ಹೊಸದಿಲ್ಲಿ : 200 ರೂ. ಹೊಸ ಕರೆನ್ಸಿ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಇದೇ ಆಗಸ್ಟ್ ಅಂತ್ಯದಲ್ಲಿ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ ಚಲಾವಣೆಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಮೂಲಗಳನ್ನು ಉಲ್ಲೇಖೀಸಿ ಇಕಾನಮಿಕ್ ಟೈಮ್ಸ್ ವರದಿ ಮಾಡಿದೆ.
ಕೆಳ ಮೌಲ್ಯದ ನೋಟುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿರುವ 200 ರೂ. ನೋಟುಗಳನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸರಕಾರ ಆರ್‌ಬಿಐ ಗೆ ಹಸಿರು ನಿಶಾನೆ ತೋರಿದೆ.
ಈ ಮೊದಲಿನ ವರದಿಗಳ ಪ್ರಕಾರ ಆರ್‌ಬಿಐ, ಹಣಕಾಸು ಸಚಿವಾಲಯದೊಡನೆ ಸಮಾಲೋಚಿಸಿ, ಮುಂದಿನ ವರ್ಷ ಮಾರ್ಚ್ ವೇಳಗೆ 200 ರೂ. ನೋಟುಗಳನ್ನು ಮಾರುಕಟ್ಟೆ ಚಲಾವಣೆಗೆ ಬಿಡುಗಡೆ ಮಾಡಲು ಬಯಸಿತ್ತು. ಆದರೆ ಈಗ 7 ತಿಂಗಳ ಮುನ್ನವೇ 200 ರೂ ನೋಟು ಬಿಡುಗಡೆಗೆ ಸರಕಾರ ಆರ್‌ಬಿಐ ಗೆ ಗ್ರೀನ್ ಸಿಗ್ನಲ್ ನೀಡಿದೆ.
ಇದೇ ವೇಳೆ ಕೇಂದ್ರ ವಿತ್ತ ಸಚಿವ ಅರುಣ್ ಜೇತ್ಲಿ ಅವರು, 2,000 ರೂ. ಕರೆನ್ಸಿ ನೋಟುಗಳನ್ನು ಸರಕಾರ ನಿಷೇಧಿಸುವುದಿಲ್ಲ; ಅವು ಇತರ ನೋಟುಗಳಂತೆ ಚಲಾವಣೆಯಲ್ಲಿ ಮುಂದುವರಿಯುತ್ತವೆ ಎಂದು ಸ್ಪಷ್ಟನೆ ನೀಡುವ ಮೂಲಕ ಜನಮನದಲ್ಲಿರುವ ಭೀತಿಯನ್ನು ನಿವಾರಿಸಿದ್ದಾರೆ.
ನಗದು ಹಣವನ್ನು ಕೂಡಿಡುವ ಉದ್ದೇಶದಿಂದ ಜನರು 2,000 ರೂ.ಗಳನ್ನು ತಮ್ಮಲ್ಲಿ ಸಂಗ್ರಹಿಸಿಡುತ್ತಿದ್ದಾರೆ; ಹಾಗಾಗಿ ಸರಕಾರ ಸದ್ಯದಲ್ಲೇ 2,000 ರೂ. ನೋಟುಗಳನ್ನು ಕೂಡ ಅಮಾನ್ಯ ಮಾಡಲಿದೆ ಎಂಬ ವದಂತಿಗಳು ಹರಡಿರುವ ಹಿನ್ನೆಲೆಯಲ್ಲಿ ಜೇತ್ಲಿ ಈ ಸ್ಪಷ್ಟನೆ ನೀಡಿದ್ದಾರೆ. ಆದರೆ 2,000 ರೂ. ನೋಟುಗಳ ಮುದ್ರಣವನ್ನು ಸರಕಾರ ನಿಲ್ಲಿಸಿದೆ ಎಂಬ ವರದಿಗಳಿಗೆ ಅವರು ಪ್ರತಿಕ್ರಿಯೆ ನೀಡಿಲ್ಲ.
ಕಳೆದ ವರ್ಷ ನವೆಂಬರ್‌ನಲ್ಲಿ ಸರಕಾರ 500 ರೂ. ಮತ್ತು 1,000 ರೂ. ನೋಟುಗಳನ್ನು ಅಮಾನ್ಯಮಾಡಿತ್ತು.