ನವದೆಹಲಿ:ನೋಟು ನಿಷೇಧದ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಶೇ.99ರಷ್ಟು ಹಳೇ ನೋಟುಗಳು ವಾಪಸ್ ಬಂದಿದೆ. ಆದರೆ 1000 ಸಾವಿರ ರೂ. ಮುಖಬೆಲೆಯ 8.9 ಕೋಟಿ ರೂಪಾಯಿಯಷ್ಟು ಹಳೇ ನೋಟುಗಳು ವಾಪಸ್ ಬಂದಿಲ್ಲ ಎಂದು ತಿಳಿಸಿದೆ.
ಆರ್ ಬಿಐ ಬಿಡುಗಡೆ ಮಾಡಿರುವ ಅಂಕಿಅಂಶದ ಪ್ರಕಾರ, ಹಳೇ ನೋಟುಗಳ ಒಟ್ಟು ಮೊತ್ತ 15.44 ಲಕ್ಷ ಕೋಟಿ ರೂಪಾಯಿ. ಇದರಲ್ಲಿ 15.28 ಲಕ್ಷ ಕೋಟಿ ರೂಪಾಯಿಯಷ್ಟು ಹಳೇ ನೋಟುಗಳನ್ನು ಬ್ಯಾಂಕ್ ವಾಪಸ್ ಪಡೆದಿದೆ ಎಂದು ವಿವರಿಸಿದೆ.
2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಪ್ಪು ಹಣವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ 1000 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು.
1000 ರೂ. ಮುಖಬೆಲೆಯ 8,900 ಕೋಟಿ ರೂಪಾಯಿ ಮೊತ್ತದ ಹಳೇ ನೋಟುಗಳು ವಾಪಸ್ ಬಂದಿಲ್ಲ. ನೋಟು ನಿಷೇಧದ ಬಳಿಕ ಹೊಸ ನೋಟು ಮುದ್ರಣದ ವೆಚ್ಚ ಕೂಡಾ ಅಧಿಕವಾಗಿದೆ. 2016ರಲ್ಲಿ ನೋಟು ಮುದ್ರಣದ ವೆಚ್ಚ 3,421 ಕೋಟಿ ರೂಪಾಯಿ ಆಗಿದ್ದರೆ, 2017ರಲ್ಲಿ 7, 965 ಕೋಟಿ ರೂಪಾಯಿ ಆಗಿರುವುದಾಗಿ ತಿಳಿಸಿದೆ.
ಹಳೇ 1000 ರೂ. ಮುಖಬೆಲೆಯ 1,77, 195 ನಕಲಿ ನೋಟು ಪತ್ತೆ. ಹಳೇ 500 ರೂ. ಮುಖಬೆಲೆಯ 3,17,567 ನಕಲಿ ನೋಟು ಪತ್ತೆ. ಕಳೆದ ಬಾರಿಗಿಂತ ಶೇ.20.4ರಷ್ಟು ನಕಲಿ ನೋಟುಗಳ ಪತ್ತೆಯಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದೆ.