಿ: ಈಗಾಗಲೇ 500 ರೂ., 200 ರೂ. 100 ರೂ. 50 ರೂಪಾಯಿ ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬಂದ ಬೆನ್ನಲ್ಲೇ ಇದೀಗ ಆರ್ ಬಿಐ(ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಶೀಘ್ರದಲ್ಲಿಯೇ 20 ರೂ. ಮುಖಬೆಲೆಯ ಹೊಸ ನೋಟನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.
20 ರೂಪಾಯಿ ಹೊಸ ನೋಟು ತಿಳಿಹಸಿರು, ಹಳದಿ ಮಿಶ್ರಿತ ಬಣ್ಣವನ್ನು ಹೊಂದಿದ್ದು, ಇದು ಕೂಡಾ ಮಹಾತ್ಮ ಗಾಂಧಿ ಸರಣಿಯದ್ದಾಗಿದೆ.
20ರ ಕರೆನ್ಸಿಯಲ್ಲಿ ಹೊಸತನ:20 ರೂ. ಮುಖಬೆಲೆಯ ಹೊಸ ನೋಟಿನ ಹಿಂಭಾಗದಲ್ಲಿ ಎಲ್ಲೋರಾ ಗುಹೆ, ಮುಂಭಾಗದಲ್ಲಿ ಮಹಾತ್ಮ ಗಾಂಧಿ ಫೋಟೋ, ಮಹಾತ್ಮಗಾಂಧಿ ಬಲಭಾಗದಲ್ಲಿ ಅಶೋಕ ಕಂಬದ ಚಿತ್ರ ಕೂಡಾ ಇದೆ. ಆರ್ ಬಿಐ ಲಾಂಛನದೊಂದಿಗೆ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಸಹಿ ಇದೆ. 20 ರೂ. ಎಂಬ ಸಂಖ್ಯೆಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲ 20 ರೂ. ಅನ್ನು ಎಲೆಕ್ಟ್ರೋಟೈಪ್ ವಾಟರ್ ಮಾರ್ಕ್ ನ್ನು ಒಳಗೊಂಡಿದೆ.ಅಲ್ಲದೇ ಈ ಹಿಂದಿನ 20 ರೂ. ಮುಖಬೆಲೆಯ ಹಳೆ ನೋಟು ಚಲಾವಣೆಯಲ್ಲಿರಲಿದೆ. ಇದಕ್ಕೆ ಯಾವುದೇ ಕಾನೂನಿನ ಅಡ್ಡಿ ಇರುವುದಿಲ್ಲ ಎಂದು ಆರ್ ಬಿಐ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.